ಬಾಣಂತಿಯರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರಕ್ಕೆ ಆಗ್ರಹ
ಶಿವಮೊಗ್ಗ, ಜನವರಿ 04: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೆ ಮನುಷ್ಯತ್ವ ಇದ್ದರೆ ಈ ರಾಜ್ಯದ ಸಿಎಂ ಸ್ಥಾನಕ್ಕೆ ಗೌರವ ತರುವ ಕಿಂಚಿತ್ತು ಕಾಳಜಿ ಇದ್ದರೆ ಮೃತ ಬಾಣಂತಿಯರ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ. ಪರಿಹಾರವನ್ನು ತಕ್ಷಣ ಘೋಷಿಸಿ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.
ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಇಂದು (ಶನಿವಾರ) ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ರಾಜೀನಾಮೆ ಪಡೆದುಕೊಳ್ಳಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ಅನಾಥ ಮಕ್ಕಳನ್ನು ರಾಜ್ಯ ಸರಕಾರ ದತ್ತು ತೆಗೆದುಕೊಳ್ಳಬೇಕು. ಆಗ ಮಾತ್ರ ಭಗವಂತ ನಿಮ್ಮನ್ನು ಕ್ಷಮಿಸಲು ಸಾಧ್ಯ ಎಂದು ತಿಳಿಸಿದರು. ಕಾಂಗ್ರೆಸ್ಸಿನ ದುಷ್ಟ ಸರಕಾರ ಅಧಿಕಾರದ ಅಮಲಿನಲ್ಲಿ ತೇಲುತ್ತಿದೆ. ಈ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡುತ್ತಿದೆ ಎಂದು ವಿವರಿಸಿದರು. ಬಾಣಂತಿಯರು, ನವಜಾತ ಶಿಶುಗಳ ಸಾವಿನ ವಿಚಾರಕ್ಕೆ ಸಂಬಂಧಿಸಿ ಮಹಿಳಾ ಮೋರ್ಚಾದಿಂದ ರಾಜ್ಯಾದ್ಯಂತ ಹೋರಾಟ ನಡೆದಿದೆ ಎಂದು ತಿಳಿಸಿದರು.
ತಡ ಮಾಡದೇ 25 ಲಕ್ಷ ಪರಿಹಾರ ಘೋಷಿಸಿ. ಮಕ್ಕಳ ಜೀವನೋಪಾಯಕ್ಕೆ ವ್ಯವಸ್ಥೆಯನ್ನೂ ರಾಜ್ಯ ಸರಕಾರವೇ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಈ ಲಜ್ಜೆಗೆಟ್ಟ ಸರಕಾರಕ್ಕೆ ಬಿಜೆಪಿ ತನ್ನ ಹೋರಾಟದ ಮೂಲಕ ಪಾಠ ಕಲಿಸಬೇಕಿದೆ ಎಂದು ಅವರು ಹೇಳಿದರು.
ಈ ಸಾವುಗಳ ಸಂಬಂಧ ಮಾಹಿತಿಯನ್ನು ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಮೂಲಕ ತಿಳಿಸಿ ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಿದ್ದೇವೆ ಎಂದು ಅವರು ಪ್ರಕಟಿಸಿದರು. ಆ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದು ಬಿ ವೈ ವಿಜಯೇಂದ್ರ ಅವರು ತಿಳಿಸಿದರು.
ಭ್ರಷ್ಟ- ಲಜ್ಜೆಗೆಟ್ಟ ಸರಕಾರದ ವಿರುದ್ಧ ಹೋರಾಡುವ ಕರ್ತವ್ಯವನ್ನು ಬಿಜೆಪಿ ಮಾಡುತ್ತಿದೆ. ರಾಜ್ಯ ಸರಕಾರವು ಈಗಲಾದರೂ ಎಚ್ಚತ್ತುಕೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ಒತ್ತಾಯವನ್ನು ಮುಂದಿಟ್ಟರು.
ಗುತ್ತಿಗೆದಾರನ ಆತ್ಮಹತ್ಯೆ, ಸುಪಾರಿ ಕಿಲ್ಲರ್‍ಗಳನ್ನು ಬಾಡಿಗೆಗೆ ಪಡೆದಿರುವುದು ಗಂಭೀರ ಪ್ರಕರಣ. ಪ್ರಿಯಾಂಕ್ ಖರ್ಗೆಯವರ ಕುರಿತು ಸಾಫ್ಟ್ ಕಾರ್ನರ್ ಪ್ರಶ್ನೆಯೇ ಇಲ್ಲ. ಅವರು ಗುತ್ತಿಗೆದಾರನ ಆತ್ಮಹತ್ಯೆ ಸಂಬಂಧ ಸಚಿವ ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿದ್ದರು.
ಪ್ರಿಯಾಂಕ್ ಅವರೇ, ನಾನು ಮೊದಲ ಬಾರಿ ಶಾಸಕನಾಗಿ ಗೆದ್ದಿರಬಹುದು. ಆದರೆ, ನಾನು ಶಾಸಕನಾಗುವ ಮೊದಲು ಕೆ.ಆರ್.ಪೇಟೆ, ಶಿರಾದಲ್ಲಿ ಚುನಾವಣೆ ಎದುರಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದನ್ನೂ ತಿಳಿದುಕೊಳ್ಳಿ ಎಂದು ಪ್ರಶ್ನೆಗೆ ಉತ್ತರ ನೀಡಿ ಸವಾಲೆಸೆದರು.
ವರುಣಾದಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಿದ್ದರೆ, ನಿಮ್ಮ ಸಿದ್ದರಾಮಯ್ಯನವರ ಪರಿಸ್ಥಿತಿ ಏನಾಗುತ್ತಿತ್ತು ಎಂದು ಸಿದ್ದರಾಮಯ್ಯನವರ ಬಳಿ ಕೇಳಿ ತಿಳಿದುಕೊಳ್ಳಿ ಎಂದು ತಿಳಿಸಿದರು. ನನ್ನ ಬಗ್ಗೆ ಉದ್ಧಟತನದಿಂದ ಮಾತನಾಡುವ ಬದಲಾಗಿ ಸಚಿವರಾದ ನೀವು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಎಚ್ಚರಿಸಿದರು.












Click it and Unblock the Notifications