Bhadra Dam: ಭದ್ರಾ ಡ್ಯಾಂ ಬಹುತೇಕ ಭರ್ತಿ, ನದಿಗೆ ನೀರು ಬಿಡುಗಡೆ
ಶಿವಮೊಗ್ಗ, ಜುಲೈ 30: ಮುಂಗಾರು ಮಳೆಯ ಅಬ್ಬರಕ್ಕೆ ರಾಜ್ಯದ ಮತ್ತೊಂದು ಪ್ರಮುಖ ಜಲಾಶಯ ಭರ್ತಿಯಾಗಿದೆ. ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಸುಮಾರು 10-12 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
ಭದ್ರಾ ಡ್ಯಾಂ ಬಹುತೇಕ ಭರ್ತಿಯಾಗಿದೆ. ಅಲ್ಲದೇ ಸುಮಾರು 18,381 ಕ್ಯೂಸೆಕ್ ಒಳಹರಿವು ಇದೆ. ಆದ್ದರಿಂದ ಮಂಗಳವಾರ 4 ಕ್ರಸ್ಟ್ ಗೇಟ್‌ಗಳ ಮೂಲಕ ಭದ್ರಾ ನದಿಗೆ ನೀರನ್ನು ಬಿಡಲಾಗಿದೆ. ಮಳೆಗೆ ಭದ್ರಾ ಡ್ಯಾಂ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕಳೆದ ವರ್ಷ ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಭದ್ರಾ ಜಲಾಶಯ ಭರ್ತಿಯಾಗಿರಲಿಲ್ಲ. ಬೇಸಿಗೆಯಲ್ಲಿ ಡ್ಯಾಂ ನೀರಿನ ಮಟ್ಟ ಭಾರೀ ಕುಸಿತ ಕಂಡಿತ್ತು. ಕೇವಲ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ನೀರನ್ನು ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು.
ಈ ಬಾರಿ ಮಳೆಯ ಅಬ್ಬರಕ್ಕೆ ಭದ್ರಾ ಡ್ಯಾಂ ಭರ್ತಿಯಾಗಿದೆ. ಡ್ಯಾಂ ನೀರಿನ ಮಟ್ಟ 183 ಅಡಿಗೆ ತಲುಪುತ್ತಿದ್ದಂತೆಯೇ ನದಿಗೆ ನೀರು ಹರಿಸಲಾಗುತ್ತಿದೆ. ಡ್ಯಾಂನ 4 ಕ್ರಸ್ಟ್ ಗೇಟ್ ಮೂಲಕ ಮಂಗಳವಾರದಿಂದ ನದಿಗೆ ನೀರು ಬಿಡಲಾಗಿದ್ದು, ಕಾಲುವೆಗಳಿಗೂ ನೀರು ಹರಿಸಲು ತೀರ್ಮಾನಿಸಲಾಗಿದೆ.
ಡ್ಯಾಂ ನೀರಿನ ಮಟ್ಟ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಭದ್ರಾ ಡ್ಯಾಂ ಭರ್ತಿಯಾಗಿದೆ. ಡ್ಯಾಂ ಗರಿಷ್ಠ ಮಟ್ಟ 186 ಅಡಿಗಳು. ಆದರೆ ಪ್ರತಿ ಬಾರಿ ಸುರಕ್ಷತೆಯ ದೃಷ್ಟಿಯಿಂದ 184 ಅಡಿಯ ತನಕ ನೀರು ನಿಲ್ಲಿಸಲಾಗುತ್ತದೆ.
ಮಂಗಳವಾರ ಬೆಳಗ್ಗೆ 6 ಗಂಟೆಗೆ ಡ್ಯಾಂ ನೀರಿನ ಮಟ್ಟ 183.2 ಅಡಿಗೆ ಏರಿಕೆಯಾಗಿದ್ದು, ನದಿಗೆ ನೀರು ಹರಿಸಲಾಗಿದೆ. ಎರಡು ವರ್ಷಗಳ ಬಳಿಕ ಭದ್ರಾ ಡ್ಯಾಂ ಭರ್ತಿಯಾಗಿದ್ದು, ರೈತರು ಸಂತಸಗೊಂಡಿದ್ದಾರೆ. ಕಳೆದ ವರ್ಷ ಇದೇ ದಿನ ಡ್ಯಾಂನಲ್ಲಿ 161.6 ಅಡಿ ನೀರಿನ ಸಂಗ್ರಹವಿತ್ತು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಮಳೆ ಕಡಿಮೆಯಾಗಿತ್ತು. ಆದ್ದರಿಂದ ಭದ್ರಾ ಡ್ಯಾಂಗೆ ನೀರಿನ ಒಳಹರಿವು ಕಡಿಮೆಯಾಗಿತ್ತು. ಆದರೆ ಮತ್ತೆ ಮಳೆ ಆರಂಭವಾಗಿದ್ದು, ಒಳಹರಿವಿನ ಪ್ರಮಾಣ 20,774 ಕ್ಯುಸೆಕ್‌ಗೆ ಏರಿಕೆಯಾಗಿದೆ.
ಭದ್ರಾ ಡ್ಯಾಂನ ನೀರು ದಾವಣಗೆರೆ ಜಿಲ್ಲೆಯ ಜನರ ಜೀವನಾಡಿಯಾಗಿದೆ. ಡ್ಯಾಂ ತುಂಬಿದರೆ ಕಾಲುವೆ ನೀರಿನ ಆಶ್ರಯದಲ್ಲಿ ರೈತರು ಭತ್ತ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುತ್ತಾರೆ. ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಡ್ಯಾಂ ಭರ್ತಿಯಾಗಲಿಲ್ಲ. ಮುಂಗಾರು ಹಂಗಾಮಿನಲ್ಲಿ ರೈತರು ಕಷ್ಟಪಟ್ಟು ಭತ್ತ ಬೆಳೆದಿದ್ದರು. ಬೇಸಿಗೆಯಲ್ಲಿ ಬೆಳೆಗಳಿಗೆ ನೀರಿನ ಕೊರತೆ ಆಗಿತ್ತು.
ದಾವಣಗೆರೆ ಜಿಲ್ಲೆಯಲ್ಲಿ ಪ್ರಮುಖವಾಗಿ ಭದ್ರಾ ನೀರಿನ ಆಶ್ರಯದಲ್ಲಿ ಭತ್ತ ಬೆಳೆಯಲಾಗುತ್ತದೆ. ಮುಂಗಾರು, ಹಿಂಗಾರು ಹಂಗಾಮಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವುದರಿಂದ ರೈಸ್ ಮಿಲ್ ಸೇರಿದಂತೆ ಕೋಟ್ಯಾಂತರ ರೂಪಾಯಿ ವಾಣಿಜ್ಯೋದ್ಯಮ ನಡೆಯುತ್ತದೆ.
ಜಿಲ್ಲೆಯಲ್ಲಿ 156ಕ್ಕೂ ಅಧಿಕ ಹೆಚ್ಚು ರೈಸ್ ಮಿಲ್, 1134ಕ್ಕೂ ಅಧಿಕ ಮಂಡಕ್ಕಿ, ಅವಲಕ್ಕಿ ಗಿರಣಿಗಳಿವೆ. ಕಳೆದ ಬಾರಿ ಗಿರಣಿಗಳಿಗೆ ಭತ್ತದ ಕೊರತೆ ಉಂಟಾಗಿತ್ತು. ಆದ್ದರಿಂದ ಹೊರ ರಾಜ್ಯಗಳಿಂದ ಭತ್ತವನ್ನು ತರಲಾಗಿತ್ತು.












Click it and Unblock the Notifications