ʼಭ್ರಷ್ಟಾಚಾರ Rankingನಲ್ಲಿ ವಿಜಯೇಂದ್ರ ನಂಬರ್ 1ʼ
ಶಿವಮೊಗ್ಗ, ಆಗಸ್ಟ್ 03: ಸಿದ್ಧರಾಮಯ್ಯ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷರೇ ಭ್ರಷ್ಟಾಚಾರದಲ್ಲಿ ನಂಬರ್ 1 ಇದ್ದಾರೆ. ವಿಜಯೇಂದ್ರ ಅವರೇ ಹಿಂದುಳಿದ ವರ್ಗದ ನಾಯಕನನ್ನು ತುಳಿಯುವ ಕೆಲಸ ಮಾಡ್ತಿದ್ದೀರಾ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು.
ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಭ್ರಷ್ಟಾಚಾರದ ರ್ಯಾಂಕಿಂಗ್ ನಲ್ಲಿ ಬಿ.ವೈ.ವಿಜಯೇಂದ್ರ ನಂಬರ್ 1 ಸ್ಥಾನದಲ್ಲಿದ್ದಾರೆ. ವಿಜಯೇಂದ್ರ ಬಗ್ಗೆ ಸ್ವಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹಿಗ್ಗಾ ಮುಗ್ಗಾ ಬೈಯ್ಯುತ್ತಿದ್ದಾರೆ. ಅದರ ಬಗ್ಗೆ ಅವರಿಗೆ ನಾಚಿಕೆ ಇಲ್ವಾ? ಈಗ ಸರ್ಕಾರದ ವಿರುದ್ಧ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಸರ್ಕಾರದ ವಿರುದ್ಧ ಅಲ್ಲ. ಒಂದು ರೀತಿಯಲ್ಲಿ ವಿಜಯೇಂದ್ರ ತಮ್ಮ ವಿರುದ್ಧವೇ ಪಾದಯಾತ್ರೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಕೇಜ್ರಿವಾಲ್ ಗೆ ಪ್ರಾಸಿಕ್ಯೂಷನ್ ಮಾಡಿದ್ರು. ಅವರು ಜೈಲಲ್ಲಿದ್ದಾರೆ, ಒಳ್ಳೆಯ ಆಡಳಿತ ನಡೆಯುತ್ತಿದೆ, ಬಿಜೆಪಿಯವರಿಗೆ ಜೈಲಿಗೆ ಕಳುಹಿಸೋದು ಖುಷಿ. ಬಸವನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ಬಗ್ಗೆ ಹಿಗ್ಗಾಮುಗ್ಗ ಬೈಯುತ್ತಿದ್ದಾರೆ. ನಾಯಿ ತರಹ ಬೈಯುತ್ತಿದ್ದಾರೆ ಅದರ ಬಗ್ಗೆ ಅವರಿಗೆ ನಾಚಿಕೆ ಇಲ್ವಾ? ಸರ್ಕಾರ ಬೀಳಿಸುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ಅವರ ಭ್ರಷ್ಟಾಚಾರದ ವಿರುದ್ದವೇ ಪಾದಯಾತ್ರೆ ಮಾಡುತ್ತಿದೆ, ಈ ಪಾದಯಾತ್ರೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.
ಮಳೆಗೆ ಅನಧಿಕೃತ ಮನೆಗಳು ಬಿದ್ದರೂ 1 ಲಕ್ಷದ 25 ಸಾವಿರ ಪರಿಹಾರ ಕೊಡುತ್ತೇವೆ. ಕಳೆದ ಬಾರಿ 5 ಲಕ್ಷ ಕೊಡ್ತಾರೆ ಅಂತಾ ಅವರೇ ಮನೆ ಕೆಡವಿಕೊಂಡರು. ಕಳೆದ ಬಾರಿ ಪ್ರಭಾವ ಇದ್ದವರು 5 ಲಕ್ಷ ಪಡೆದಿದ್ದಾರೆ. ಇನ್ನುಳಿದವರು 1 ಲಕ್ಷ ಪಡೆದಿದ್ದಾರೆ, ಸಂಪೂರ್ಣ ಮನೆ ಬಿದ್ದವರಿಗೆ ಪೂರ್ತಿ ಮನೆ ಕಟ್ಟಿ ಕೊಡುವ ಕೆಲಸ ಮಾಡುತ್ತೇವೆ. 2015 ರ ನಂತರ ಒತ್ತುವರಿ ಮಾಡಿರುವ ಅರಣ್ಯ ಭೂಮಿ ವಶಪಡಿಸಿಕೊಳ್ಳುವ ಬಗ್ಗೆ ಕಾನೂನು ಬಂದಿದೆ ಎಂದು ಹೇಳಿದರು.
ವಾಲ್ಮೀಕಿ ನಿಗಮ ಹಗರಣ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ವಿಧಾನಸಭೆಯೊಳಗೆ ಹಾಗು ಹೊರಗು ಹೇಳಿದ್ದಾರೆ. ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮುಡಾ ಹಗರಣ ವಿಚಾರವಾಗಿ ವಿಜಯೇಂದ್ರ ಅವರು ಸಿದ್ದರಾಮಯ್ಯ ಹಾಗು ಡಿಕೆಶಿ ಮೇಲೆ ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಯತ್ನಾಳ್ ಅವರು ಅವರ ಪಕ್ಷದವರೇ, ಯತ್ನಾಳ್ ಅವರು ವಿಜಯೇಂದ್ರ ಬಗ್ಗೆ ಮಾತನಾಡ್ತಿದ್ದಾರೆ. ಅದರ ಬಗ್ಗೆ ಮಾತನಾಡಲ್ಲ, ಡಿ ಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಲು ಏನು ಯೋಗ್ಯತೆ ಇದೆ. ವಿಜಯೇಂದ್ರ ಎಲ್ಲಿದ್ದರು, ಇವರು ಏನು ಕೆಲಸ ಮಾಡ್ತಿದ್ದರು, ವಿಜಯೇಂದ್ರ ಅವರ ಆಸ್ತಿ ಎಷ್ಟು, ಅವರ ಆಸ್ತಿ ಹೇಗೆ ಬಂತು ಹೇಳಬೇಕಲ್ಲ ಎಂದು ಹೇಳಿದರು.
