Childrens: ಕಾಣೆಯಾದ 'ಮಕ್ಕಳು' ಮನೆಗೆ ಹಿಂದಿರುಗಿದ ಬಳಿಕ 'ಪೋಷಕರು' ಏನು ಮಾಡಬೇಕು? ಮಾಹಿತಿ ತಿಳಿಯಿರಿ
ಬೆಂಗಳೂರು, ಫೆಬ್ರವರಿ 06: ಮಕ್ಕಳು ಕಳೆದುಹೋದ ಸಂದರ್ಭದಲ್ಲಿ ಪೋಷಕರು, ಇಡೀ ಕುಟುಂಬಸ್ಥರು ಆತಂಕಗೊಳ್ಳುವುದು ಸಹಜ. ಆದರೆ ಕಳೆದುಕೊಂಡ ಮಕ್ಕಳು ಮರಳಿ ಸಿಕ್ಕರೆ ಪೋಷಕರ ಕಣ್ಣೀರೆಲ್ಲ ಮಾಯವಾಗಿ ಸಂತಸ ಕಡಲಲ್ಲಿ ಮುಳುಗಿ ಬಿಡುತ್ತಾರೆ. ಆದರೆ ಮಕ್ಕಳು ಮನಗೆ ವಾಪಾಸ್ ಬಂದ ಮೇಲೂ ಪೋಷಕರು ಜವಾಬ್ದಾರಿ ನಿರ್ವಹಿಸಬೇಕಿದೆ. ಹಾಗಾದರೆ ಪೋಷಕರು ಇಂತಹ ಸಂದರ್ಭದಲ್ಲಿ ಏನೇನು? ಮಾಡಬೇಕು ಎಂಬ ಪಟ್ಟಿ ಇಲ್ಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿಗೆ ನಗರದಿಂದ ಬಾಲಕನೊಬ್ಬ ಕಾಣೆಯಾಗಿದ್ದ. ಆ ಬಾಲಕನನ್ನು ಹೈದರಾಬಾದಿನಲ್ಲಿ ರಕ್ಷಣೆ ಮಾಡಲಾಯಿತು. ಈ ಬಾಲಕನ ಪೋಷಕರು ಮಗ ಕಾಣೆಯಾಗಿದ್ದಾಗ ಆತನ ವಿವರಗಳನ್ನು ಬರೆದು ತಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಪುಟ್ಟ ಪೋಸ್ಟರ್ ಮಾಡಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದರು.

ಜಾಲತಾಣಗಳಲ್ಲಿ ಓಡಾಡುತ್ತವೇ ಕಾಣೆಯಾದ ಪೋಸ್ಟರ್
ಸಾಮಾಜಿಕ ಕಳಕಳಿಯುಳ್ಳ ಹಲವಾರು ಜನ ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಪ್ ಗಳಲ್ಲಿ ಬಾಲಕ ಕಾಣೆಯಾಗಿರುವ ವಿಚಾರವನ್ನು ವೈರಲ್ ಮಾಡಿದ್ದರು. ಬಳಿಕ ಆ ಬಾಲಕನನ್ನು ರಕ್ಷಣೆ ಮಾಡಲಾಯಿತು. ಆದರೆ ಬಾಲಕನ ಫೋಟೋ ಇರುವ ಪೋಸ್ಟರ್ ಇನ್ನೂ ಸಾಮಾಜಿಕ ಜಾಲತಾಣಗಲ್ಲಿ ಓಡಾಡುತ್ತಿದೆ.
ಕಾಣೆಯಾದ ಮಕ್ಕಳು ಮನೆಗೆ ಹಿಂದಿರುಗಿದ ನಂತರ ಸಂತೋಷದಲ್ಲಿ ಪೋಷಕರು ಕೆಲವು ಪ್ರಮುಖ ಕೆಲಸಗಳನ್ನು ಮರೆತು ಬಿಡುತ್ತಾರೆ. ಇದು ಅವರ ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿ ಬಿಡುತ್ತದೆ . ಹಾಗಾಗಿ ಪೋಷಕರು ತಮ್ಮ ಮಕ್ಕಳ ಹಿತದೃಷ್ಟಿಯಿಂದ ಕೆಳಗಿನ ಅನುಸರಣೆಯನ್ನು ಮಾಡಲೇ ಬೇಕಾಗುತ್ತದೆ ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ನಿರ್ದೇಶಕ ನಾಗಸಿಂಹ ಜಿ.ರಾವ್ ತಿಳಿಸಿದ್ದಾರೆ.

