ಕಾವೇರಿ ವಿವಾದ : ಏಪ್ರಿಲ್ 12ರಂದು ಕರ್ನಾಟಕ ಬಂದ್
Recommended Video

ಬೆಂಗಳೂರು, ಏಪ್ರಿಲ್ 05 : ಕಾವೇರಿ ನಿರ್ವಹಣಾ ಮಂಡಳಿಯನ್ನು ರಚನೆ ಮಾಡಬಾರದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಏಪ್ರಿಲ್ 12ರ (ಗುರುವಾರ) ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಬೇಡ ಎಂದು ಹೊಸೂರು ರಸ್ತೆಯ ಅತ್ತಿಬೆಲೆ ಬಳಿ ಗುರುವಾರ ವಾಟಾಳ್ ನಾಗರಾಜ್ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, 'ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬಾರದು ಎಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ' ಎಂದರು.

'ಇನ್ನು ಮುಂದೆ ಕರ್ನಾಟಕದಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಚಿತ್ರಗಳನ್ನು ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ಪರವಾಗಿ ನಿಂತಿರುವ ಇಬ್ಬರು ನಟರ ಚಿತ್ರಗಳು ಇಲ್ಲಿ ಬಿಡುಗಡೆ ಯಾಗುವುದು ಬೇಡ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಕೇಂದ್ರ ಸರ್ಕಾರ ಮುಂದಾಗಬಾರದು. ಮಂಡಳಿ ರಚನೆ ಮಾಡಲು ಮುಂದಾದರೆ ಕನ್ನಡಿಗರಿಂದ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ' ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗೂತ್ತ ಅತ್ತಿಬೆಲೆ ಬಳಿ ರಸ್ತೆ ನಡೆಸುತ್ತಿದ್ದ ವಾಟಾಳ್ ನಾಗರಾಜ್ ಮತ್ತು ಇತರ ಕನ್ನಡ ಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಫೆ.16ರಂದು ಕಾವೇರಿ ವಿವಾದದ ಅಂತಿಮ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ, ಕರ್ನಾಟಕ ರಾಜ್ಯ ನಿರ್ವಹಣಾ ಮಂಡಳಿ ರಚನೆ ಮಾಡಬಾರದು ಎಂದು ವಿರೋಧ ವ್ಯಕ್ತಪಡಿಸುತ್ತಿದೆ.
2016ರ ಸೆಪ್ಟೆಂಬರ್‌ನಲ್ಲಿ ಕಾವೇರಿ ವಿವಾದದ ಕುರಿತು ಕರ್ನಾಟಕ ವಿರುದ್ಧವಾಗಿ ತೀರ್ಪು ಬಂದಿತ್ತು. ಆಗ ಬೆಂಗಳೂರು ನಗರದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಹಲವು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ನಗರದ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.












Click it and Unblock the Notifications