ಸಿ.ಎಂ.ಇಬ್ರಾಹಿಂ ತೃತೀಯ ರಂಗ ಸ್ಥಾಪಿಸುತ್ತಾರಾ? ರಾಜಕೀಯ ತಂತ್ರ ಏನಿರಬಹುದು?
ಬೆಂಗಳೂರು: ಉಪಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಸಂಚಲನ ಆರಂಭವಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷದೊಳಗಿದ್ದ ಭಿನ್ನಮತಗಳು ಹೊರಬಂದಿವೆ. ಜತೆಗೆ ಸೋಲಿನ ಪರಾಮರ್ಶೆಯೂ ಜೋರಾಗಿಯೇ ನಡೆಯುತ್ತಿದೆ. ಇದರ ನಡುವೆ ನೇಪಥ್ಯಕ್ಕೆ ಸರಿದಿದ್ದ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಸಕ್ರಿಯರಾಗಿರುವುದು ಮತ್ತು ಜೆಡಿಎಸ್ ನ ಅಸಮಾಧಾನಿತ ಶಾಸಕ ಜಿ.ಟಿ.ದೇವೇಗೌಡರನ್ನು ಭೇಟಿಯಾಗಿರುವುದು ಕುತೂಹಲ ಕೆರಳಿಸಿದ್ದು ರಾಜ್ಯದಲ್ಲಿ ತೃತೀಯ ರಂಗ ಸ್ಥಾಪನೆಗೆ ಮುನ್ನುಡಿನಾ? ಎಂಬ ಕುತೂಹಕಕಾರಿ ಪ್ರಶ್ನೆಗಳು ರಾಜಕೀಯ ಪಡಸಾಲೆಯಿಂದ ಎದ್ದು ಬರುತ್ತಿವೆ.
ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ತೃತೀಯರಂಗ ಸ್ಥಾಪಿಸಬೇಕೆಂಬ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕನಸು ನನಸಾಗದೆ ಅಂತಿಮವಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಜತೆ ಕೈಜೋಡಿಸಿ 2024ರ ಲೋಕಸಭಾ ಚುನಾವಣೆಯನ್ನು ಎದುರಿಸಿರುವುದು ರಾಜಕೀಯ ಇತಿಹಾಸದ ಸತ್ಯವಾಗಿದೆ. ಹೀಗಿರಬೇಕಾದರೆ ಜೆಡಿಎಸ್ ನಲ್ಲಿದ್ದ ನಾಯಕ ಸಿಎಂ ಇಬ್ರಾಹಿಂ ದೇವೇಗೌಡರ ನಡೆಯನ್ನು ವಿರೋಧಿಸಿ ಹೊರ ಹೋಗಿದ್ದು, ಇದೀಗ ರಾಜ್ಯದಲ್ಲಿ ತೃತೀಯ ರಂಗ ಸ್ಥಾಪಿಸುವ ಬಗ್ಗೆ ಮಾತನಾಡಿರುವುದು ಕುತೂಹಲ ಕೆರಳಿಸಿದೆ.

ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷ ಸ್ಥಾಪನೆ ಮತ್ತು ಸಂಘಟನೆ ಮಾಡುವುದು ಅಷ್ಟೊಂದು ಸುಲಭವಾಗಿ ಉಳಿದಿಲ್ಲ. ಅದರಲ್ಲೂ ರಾಜ್ಯದಲ್ಲಿ ಹೊಸ ಪಕ್ಷ ಸ್ಥಾಪನೆ ಮಾಡುವುದು ಎಷ್ಟೊಂದು ಕಷ್ಟ ಎಂಬುದು ಎಲ್ಲರಿಗೂ ಗೊತ್ತಿದೆ. ಹೊಸ ಪಕ್ಷಗಳು ಎಷ್ಟು ಬೇಗ ಉದಯವಾದವೋ ಅಷ್ಟೇ ವೇಗದಲ್ಲಿ ಅಡ್ಡಡ್ಡ ಮಲಗಿಕೊಂಡಿವೆ. ಬಿಜೆಪಿಯಂತಹ ಪಕ್ಷಕ್ಕೆ ರಾಜ್ಯದಲ್ಲಿ ನೆಲೆ ಕೊಟ್ಟು ಅದನ್ನು ರಾಜ್ಯವ್ಯಾಪಿ ವಿಸ್ತರಿಸಿದ್ದ ಬಿ.ಎಸ್.ಯಡಿಯೂರಪ್ಪನವರೇ ಹೊಸ ಕೆಜೆಪಿ ಪಕ್ಷವನ್ನು ಕಟ್ಟಿ ಕೊನೆಗೆ ಅದನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿ ಬಿಜೆಪಿಗೆ ಹಿಂತಿರುಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ..
ರಾಜ್ಯಕ್ಕೊಂದು ಪ್ರಾದೇಶಿಕ ಪಕ್ಷ ಅಗತ್ಯ
ರಾಜ್ಯಕ್ಕೊಂದು ಪ್ರಾದೇಶಿಕ ಪಕ್ಷ ಬೇಕೆನ್ನುವುದು ಹಿಂದಿನಿಂದಲೂ ಎಲ್ಲರೂ ಹೇಳಿಕೊಂಡು ಬರುತ್ತಿರುವ ಮಾತು. ಪ್ರಾದೇಶಿಕ ಪಕ್ಷದ ಅಗತ್ಯತೆಯನ್ನು ಜೆಡಿಎಸ್ ನೀಗಿಸಬಹುದಿತ್ತು. ಅದು ಅಧಿಕಾರ ಹಿಡಿಯುವ ಮಟ್ಟಕ್ಕೂ ಹೋಗಿತ್ತು. ಆದರೆ ಕುಟುಂಬ ರಾಜಕಾರಣದಲ್ಲಿ ಅದು ಹೀನಾಯ ಮಟ್ಟಕ್ಕೆ ಹೋಯಿತು ಎನ್ನುವುದು ಅಷ್ಟೇ ಸತ್ಯ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಸಾಮಾನ್ಯವಾಗಿ ಹೆಚ್ಚಿನ ಪ್ರಾದೇಶಿಕ ಪಕ್ಷಗಳು ಕುಟುಂಬದ ಮರ್ಜಿನಲ್ಲಿಯೇ ಇವೆ. ಇದರ ಹೊರತಾಗಿ ಕುಟುಂಬೇತರ ವ್ಯಕ್ತಿಗಳಿಗೆ ಅದರು ಉಸ್ತುವಾರಿ ನೀಡಿ ಜನಸಾಮಾನ್ಯರ ಪಕ್ಷವನ್ನಾಗಿ ಪರಿವರ್ತಿಸುವ ಕೆಲಸವಾಗದ ಕಾರಣದಿಂದಾಗಿ ಬಹುಶಃ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆ ಕಾಣಲೇ ಇಲ್ಲ.
ನಾವು ಜೆಡಿಎಸ್ ಪಕ್ಷವನ್ನು ಉದಾಹರಣೆಯಾಗಿ ನೋಡುವುದಾದರೆ ಪಕ್ಷ ಸಂಘಟನೆ ಸೇರಿದಂತೆ ಕೆಲಸ ಕಾರ್ಯಗಳಿಗೆ ಕಾರ್ಯಕರ್ತರು ಮೊದಲು ಆದರೆ ಅಧಿಕಾರದ ವಿಚಾರ ಬಂದಾಗ ಅದು ದೇವೇಗೌಡರ ಕುಟುಂಬವನ್ನು ಹೊರತುಪಡಿಸಿ ಇತರೆ ನಾಯಕರನ್ನು ತಲುಪಲೇ ಇಲ್ಲ. ಹೀಗಾಗಿಯೇ ರಾಜ್ಯದ ಜನ ಜೆಡಿಎಸ್ ಪಕ್ಷದ ವಿರುದ್ಧ ತಿರುಗಿ ಬಿದ್ದರು ಇದರ ಪರಿಣಾಮ ಇವತ್ತು ಹೀನಾಯ ಪರಿಸ್ಥಿತಿಗೆ ತಲುಪುವಂತಾಗಿದೆ. ಅದರಲ್ಲೂ ಉಪಚುನಾವಣೆ ಬಳಿಕ ಮುಂದೆ ಏನಾಗುತ್ತದೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
ಇಬ್ರಾಹಿಂರವರ ರಾಜಕೀಯ ತಂತ್ರವೇನು?