ಪೋಷಕರು ಮಾಡಬೇಕಾದ ಕೆಲಸಗಳ ಪಟ್ಟಿ
* ಮಕ್ಕಳು ಕಾಣೆಯಾದಾಗ ಸಿದ್ದ ಪಡಿಸಿದ ಪೋಸ್ಟರ್ ನಂತೆಯೇ ಮಗ ಅಥವಾ ಮಗಳು ಹಿಂದುರಿಗಿ ಬಂದಿದ್ದಾರೆ ಎಂಬ ಪೋಸ್ಟರ್ ಸಿದ್ದಪಡಿಸಿ ಸಾಮಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕು.
* ಹೊಸದಾಗಿ ಸಿದ್ದಡಿಸಿದ ಪೋಸ್ಟರ್ ನಲ್ಲಿ ಮಕ್ಕಳ ಭಾವಚಿತ್ರ ಇರಬಾರದು. ಮಕ್ಕಳು ಕಾಣೆಯಾದಾಗ ಅವರ ಭಾವ ಚಿತ್ರ ಉಪಯೋಗಿಸಿದರೆ ಇಲ್ಲವೇ ಹೊಸ ಪೋಸ್ಟ್‌ನಲ್ಲಿ ಮತ್ತೆ ಉಪಯೋಗಿಸಿದರೆ ಅದು ಮಕ್ಕಳ ಖಾಸಗೀತನದ ಉಲ್ಲಂಘನೆ ಆಗುತ್ತದೆ.
* ಮಕ್ಕಳು ಮನೆ ಬಿಟ್ಟು ಹೋಗಿರುವ ಸುದ್ದಿಯನ್ನು ಹಲವು ಮಾಧ್ಯಮಗಳು ಹಲವು ರೀತಿಯಲ್ಲಿ ವರದಿ ಮಾಡಿರುತ್ತವೆ. ಈ ವಿಚಾರಗಳ ಬಗ್ಗೆ ಮನೆಗೆ ಹಿಂದಿರುಗಿದ ಮಕ್ಕಳಿಗೆ ತಿಳಿಸಿ ಆತ್ಮವಿಶ್ವಾಸ ತುಂಬುವುದು ಅನಿವಾರ್ಯ. ಕೆಲವು ಮಕ್ಕಳಿಗೆ ತಮ್ಮದೇ ಬಗೆಗಿನ ಸುದ್ದಿ ಓದಿ ಮಕ್ಕಳಿಗೆ ಬೇಸರವಾಗಲೂಬಹುದು.
* ಸಾಮಜಿಕ ಜಾಲತಾಣ, ಮಾಧ್ಯಮಗಳಲ್ಲಿ ನಿಮ್ಮ ಕಾಣೆಯಾದ ಮಗ / ಮಗಳ ಫೋಟೋ ಪ್ರಕಟವಾಗಿ ಹಲವು ಜನ ನಿಮ್ಮ ಮಕ್ಕಳನ್ನು ಗುರುತಿಸುತ್ತಾರೆ. ನಿಮ್ಮ ಮಕ್ಕಳನ್ನು ಮಾತಾಡಿಸಲು ಪ್ರಯತ್ನಿಸುತ್ತಾರೆ. ಇದೆಲ್ಲದರ ಬಗೆಗಿನ ಮಾಹಿತಿಯನ್ನು ನಿಮ್ಮ ಮಕ್ಕಳಿಗೆ ನೀವೆ ತಿಳಿಸಿ ಧೈರ್ಯ ಹೇಳಬೇಕು.
* ಫೇಸ್ ಬುಕ್, ಇನ್ಸ್‌ಟಾಗ್ರಾಮ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣೆಯಾದಾಗ ಅಪ್ಲೋಡ್ ಮಾಡಿದ ಪೋಸ್ಟರ್ ಅನ್ನು ಡಿಲೀಟ್ ಮಾಡಬೇಕು/ ಮಾಡಿಸಬೇಕು. ಈ ವಿಚಾರವನ್ನು ಮರೆಯದೇ ತಮ್ಮ ಗೆಳೆಯರಿಗೂ ತಿಳಿಸಿ ಪೋಸ್ಟರ್ ಡಿಲೀಟ್ ಆಗುವಂತೆ ನೋಡಿಕೊಳ್ಳ ಬೇಕು.
