Akhanda Srinivas Murthy ಮನೆಗೆ ಬೆಂಕಿ ಬಿದ್ದರೂ 'ಕೈ' ಟಿಕೆಟ್ ಸಿಗಲಿಲ್ಲ: ಅಖಂಡ ಶ್ರೀನಿವಾಸಮೂರ್ತಿ ನಿವಾಸದಲ್ಲಿ ನಡೆದಿದ್ದೇನು?
ಬೆಂಗಳೂರು, ಏಪ್ರಿಲ್ 17: ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಈಗಾಗಲೇ ಮೂರು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮೂರನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗದ ಕಾರಣ ಪಕ್ಷದ ಪ್ರಮುಖ ನಾಯಕರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಈವರೆಗೂ ಟಿಕೆಟ್ ಘೋಷಣೆಯಾಗದ ಹಿನ್ನೆಲೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ಭಾನುವಾರ ತಡರಾತ್ರಿ ರಾಜೀನಾಮೆ ನೀಡಿದ್ದಾರೆ. ರಾಜ್ಯದಲ್ಲೇ ಅತಿ ಹೆಚ್ಚು ಮತ ಪಡೆದು ವಿಧಾನಸಭೆ ಪ್ರವೇಶಿಸಿದ್ದ ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ್ದ, ಅಖಂಡ ಶ್ರೀನಿವಾಸ ಮೂರ್ತಿ ನಾನು ಮನೆ ಸುಟ್ಟುಕೊಂಡರೂ ಪಕ್ಷಕ್ಕಾಗಿ ಶ್ರಮಿಸಿದ್ದೇನೆ. ಆದರೆ, ಪಕ್ಷದಿಂದ ನೋವಿನ ಹೊರತು ಮತ್ತೇನೂ ಕೊಡುತ್ತಿಲ್ಲ ಬೇಸರ ವ್ಯಕ್ತಪಡಿಸಿದ್ದರು. ಶಾಸಕರಾಗಿರುವಾಗಲೇ ಕಿಡಿಗೇಡಿಗಳ ಕೃತ್ಯದಿಂದ ಅಖಂಡ ಶ್ರೀನಿವಾಸ ಮೂರ್ತಿ ಮನೆ ಕಳೆದುಕೊಂಡರು. ಹೀಗಾಗಿ ಮನೆ ಸುಟ್ಟುಕೊಂಡರೂ ಪಕ್ಷಕ್ಕಾಗಿ ಶ್ರಮಿಸಿದ್ದೇನೆ ಎನ್ನುವ ಅಖಂಡ ಶ್ರೀನಿವಾಸ ಮೂರ್ತಿ ಅವರ ನೋವಿನ ಮಾತು ಬೆಂಬಲಿಗರನ್ನು ಕಾಡುತ್ತಿದೆ.
ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಇಟ್ಟಿದ್ಯಾರು..? ಅಂದು ನಡೆದಿದ್ದೇನು..? ಎನ್ನುವುದನ್ನು ಇಂದು ಮತ್ತೆ ನೆನಪಿಸಿಕೊಳ್ಳುಬಹುದಾಗಿದೆ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ: ಆ ತಡರಾತ್ರಿ ನಡೆದಿದ್ದೇನು?
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೋದರ ಸಂಬಂಧಿ ನವೀನ್ ಎನ್ನುವಾತ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾನೆ ಎಂದು ಆರೋಪಿಸಿ ಕೆಲ ಕಿಡಿಗೇಡಿಗಳ ಗುಂಪು 2020 ಆಗಸ್ಟ್ 11 ರಂದು ಶ್ರೀನಿವಾಸ ಮೂರ್ತಿ ನಿವಾಸದ ಮೇಲೆ ಏಕಾಏಕಿ ದಾಳಿ ನಡೆಸಿದ್ದರು.
ರಾತ್ರೋರಾತ್ರಿ ನೂರಾರು ಜನರು ಕಾವಲ್ ಭೈರಸಂದ್ರದಲ್ಲಿರುವ ಅಖಂಡ ಶ್ರೀನಿವಾಸ ಮೂರ್ತಿ ಮನೆಯ ಮುಂದೆ ಜಮಾಯಿಸಿದ್ದರು. ಪ್ರಾರಂಭದಲ್ಲಿ ಧಿಕ್ಕಾರ ಕೂಗಿ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದ ಕಿಡಿಗೇಡಿಗಳು ಬಳಿಕ ಅತಿರೇಖದ ವರ್ತನೆ ತೋರಿದ್ದರು.
ಈ ವೇಳೆ ಕಿಡಿಗೇಡಿಗಳು ಶಾಸಕರ ಮನೆಗೆ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ನೋಡುನೋಡುತ್ತಿದ್ದಂತೆ ಶಾಸಕರ ಮನೆ ಹೊತ್ತಿ ಉರಿದಿತ್ತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಗಲಭೆಕೋರರು, ಕಲ್ಲು ತೂರಾಟ ನಡೆಸಿ ಸಿಕ್ಕ ಸಿಕ್ಕ ವಾಹನಗಳಿಗೂ ಬೆಂಕಿ ಹಾಕಿದ್ದರು.
ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ಪುಂಟಾಟ ಮೆರೆದ ಆರೋಪಿಗಳು ವಾಹನಗಳಿಗೆ ಬೆಂಕಿ ಹಚ್ಚುವುದರ ಜೊತೆಗೆ ಮನೆಗಳಿಗೆ ಕಲ್ಲು ತೂರಾಟ ಮಾಡಿದ್ದರು. ಅಲ್ಲದೇ ಡಿಜೆ ಹಳ್ಳಿ , ಕೆಜಿ ಹಳ್ಳಿ ಪೊಲೀಸ್ ಠಾಣೆಯ ಬಳಿ ಬಂದ ಗಲಭೆಕೊರರು, ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ಪೊಲೀಸರ ವಾಹನಗಳನ್ನು ಸುಟ್ಟು ಹಾಕಿದ್ದರು. ಕೊನೆಗೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಲಾಠಿ ಪ್ರಹಾರ ನಡೆಸಿದ ಪೊಲೀಸರು ಕೊನೆಯಲ್ಲಿ ಫೈರಿಂಗ್ ಕೂಡ ನಡೆಸಿದ್ದರು. ಈ ವೇಳೆ ಓರ್ವ ಸಾವನ್ನಪ್ಪಿದ ಘಟನೆ ಕೂಡ ನಡೆದಿತ್ತು.
ಶಾಸಕರ ಮನೆಗೆ ಹಾಗೂ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದ ತನಿಖೆಯನ್ನು ಎನ್‍ಐಎ ಮತ್ತು ಸಿಸಿಬಿ ಪೊಲೀಸರಿಗೆ ವಹಿಸಲಾಗಿತ್ತು. ತನಿಖೆ ನಡೆಸಿದ ಅಧಿಕಾರಿಗಳು 450ಕ್ಕೂ ಹೆಚ್ಚು ಗಲಭೆ ಕೋರರನ್ನು ಬಂಧಿಸಿದ್ದರು. ತನಿಖೆಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಕೈವಾಡದ ಬಗ್ಗೆ ಸಾಕ್ಷಿ ಸಿಕ್ಕ ಹಿನ್ನೆಲೆಯಲ್ಲಿ ಅವರನ್ನು ಕೂಡ ಬಂಧಿಸಲಾಗಿತ್ತು. ಬಳಿಕ ಸಂಪತ್ ರಾಜ್‌ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು.












Click it and Unblock the Notifications