ಕೂದಲು ಇದ್ರೆ ತಾನೆ ಬೋಳಿಸಿಕೊಳ್ಳೋದು : ಸಿದ್ದು ಲೇವಡಿ
ಬೆಂಗಳೂರು, ಮೇ 18 : ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಎತ್ತಿನಹೊಳೆ ಯೋಜನೆ ಬಗ್ಗೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಜಟಾಪಟಿ ಆರಂಭವಾಗಿದೆ. '3 ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿದರೆ ತಲೆ ಬೋಳಿಸಿಕೊಳ್ಳುತ್ತೇನೆ' ಎಂದು ಎಚ್ಡಿಕೆ ಹಾಕಿದ್ದ ಸವಾಲಿಗೆ ಸಿದ್ದರಾಮಯ್ಯ ವ್ಯಂಗ್ಯವಾಗಿ ತಿರುಗೇಟು ಕೊಟ್ಟಿದ್ದಾರೆ.
ಶನಿವಾರ ಕೋಲಾರಕ್ಕೆ ಭೇಟಿ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, 'ಕಾಂಗ್ರೆಸ್‍ನಿಂದ ಎತ್ತಿನಹೊಳೆ ಯೋಜನೆ ಯಶಸ್ವಿ ಮಾಡಲು ಸಾಧ್ಯವಿಲ್ಲ. ಮೂರು ವರ್ಷದಲ್ಲಿ ಯೋಜನೆ ಪೂರ್ಣಗೊಂಡರೆ ತಲೆ ಬೋಳಿಸಿಕೊಳ್ಳುತ್ತೇನೆ' ಎಂದು ಘೋಷಿಸಿದ್ದರು. [ಮೂರು ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣ]
ಮೇ 14ರಂದು ಎತ್ತಿನಹೊಳೆ ಯೋಜನೆ ಕುರಿತು ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಯೋಜನೆ ಜಾರಿಯಾದರೆ ಅಗತ್ಯ ಪ್ರಮಾಣದಲ್ಲಿ ನೀರು ದೊರಕಲಿದೆ. ಮೂರು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ' ಎಂದು ಘೋಷಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕುಮಾರಸ್ವಾಮಿ ತಲೆ ಬೋಳಿಸಿಕೊಳ್ಳುವ ಮಾತನ್ನಾಡಿದ್ದರು. ಇದಕ್ಕೆ ಸಿದ್ದರಾಮಯ್ಯ ವ್ಯಂಗ್ಯವಾಗಿ ತಿರುಗೇಟು ಕೊಟ್ಟು ಜಟಾಪಟಿ ಮುಂದುವರೆಸುವ ಸೂಚನೆ ನೀಡಿದ್ದಾರೆ. ಏನಿದು ಮಾಜಿ, ಹಾಲಿ ಮುಖ್ಯಮಂತ್ರಿಗಳ ಜಟಾಪಟಿ ಚಿತ್ರಗಳಲ್ಲಿ ನೋಡಿ...

ಏನಿದು ಎತ್ತಿನಹೊಳೆ ಯೋಜನೆ?
ಬಯಲುಸೀಮೆ ಜಿಲ್ಲೆಗಳಿಗೆ ಪಶ್ಚಿಮಘಟ್ಟದ ನದಿಗಳಿಂದ ನೀರು ತರುವ ಯೋಜನೆ ಇದಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಈ ಯೋಜನೆ ಮೂಲಕ ನೀರು ಲಭ್ಯವಾಗಲಿದೆ. ಯೋಜನೆಗೆ 12,912 ಕೋಟಿ ವೆಚ್ಚದ ಪರಿಷ್ಕೃತ ಸಮಗ್ರ ಯೋಜನಾ ವರದಿ ಸಿದ್ಧಗೊಂಡಿದೆ. ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಸಿದ್ದರಾಮಯ್ಯ ಹೇಳುವುದೇನು?
ಮೇ 14ರಂದು ಎತ್ತಿನಹೊಳೆ ಯೋಜನೆ ಕುರಿತು ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯೋಜನೆ ಜಾರಿಯಾದರೆ ಅಗತ್ಯ ಪ್ರಮಾಣದಲ್ಲಿ ನೀರು ದೊರಕಲಿದೆ. ಮೂರು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿದ್ದರು. ಯೋಜನೆ ಕುರಿತು ಅಪಪ್ರಚಾರ ಮಾಡಬೇಡಿ, ಯೋಜನೆಯಲ್ಲಿ ಅಗತ್ಯ ಪ್ರಮಾಣದಲ್ಲಿ ನೀರು ಸಿಗಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ' ಎಂದು ಸಿದ್ದರಾಮಯ್ಯ ಹೇಳಿದ್ದರು.

ಕುಮಾರಸ್ವಾಮಿ ಹೇಳಿದ್ದೇನು?
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, 'ಗುತ್ತಿಗೆದಾರರಿಗೆ ಮುಂಗಡ ಹಣ ನೀಡಲಿಕ್ಕೆ ಎತ್ತಿನಹೊಳೆ ಯೋಜನೆಯನ್ನು ಕಾಂಗ್ರೆಸ್‍ನವರು ಆರಂಭಿಸಿದರು. ಆದರೆ, ಕಾಂಗ್ರೆಸ್‍ನಿಂದ ಎತ್ತಿನಹೊಳೆ ಯಶಸ್ವಿ ಮಾಡಲು ಸಾಧ್ಯವಿಲ್ಲ. ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಿದರೆ ನಾನು ತಲೆ ಬೋಳಿಸಿಕೊಳ್ಳುತ್ತೇನೆ' ಎಂದು ಘೋಷಿಸಿದ್ದಾರೆ.

ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.'ಅವರ ತಲೆಯಲ್ಲಿ ಕೂದಲೇ ಇಲ್ಲ ಇನ್ನು ತಲೆ ಬೋಳಿಸಿಕೊಂಡು ಏನು ಪ್ರಯೋಜನ?' ಎಂದು ಸಿದ್ದರಾಮಯ್ಯ ಎಚ್‍ಡಿಕೆ ಅವರನ್ನು ಲೇವಡಿ ಮಾಡಿದ್ದಾರೆ.

ಯೋಜನೆಗೆ ಶಂಕುಸ್ಥಾಪನೆಯಾಗಿದೆ
2014ರ ಮಾ.3ರಂದು ತೀವ್ರ ಪ್ರತಿಭಟನೆ, ಬಂದ್ ಮುಂತಾದವುಗಳ ನಡುವೆಯೇ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ಮಾಡಿದ್ದರು. ಈ ಯೋಜನೆಗೆ ಸುಮಾರು 12,912 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications