Vote Without Voter ID: ಮತದಾರರ ಪಟ್ಟಿಯಲ್ಲಿ ಹೆಸರಿದ್ರೆ ಸಾಕು: ವೋಟರ್ ಐಡಿ ಇಲ್ಲ ಅಂದ್ರು ಮತದಾನ ಮಾಡುವುದು ಹೇಗೆ ತಿಳಿಯಿರಿ
ಭಾರತದಲ್ಲಿ ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಚುನಾವಣೆ. ಪ್ರತಿಯೊಬ್ಬ ನಾಗರೀಕ ಕೂಡ ತಮ್ಮ ಹಕ್ಕನ್ನು ಮರೆಯದೆ ಚಲಾಯಿಸಬೇಕು. ಮತದಾನ ಮಾಡುವುದು ಪ್ರತಿಯೊಬ್ಬ ಜವಾಬ್ದಾರಿ ನಾಗರೀಕರ ಕರ್ತವ್ಯ. ಮತದಾನದ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ಸಾಕಷ್ಟು ಶ್ರಮ ವಹಿಸುತ್ತಿದೆ. ಜಾಗೃತಿ ಮೂಡಿಸಲು ಹೆಚ್ಚಿನ ಪ್ರಚಾರ ಮಾಡುತ್ತಿದೆ.
ಮತದಾನ ಮಾಡೋಕೆ ನಿಮಗೆ ಮತದಾರರ ಗುರುತಿನ ಚೀಟಿ ಬೇಕೇ ಬೇಕು ಎನ್ನುವ ನಿಯಮ ಕೂಡ ಇಲ್ಲ. ಆದರೆ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರಲೇಬೇಕು, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ಮತದಾನದ ಗುರುತಿನ ಚೀಟಿ (ವೋಟರ್ ಐಡಿ) ಇಲ್ಲದೆಯೋ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಮಾಡಿಕೊಟ್ಟಿದೆ.

ಮೇ 10ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಮತದಾನ ಮಾಡಲು ಮತಗಟ್ಟೆ ಒಳಗೆ ಹೋಗುವ ಮುನ್ನ ಮತಗಟ್ಟೆಯ ಅಧಿಕಾರಿಗೆ ನಿಮ್ಮ ಗುರುತಿನ ಚೀಟಿ ತೋರಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಮ್ಮ ಹತ್ತಿರ ಚುನಾವಣಾ ಗುರುತಿನ ಪತ್ರ (Voter ID Card) ಇಲ್ಲದಿದ್ದರೂ ನೀವು ಇತರೆ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು, ಆದರೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರಲೇಬೇಕಾಗುತ್ತದೆ.
ಈ ದಾಖಲೆಗಳನ್ನು ತೋರಿಸಿ ಮತದಾನ ಮಾಡಿ
1. ಆಧಾರ್ ಕಾರ್ಡ್
2. ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್)
3. ಪಾಸ್‌ಪೋರ್ಟ್
4. ಪಾನ್ ಕಾರ್ಡ್
5. ಎಂನರೇಗಾ ಜಾಬ್ ಕಾರ್ಡ್
6. ಫೋಟೋವುಳ್ಳ ಪಿಂಚಣಿ ದಾಖಲೆ
7. ಎನ್‌ಪಿಆರ್ ಅಡಿ ಅರ್ಜಿ ನೀಡಿರುವ ಸ್ಮಾರ್ಟ್ ಕಾರ್ಡ್
8. ಬ್ಯಾಂಕ್ / ಪೋಸ್ಟ್ ಆಫೀಸ್ ಫೋಟೊ ಇರುವ ಪಾಸ್ ಪುಸ್ತಕ
9. ಚುನಾವಣಾ ಆಯೋಗ ನೀಡುವ ದೃಢೀಕೃತ ಫೋಟೋ ಸಹಿತ ವೋಟರ್ ಚೀಟಿ
10. ಸಂಸದರು/ವಿಧಾನಸಭಾ/ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ
11. ಕೇಂದ್ರ/ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ಸಿಬ್ಬಂದಿಗೆ ನೀಡಿರುವ ಫೋಟೋ ಗುರುತಿನ ಚೀಟಿ
12. ಕಾರ್ಮಿಕರ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್.












Click it and Unblock the Notifications