ವಿಜಯೇಂದ್ರ ಅವರ ಮೇಲೂ ಕೇಸ್ ಇದೆ. ಚೋಟಾ ಸೈನ್, ಮನಿ ಲ್ಯಾಂಡರಿಂಗ್ ಮಾಡಿದ್ದಾರೆ. ಡಿಕೆ ಶಿವಕುಮಾರ್ ತಪ್ಪು ಮಾಡದಿದ್ದರೂ ಜೈಲಿಗೆ ಹೋಗಿದ್ದರು, ಡಿಕೆ ಶಿವಕುಮಾರ್ ಜೈಲಿಗೆ ಹೋಗಲು ಯಡಿಯೂರಪ್ಪ, ವಿಜಯೇಂದ್ರ ಕಾರಣ ಎಂದು ಹೇಳಿದರು. ಡಿಕೆ ಶಿವಕುಮಾರ್ ಬೆಳೆಯಬಾರದು, ಅವರನ್ನು ತುಳಿಯಬೇಕು ಅಂತಾ ಮಾಡಿದರು. ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಡಿಕೆಶಿ ಅವರನ್ನು ಜೈಲಿಗೆ ಕಳುಹಿಸಿದರು 2012 ರಲ್ಲಿ ಮುಡಾ ಹಗರಣ ನಡೆದಿದೆ, 2012 ರಲ್ಲಿ ಬಿಜೆಪಿ ಸರಕಾರ ಇತ್ತು. ಮುಡಾ ಅಧ್ಯಕ್ಷರಾಗಿದ್ದವರು ರಾಜೀವ್, ರಾಜೀವ್ ಅಧ್ಯಕ್ಷರಾಗಿದ್ದರೂ ಮುಡಾ ಹ್ಯಾಂಡಲ್ ಮಾಡ್ತಿದ್ದು ವಿಜಯೇಂದ್ರ ಎಂದು ತಿಳಿಸಿದರು.
ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಇಡೀ ಸಚಿವ ಸಂಪುಟ ಸಿದ್ದರಾಮಯ್ಯ ಜೊತೆ ನಿಲ್ಲುತ್ತೇವೆ. ವಿಜಯೇಂದ್ರ ಅವರ ಕಾರಣದಿಂದಲೇ ಯಡಿಯೂರಪ್ಪ ಪೂರ್ತಿಯಾಗಿ ಅಧಿಕಾರ ಮಾಡಲಾಗಲಿಲ್ಲ, ವಿಜಯೇಂದ್ರ ಅವರು ಭ್ರಷ್ಟಾಚಾರ ಬಗ್ಗೆ ಮಾತನಾಡಬೇಕಾದರೆ ಹುಷಾರಾಗಿ ಇರಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರು - ಮೈಸೂರು ಪಾದಯಾತ್ರೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡುತ್ತೇನೆ. ಎಲ್ಲರ ಹಗರಣ ಹೊರಗೆ ತೆಗೆಯಬೇಕು,ಇವರಿಗೆ ಒಬಿಸಿ ಮುಖ್ಯಮಂತ್ರಿ ಆಗಿರೋದು ಹೊಟ್ಟೆ ಕಿಚ್ಚು. ಒಬಿಸಿ ಅವರು ಮುಖ್ಯಮಂತ್ರಿ ಆಗಿರೋದು ಇವರಿಗೆ ಸಹಿಸಲು ಆಗ್ತಿಲ್ಲ, ಸತ್ಯ ಗೆಲ್ಲಬೇಕು, ಸುಳ್ಳು ಸೋಲಬೇಕು. ನಾವೆಲ್ಲಾ ಸಿದ್ದರಾಮಯ್ಯ ಅವರ ಜೊತೆ ನಿಲ್ಲುತ್ತೇವೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಇದು ನನಗೆ ಬಹಳ ಸಂತಸ ತಂದಿದೆ, ರೈತರಿಗೆ ಕೃಷಿಗೆ ಬಹಳ ಅನುಕೂಲಕರವಾಗಿದೆ. ಎಲ್ಲೆಡೆ ವಾತಾವರಣ ಬಹಳ ಚೆನ್ನಾಗಿದೆ, ರೈತರು ಬೆಳೆ ಬೆಳೆಯಲು ಬಹಳ ಚೆನ್ನಾಗಿದೆ ಕೆಲವೆಡೆ ಗುಡ್ಡ ಕುಸಿತವಾಗಿರುವುದು ನೋವು ತಂದಿದೆ. ಶಿರೂರು ಭಾಗಕ್ಕೆ ನಾನು ಇಂದು ತೆರಳುತ್ತಿದ್ದೆನೆ, ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕೊಡುವ ಕೆಲಸ ಮಾಡಿದ್ದೆವೆ. ಕೆಲೆವೆಡೆ ಕಾಳಜಿ ಕೇಂದ್ರ ತೆರಯಲು ಅನುಕೂಲ ಮಾಡಿಕೊಡಲಾಗಿದೆ. ನಮ್ಮ ಕ್ಷೇತ್ರಗಳಲ್ಲಿ ಜವಾಬ್ದಾರಿಯಿಂದ ಇರುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಹೇಳಿದರು.












Click it and Unblock the Notifications