ಹವಾಮಾನ ವರದಿ: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆ ನಿರೀಕ್ಷೆ
ಬೆಂಗಳೂರು ಜೂ.19: ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಉತ್ತಮ ಮಳೆಯಾಗಲಿದ್ದು, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಿಗೆ ಹವಾಮಾನ ಇಲಾಖೆ 'ಯೆಲ್ಲೋ ಅಲರ್ಟ'ನ ಎಚ್ಚರಿಕೆ ನೀಡಿದೆ.
ಕರಾವಳಿ ಭಾಗದಲ್ಲಿ ಜೂ.22ರವರೆಗೆ ಗುಡುಗು ಸಹಿತ ಭಾರಿ ಮಳೆ ಆಗುವ ಸಂಭವವಿದೆ. ಹೀಗಾಗಿ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ' ಕೊಡಲಾಗಿದೆ. ಈ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಗಂಟೆಗೆ ಸುಮಾರು 40ಕಿ.ಮೀ.ಗಿಂತಲೂ ಹೆಚ್ಚು ವೇಗವಾಗಿ ಬೀಸಲಿದೆ ಎಂದು ತಿಳಿದು ಬಂದಿದೆ.
ಉತ್ತರ ಒಳನಾಡಿನ ವಿಜಯಪುರ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಮುಂದಿನ ಮೂರು ಭಾರಿ ಮಳೆ ನಿರೀಕ್ಷೆ ಇದ್ದು ಈ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ ನೀಡಲಾಗಿದೆ. ಉಳಿದಂತೆ ಈ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿದೆ.

ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ:
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ 24 ಗಂಟೆಯಲ್ಲಿ 55.8ಮಿ.ಮೀ. ಮಳೆ ದಾಖಲಾಗಿದೆ. ಇದೇ ಅವಧಿಯಲ್ಲಿ ಬೆಳ್ತಂಗಡಿ 28.2 ಮಿ.ಮೀ., ಪೆಣಂಬೂರು 26, ಮಂಗಳೂರು ನಗರ 22.6ಮಿ.ಮೀ., ಸುಳ್ಯಾ 14 ಮಿ.ಮೀ., ಉಡುಪಿಯ ಕದ್ರಾ 25ಮಿ.ಮೀ. ಮಳೆ ಆಗಿದೆ. ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯ ಹಿಡಕಲ್ ಡ್ಯಾಂ ಪ್ರದೇಶದಲ್ಲಿ 84ಮಿ.ಮೀ., ಸಂಕೇಶ್ವರ 48ಮಿ.ಮೀ., ಅತ್ಯಧಿಕ ಮಳೆ ಬಿದ್ದಿದೆ. ಇನ್ನು ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣ ಭಾಗದಲ್ಲಿ 66ಮಿ.ಮೀ.,ಚಿಕ್ಕಮಗಳೂರಿನ ವಿಜಯಪುರದಲ್ಲಿ 34ಮಿ.ಮೀ, ಹಾಸನದ ಶ್ರವಣ ಬೆಳಗೊಳದಲ್ಲಿ 52ಮಿ.ಮೀ., ಕೊಡಗಿನ ಭಾಗಮಂಡಲದಲ್ಲಿ 20ಮಿ.ಮೀ. ಮಳೆ ಆಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿಗೆ ಏನಿದೆ ಮುನ್ಸೂಚನೆ?
ಬೆಂಗಳೂರು ನಗರದಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡುಗ ಸಹಿತ ಜೋರು ಮಳೆ ಆಗುವ ಲಕ್ಷಣಗಳು ಇವೆ. ಈ ಕಾರಣಕ್ಕೆ ಜೂ.21ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ನಗರ ವ್ಯಾಪ್ತಿಯ ಹಲವೆಡೆ ಭಾರಿ ಮಳೆ ಸುರಿದರೆ, ಇನ್ನು ಕೆಲವು ಪ್ರದೇಶದಲ್ಲಿ ಸಾಧಾರಣವಾಗಿ ಮಳೆ ಬೀಳಲಿದೆ. ಗರಿಷ್ಠ ತಾಪಮಾನ 28 ಡಿ.ಸೆ. ಮತ್ತು ಕನಿಷ್ಠ ತಾಪಮಾನ 20 ಡಿ.ಸೆ. ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.












Click it and Unblock the Notifications