ರೈತರ ಸಾಲ ಮನ್ನಾ ಮಾಡಿ ಎಂದು ಯಡಿಯೂರಪ್ಪ ಪಟ್ಟು: ಸಿದ್ದರಾಮಯ್ಯ ಏನಂದ್ರು?
ಮೈಸೂರು, ಮೇ 11: ರಾಜ್ಯದಲ್ಲಿ ಬರಗಾಲ ಇರುವುದರಿಂದ ರೈತರ ಸಾಲ ಮನ್ನಾ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರು ಬಿ ಎಸ್ ಯಡಿಯೂರಪ್ಪ ಅವರು ಆಗ್ರಹಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.
ಈ ಕುರಿತು ಶನಿವಾರ ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಹಿಂದೆ ಸಾಲ ಮನ್ನಾ ಮಾಡಿ ಎಂದಾಗ ನಮ್ಮ ಬಳಿ ಪ್ರಿಂಟಿಂಗ್ ಮಶೀನ್ ಇಲ್ಲ ಎಂದಿದ್ದರು. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆ ವಿರೋಧಪಕ್ಷಗಳು ನನ್ನನ್ನು ಸಮಾಧಿ ಮಾಡಲು ಹೊರಟಿವೆ. ನೀವು ನನ್ನನ್ನು ಕಾಪಾಡಬೇಕು ಎಂದು ಜನತೆಯಲ್ಲಿ ಮಾಡಿರುವ ಮನವಿಗೆ ಪ್ರತಿಕ್ರಿಯೆ ನೀಡಿದ ಅವರು, ವಿರೋಧ ಪಕ್ಷದವರು ಯಾರನ್ನೂ ಸಮಾಧಿ ಮಾಡುವುದಿಲ್ಲ ಪ್ರಧಾನಿಗಳನ್ನು ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನರೇಂದ್ರ ಮೋದಿ ಹತ್ತು ವರ್ಷ ಪ್ರಧಾನಿಗಳಾಗಿ ಬಡವರ ಪರವಾಗಿ ಏನೂ ಮಾಡಿಲ್ಲ ಎನ್ನುವುದು ಹಾಗು ಸುಳ್ಳಿನ ಸರದಾರ ಎನ್ನುವುದು ನಮ್ಮ ಆರೋಪ. ಜನರಿಗೆ ನೀಡಿದ್ದ ಯಾವ ಯಾವ ಭರವಸೆಗಳನ್ನು ಈಡೇರಿಸಿಲ್ಲ. ರಾಜಕೀಯವಾಗಿ ಅವರನ್ನು ಸೋಲಿಸಬೇಕೆನ್ನುವುದು ವಿರೋಧ ಪಕ್ಷಗಳ ಗುರಿ. ಏಕೆಂದರೆ ಈ ದೇಶ ಆರ್ಥಿಕ ಹಾಗೂ ಬಡವರ ಅಭಿವೃದ್ಧಿ ಆಗಿಲ್ಲ ಎಂದರು.
ಪ್ರಧಾನಿಗಳು ಸೋಲುತ್ತೇವೆಂದು ಹತಾಶರಾಗಿ ಈ ರೀತಿ ಮಾತನಾಡು ತ್ತಿದ್ದಾರೆ. ಅವರ ಭಾವನಾತ್ಮಕ ಆಟ ಜನರಿಗೆ ಗೊತ್ತಾಗಿದೆ. ಅವರು ಸುಳ್ಳು ಹೇಳುವುದು, ಭಾವನಾತ್ಮಕವಾಗಿ ಶೋಷಣೆ ಮಾಡುವುದು ಜನರಿಗೆ ಗೊತ್ತಾಗಿದೆ. ಜನರಿಗೆ ಗೊತ್ತಾದ ಮೇಲೆ ಪುನ: ಅದೇ ತಪ್ಪನ್ನು ಮಾಡುವುದಿಲ್ಲ. ಮೇಲಕ್ಕೇರಿದವರು ಕೆಳಕ್ಕೆ ಇಳಿಯಲೇಬೇಕು ಎಂದರು.












Click it and Unblock the Notifications