ರಾಜ್ಯದ ರಾಜಕೀಯ ಪಕ್ಷಗಳ ಪರಿಸ್ಥಿತಿ ನೋಡಿದರೆ ಮೂರು ಪಕ್ಷಗಳ ನಾಯಕರೊಳಗೆ ಅಸಮಾಧಾನವಿದೆ, ಬಣಗಳಿವೆ, ಅತೃಪ್ತರೂ ಇದ್ದಾರೆ. ಹೀಗಿರುವಾಗ ಇವರೆಲ್ಲರನ್ನು ಒಟ್ಟುಗೂಡಿಸಿ ತೃತೀಯ ರಂಗವನ್ನು ಕಟ್ಟಿದರೆ ಯಶಸ್ಸು ಸಾಧಿಸಬಹುದೇನೋ ಎಂಬುದು ಬಹುಶಃ ಸಿ.ಎಂ.ಇಬ್ರಾಹಿಂ ಅವರ ಆಲೋಚನೆ ಆಗಿರಬಹುದೇನೋ? ಜೆಡಿಎಸ್ ನಿಂದ ಸಿಡಿದೆದ್ದು ಹೊರ ಹೋಗಿ ಕಾಂಗ್ರೆಸ್ ಬಾಗಿಲು ತಟ್ಟಿದ ಅವರಿಗೆ ಹೇಳಿಕೊಳ್ಳುವ ಸ್ವಾಗತ ಸಿಗಲಿಲ್ಲ. ಸಿದ್ದರಾಮಯ್ಯ ಅವರು ಹತ್ತಿರ ಬಿಟ್ಟುಕೊಳ್ಳುವ ಪ್ರಯತ್ನ ಮಾಡಲೇ ಇಲ್ಲ.
ಸದ್ಯ ರಾಜಕೀಯ ಅಜ್ಞಾತವಾಸದಿಂದ ಹೊರ ಬಂದಂತೆ ಕಾಣುತ್ತಿರುವ ಸಿ.ಎಂ.ಇಬ್ರಾಹಿಂ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅದು ಹೊಸ ಪಕ್ಷವೋ, ತೃತೀಯ ರಂಗವೋ ಅಥವಾ ಜೆಡಿಎಸ್ ಬಲವರ್ಧನೆಯೋ ಗೊತ್ತಿಲ್ಲ ಆದರೆ ಮೊದಲಿಗೆ ಜೆಡಿಎಸ್‌ನಲ್ಲಿ ನೊಂದಿರುವ ಶಾಸಕರನ್ನು ಒಗ್ಗೂಡಿಸಲು ಯತ್ನಿಸುತ್ತಿದ್ದೇನೆ. ಆ ನಂತರ ಏನು ಎಂಬುದನ್ನು ಹೇಳುತ್ತೇನೆ ಎಂದಿದ್ದಾರೆ. ಈಗಾಗಲೇ ಜೆಡಿಎಸ್ ವರಿಷ್ಟ ಹೆಚ್.ಡಿ.ದೇವೇಗೌಡರ ಕುಟುಂಬದೊಂದಿಗೆ ಮುನಿಸಿಕೊಂಡಿರುವ ಒಕ್ಕಲಿಗ ನಾಯಕ, ಶಾಸಕ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ.