* ಮಕ್ಕಳ ಶಾಲೆಗೆ ಭೇಟಿ ನೀಡಿ ತಮ್ಮ ಮಗ/ಮಗಳು ಕಾಣೆಯಾದಾಗ ಸ್ಪಂದಿಸಿದ ಗೆಳೆಯರಿಗೂ, ಶಿಕ್ಷಕರಿಗೆ ಧನ್ಯವಾದ ತಿಳಿಸಿ. ಇದರಿಂದ ಕಾಣೆಯಾಗಿದ್ದ ಮಕ್ಕಳ ಬಗ್ಗೆ ಲಘುವಾಗಿ ಮಾತನಾಡುವುದು. ಗೇಲಿ ಮಾಡುವುದಕ್ಕೆ ಲಗಾಮು ಹಾಕಿದಂತಾಗುತ್ತದೆ.
* ಮುಂದೆ ಇಂತಹದೇ ಪ್ರಕರಣ ಮರುಕಳಿಸಿದರೆ ತಾತ್ಕಾಲಿಕವಾಗಿ ಒಂದು ಸಿಮ್ ಕಾರ್ಡ್ ತೆಗೆದು ಕೊಂಡು ಅದರ ಸಂಖ್ಯೆ ಬಳಸಿ. ಮಕ್ಕಳು ಹಿಂದಿರುಗಿದ ನಂತರ ಈ ಸಂಖ್ಯೆಯನ್ನು ಬಳಸದಂತೆ ನೋಡಿಕೊಳ್ಳಿ.
* ಒಮ್ಮೆ ಮನೆಯಿಂದ ಹೊರಗೆ ಹೋಗಿ ಬಂದ ಮಕ್ಕಳು ಮತ್ತೆ ಮತ್ತೆ ಮನೆ ಬಿಟ್ಟು ಹೋಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹಾಗಾಗಿ ಕೇವಲ ಮಕ್ಕಳಿಗೆ ಮಾತ್ರ ಆಪ್ತಸಮಾಲೋಚನೆ ಅಗತ್ಯ ಇದೆ. ಇದನ್ನು ತಿಳಿದು ಪೋಷಕರು ಸಹ ಆಪ್ತ ಸಮಾಲೋಚನೆ ಪಡೆದುಕೊಳ್ಳಿ. ಮಕ್ಕಳು ಕಾಣೆಯಾದಾಗ ಮತ್ತು ಹಿಂದಿರುಗಿದಾಗ ಏನು ಮಾಡಬೇಕೆಂಬ ಕಾನೂನು ಪ್ರಕ್ರಿಯೆಯನ್ನು ತಿಳಿದುಕೊಳ್ಳುವುದು ಉತ್ತಮ.
* ಪ್ರತಿದಿನ ನಿಮ್ಮ ಮಕ್ಕಳಿಗೆ ಕನಿಷ್ಠ ಪಕ್ಷ ಎರಡು ಗಂಟೆಗಳ ಸಮಯ ನೀಡಿ. ನಿಮ್ಮ ಮಕ್ಕಳ ಜತೆ ಸ್ನೇಹಿತರಂತೆ ವರ್ತಿಸಿ ಎಂದು ಟ್ರಸ್ಟ್ ಸಲಹೆ ನೀಡಿದೆ.
* ಮಕ್ಕಳು ಕಾಣೆಯಾಗಿ ಕುಟುಂಬಕ್ಕೆ ಹಿಂದಿರುಗಿದ ಪ್ರಸಂಗವನ್ನು ಕಳಂಕ ಎಂದು ಭಾವಿಸದೆ ಅನುಭವವೆಂದು ಪರಿಗಣಿಸುವುದು ಮುಖ್ಯ.
* ಮಕ್ಕಳು ಕಾಣೆಯಾದ ಪ್ರಕರಣಗಳ ನಂತರ ಏನು ಮಾಡಬೇಕೆಂಬುದನ್ನು ಪೋಷಕರು, ಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದು ಚೈಲ್ಡ್ ರೈಟ್ಸ್ ಟ್ರಸ್ಟ್ ಮಾಹಿತಿ ನೀಡಿದೆ.












Click it and Unblock the Notifications