ಕರ್ನಾಟಕ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ, ಸೆ.17ಕ್ಕೆ ಕ್ಲೈಮ್ಯಾಕ್ಸ್?
ಬೆಂಗಳೂರು, ಸೆಪ್ಟೆಂಬರ್ 10 : ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಸ್ವತಃ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕಣಕ್ಕಿಳಿದಿದ್ದಾರೆ.
ಸೆಪ್ಟೆಂಬರ್ 3, ಸೆಪ್ಟೆಂಬರ್ 8ರ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗುತ್ತಿದೆ. ಜಾರಕಿಹೊಳಿ ಸಹೋದರರು, ಡಿ.ಕೆ.ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯದ ತನಿಖೆ ಸೇರಿದಂತೆ ಹಲವು ಘಟನೆಗಳು ನಡೆದಿವೆ. ವಿದೇಶಕ್ಕೆ ಹೋಗಬೇಕಿದ್ದ ಪರಮೇಶ್ವರ ತಮ್ಮ ಪ್ರವಾಸ ರದ್ದು ಮಾಡಿದ್ದಾರೆ.
ಸೆ.17ರಂದು ರಾಜ್ಯ ರಾಜಕಾರಣದಲ್ಲಿ ಕೆಲವು ಬದಲಾವಣೆಯಾಗಲಿದೆ. ವಿದೇಶ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.16ರಂದು ರಾಜ್ಯಕ್ಕೆ ವಾಪಸ್ ಆಗಲಿದ್ದು, ಸೆ.17ರಿಂದ ಕಾರ್ಯ ಪ್ರವೃತ್ತರಾಗಲಿದ್ದಾರೆ.
ಜಾರಕಿಹೊಳಿ ಸಹೋದರರು ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎಂಬ ಸುದ್ದಿ ದಟ್ಟವಾಗಿದೆ. ಮತ್ತೊಂದು ಕಡೆ ಆಪರೇಷನ್ ಕಮಲದಿಂದ ಶಾಸಕರನ್ನು ಉಳಿಸಿಕೊಳ್ಳಲು ಸ್ವತಃ ದೇವೇಗೌಡರೇ ಕಾರ್ಯ ಪ್ರವೃತ್ತರಾಗಿದ್ದಾರೆ. ಇನ್ನೊಂದು ವಾರದಲ್ಲಿ ರಾಜ್ಯ ರಾಜಕಾರಣದ ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ.

ಡಾ.ಜಿ.ಪರಮೇಶ್ವರ ವಿದೇಶ ಪ್ರವಾಸ ರದ್ದು
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ವಿದೇಶ ಪ್ರವಾಸ ದಿಢೀರ್ ರದ್ದಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಅನ್ವಯ ವಿದೇಶ ಪ್ರವಾಸವನ್ನು ಅವರು ರದ್ದುಗೊಳಿಸಿದ್ದಾರೆ.
ಜಿ.ಪರಮೇಶ್ವರ ಅವರು ಮೂರು ದಿನಗಳ ಕಾಲ ನಡೆಯುವ ಗ್ಲೋಬಲ್ ಕ್ಲೈಮೇಟ್ ಸಮಿಟ್‌ನಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ತೆರಳಬೇಕಿತ್ತು. ಇಂದು ರಾತ್ರಿ ಅವರು ಪ್ರಯಾಣ ಬೆಳೆಸಬೇಕಿತ್ತು. ಆದರೆ, ಇಂದು ಮಧ್ಯಾಹ್ನ ಪ್ರವಾಸವನ್ನು ರದ್ದು ಮಾಡಿದ್ದಾರೆ.

ಎಚ್.ಡಿ.ದೇವೇಗೌಡ ಕರೆ
ಆಪರೇಷನ್ ಕಮಲ ನಡೆಯಲಿದೆ ಎಂಬ ಸುದ್ದಿ ಹಬ್ಬಿದ್ದು ಪಕ್ಷದ ಶಾಸಕರನ್ನು ಉಳಿಸಿಕೊಳ್ಳಲು ಜೆಡಿಎಸ್ ಮುಂದಾಗಿದೆ. ಶುಕ್ರವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶಾಸಕಾಂಗ ಪಕ್ಷದ ಸಭೆ ನಡೆಸಿದ್ದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೆಹಲಿ ಪ್ರವಾಸದಲ್ಲಿದ್ದಾರೆ. ಆದರೆ, ರಾಜ್ಯರಾಜಕಾರಣದಲ್ಲಿ ಅವರು ಸಕ್ರಿಯರಾಗಿದ್ದು, ಆಪರೇಷನ್ ಕಮಲಕ್ಕೆ ಒಳಗಾಗಬಹುದು ಎಂದು ಅಂದಾಜಿಸಿರುವ ಶಾಸಕರಿಗೆ ಕರೆ ಮಾಡಿ ಕುಮಾರಸ್ವಾಮಿ ಅವರ ಕೈ ಬಲಪಡಿಸಿ ಎಂದು ಮನವಿ ಮಾಡಿದ್ದಾರೆ.

ಜಾರಕಿಹೊಳಿ ಸಹೋದರರ ನಡೆ ನಿಗೂಢ
ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಸತೀಶ ಮತ್ತು ರಮೇಶ ಜಾಕಿಹೊಳಿ ಅವರ ಮುಂದಿನ ನಡೆ ನಿಗೂಢವಾಗಿದೆ. ಆದರೆ, ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದೆ.
ಸೆ.9ರಂದು ಜಾರಕಿಹೊಳಿ ಸಹೋದರರು ಮಹಾರಾಷ್ಟ್ರದ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಸೆ.11ರಂದು ನಾಯಕರು ಬೆಂಗಳೂರಿಗೆ ಆಗಮಿಸಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಸೆ.17ರಂದು ಅಂತಿಮ ಚಿತ್ರಣ
ಸೆ.3 ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟ, ಸೆಪ್ಟೆಂಬರ್ 7 ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ, ಸೆ.8 ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ ಅಸ್ತ್ರ ಈ ಎಲ್ಲಾ ಬೆಳವಣಿಗೆಗಳ ಕ್ಲೈಮ್ಯಾಕ್ಸ್ ಸೆ.17ರಂದು ಆಗಲಿದೆ?
ವಿದೇಶ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.16 ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದು, ಸೆ.17ರಂದು ಜಾರಕಿಹೊಳಿ ಸಹೋದರರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಸೆ.17ರಂದು ಏನಾಗಲಿದೆ? ಎಂದು ಕಾದು ನೋಡಬೇಕು.











Click it and Unblock the Notifications