ನಾಯಕರ ಭೇಟಿಗೆ ಮುಂದಾದ ಇಬ್ರಾಹಿಂ
ಜಿ.ಟಿ.ದೇವೇಗೌಡ ಸೇರಿದಂತೆ ಜೆಡಿಎಸ್‌ನ 12ರಿಂದ 13ಶಾಸಕರು ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯ ವಿಚಾರದಲ್ಲಿ ಬೇಸರಗೊಂಡಿದ್ದಾರೆ. ನೋವು ನುಂಗಿಕೊಂಡಿದ್ದಾರೆ. ಈಗ ಅವರೆನ್ನಲ್ಲಾ ಒಗ್ಗೂಡಿಸುವ ಕೆಲಸವನ್ನು ನಾನು ಶುರು ಮಾಡಿರುವುದಾಗಿ ಹೇಳಿದ್ದಾರೆ. ಈಗಲೂ ನಾನೇ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ. ನಮ್ಮ ಶಾಸಕರ ನೋವು ನಿವಾರಿಸುವ ಜವಾಬ್ದಾರಿ ನನ್ನದು.
ಜಿಟಿಡಿ ಕಳೆದ ವಿಧಾನಸಭೆ ಚುನಾವಣೆ ವೇಳೆಯೇ ಕಾಂಗ್ರೆಸ್‌ಗೆ ಹೋಗಿದ್ದರೆ ಸಚಿವರಾಗುತ್ತಿದ್ದರು. ಜೆಡಿಎಸ್ ಬಲಪಡಿಸಲೆಂದು ನಾನೇ ಅವರನ್ನು ಜೆಡಿಎಸ್‌ನಲ್ಲಿ ಉಳಿಸಿಕೊಂಡೆ. ಈಗ ಜಿಟಿಡಿಯವರ ಕತ್ತು ಕೊಯ್ಯುವ ಕೆಲಸ ಮಾಡಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೇನೆ ಇನ್ನೆರಡು ದಿನ ಬಿಟ್ಟು ನಾನು ರಾಜ್ಯ ಪ್ರವಾಸ ಹೋಗುತ್ತಿದ್ದೇನೆ. ಆಗ ಕೆಲವು ನಾಯಕರನ್ನು ಭೇಟಿಯಾಗುತ್ತೇನೆ. ಬಳಿಕ ಮತ್ತೆ ಜಿಟಿಡಿ ಭೇಟಿಯಾಗುತ್ತೇನೆ ಎಂದಿದ್ದಾರೆ.
ಮೂಲ ಜೆಡಿಎಸ್ ನಮ್ಮದೇ.. ಅದರ ಖಾತೆ, ಪಹಣಿ ಎಲ್ಲವೂ ನಮ್ಮ ಹೆಸರಿನಲ್ಲಿವೆ. ಈಗಲೂ ಎಚ್.ಡಿ.ದೇವೇಗೌಡರು ಬಿಜೆಪಿ ಸಹವಾಸ ಬಿಟ್ಟು ಬರಲಿ. ಪಕ್ಷವನ್ನು ಕಟ್ಟುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದು ಸಾಧ್ಯವಾಗದ ಮಾತು. ಅದು ಏನೇ ಇರಲಿ ಸಿ.ಎಂ.ಇಬ್ರಾಹಿಂ ಇದೀಗ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯವಾಗಿರುವುದನ್ನು ನೋಡಿದರೆ ಅದರ ಹಿಂದೆ ರಾಜಕೀಯವಾಗಿ ದೊಡ್ಡದಾದ ಉದ್ದೇಶವಂತು ಇದ್ದೇ ಇದೆ. ಅದು ತೃತೀಯ ರಂಗದ ರಚನೆಯಾ? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ












Click it and Unblock the Notifications