Valmiki scam: ವಾಲ್ಮೀಕಿ ಹಗರಣ- ಎಸ್‌ಐಟಿ ದೋಷಾರೋಪ ಪಟ್ಟಿ ಸಿದ್ದ- ನಾಗೇಂದ್ರ, ಬಸನಗೌಡ ದದ್ದಲ್ ಹೆಸರು ಮಿಸ್
ಬೆಂಗಳೂರು ಆಗಸ್ಟ್ 14: ವಾಲ್ಮೀಕಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ದೋಷಾರೋಪ ಪಟ್ಟಿ ಸಿದ್ದ ಪಡಿಸಿದ್ದು ಈ ಪಟ್ಟಿಯಲ್ಲಿ ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಅವರ ಹೆಸರಿಲ್ಲದೇ ಇರುವುದು ಕಂಡು ಬಂದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ 89.63 ಕೋಟಿ ಅಕ್ರಮ ವರ್ಗಾವಣೆ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ 3,072 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ.
ತನಿಖಾಧಿಕಾರಿ ಡಿವೈಎಸ್‌ಪಿ ಬಿ.ಎಸ್ ಶ್ರೀನಿವಾಸ್ ರಾಜ್ ಸಲ್ಲಿಸಿರುವ ದೋಷಾರೋಪ ಪಟ್ಟಿ ಸದ್ಯ ಲಭ್ಯವಾಗಿದೆ. ಈ ದೋಷಾರೋಪ ಪಟ್ಟಿಯಲ್ಲಿ ಕೋಟಿ ಕೋಟಿ ಲೂಟಿ ಮಾಡಿದ ಗ್ಯಾಂಗ್‌ನಲ್ಲಿ ಮಾಚಿ ಸಚಿವ ಬಿ ನಾಗೇಂದ್ರ ಮತ್ತು ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರ ಹೆಸರೇ ಇಲ್ಲ.

ಈ ಪಟ್ಟಿಯಲ್ಲಿ ಒಟ್ಟು 12 ಆರೋಪಿಗಳ ವಿರುದ್ಧ ಆರೋಪ ಮಾಡಲಾಗಿದೆ. ಇವರೆಲ್ಲರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪೈಕಿ 12ನೇ ಆರೋಪಿ ಎಂದು ಹೆಸರಿಸಲಾಗಿರುವ ನೆಕ್ಕಂಟಿ ನಾಗರಾಜ್ ಬಿ ನಾಗೇಂದ್ರ ಅವರ ಆಪ್ತ. ಆದರೆ ಈ ಪಟ್ಟಿಯಲ್ಲಿ ಅವರ ಹೆಸರು ಉಲ್ಲೇಖ ಇಲ್ಲದೇ ಇರುವುದು ಕಂಡು ಬಂದಿದೆ.
ದೋಷಾರೋಪ ಪಟ್ಟಿಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಜೆ.ಜಿ ಪದ್ಮನಾಭ ಅವರನ್ನು ಐದನೇ ಹಾಗೂ ನಿಗಮದ ಲೆಕ್ಕಾಧಿಕಾರಿ ಪರಶುರಾಮ್ ದುರುಗಣ್ಣವರ್ ಆರನೇ ಆರೋಪಿಯಾಗಿಸಲಾಗಿದೆ. ಈ ಹರಣದ ವಿರುದ್ಧ ಒಟ್ಟು 109 ಸಾಕ್ಷಿಗಳನ್ನು ಕಲೆ ಹಾಕಲಾಗಿದೆ.
ದೋಷಾರೋಪ ಪಟ್ಟಿಯಲ್ಲಿ ವಂಚನೆಯ ಉದ್ದೇಶದಿಂದಲೇ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ನಂತರ ಆ ಖಾತೆಗಳಿಗೆ ನಿಗಮದ ಖಾತೆಯಿಂದ 89,63 ಕೋಟಿ ವರ್ಗಾಯಿಸಿದ್ದಾರೆ ಎಂದು 12 ಆರೋಪಿಗಳ ವಿರುದ್ಧ ಆರೋಪಿಸಲಾಗಿದೆ. ಇದು ದೃಢಪಟ್ಟಿರುವುದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ.

ಈ ಪ್ರಕರಣದಲ್ಲಿ ನೆಕ್ಕಂಟಿ ನಾಗರಾಜ್ ತನ್ನ ಸಂಬಂಧಿ ನಾಗೇಶ್ವರ್ ರಾವ್ ಮೂಲಕ 2023ರ ನವೆಂಬರ್‌ನಲ್ಲಿ ಸತ್ಯನಾರಾಯಣ ವರ್ಮಾನನ್ನು ಪರಿಚಯ ಮಾಡಿಕೊಂಡಿದ್ದ. ಒಂದು ವರ್ಷದ ಬಳಿಕ ನಿಗಮದ ಎಂಡಿ ಪದ್ಮನಾಭ ಅವರನ್ನು ಭೇಟಿ ಮಾಡಿ, ನಿಗಮದ ಹಣವನ್ನು ಠೇವಣಿ ಇಡುವ ಬಗ್ಗೆ ಚರ್ಚೆ ನಡೆಸಿದ್ದ. ಹೀಗೆ ಸತ್ಯನಾರಾಯಣ ಹೇಳಿದಾಗಲೆಲ್ಲ ನೆಕ್ಕಂಟಿ ನಾಗರಾಜ್ ದೂರವಾಣಿ ಮೂಲಕ ಪದ್ಮನಾಭ್ ಅವರನ್ನು ಸಂಪರ್ಕಿಸಿ ಹಣ ಅಕ್ರಮ ವರ್ಗಾವಣೆ ಮಾಡಿದ್ದ ಎಂದು ತನಿಖೆಯಿಂದ ಬಯಲಾಗಿದೆ.
ಈ ಕೆಲಸ ಮಾಡಿದರೆ ಒಂದು ಪರ್ಸೆಂಟ್ ಕಮಿಷನ್ ನೀಡುವುದಾಗಿ ನಾಗೇಶ್ವರ ರಾವ್‌ಗೆ ಸತ್ಯನಾರಾಯಣ ವರ್ಮಾ ನಂಬಿಸಿದ್ದು ತಿಳಿದು ಬಂದಿದೆ. ಹೀಗೆ ನಿಗಮದ 89,63 ಕೋಟಿ ವರ್ಗಾವಣೆಯಾಗಲು ಕಾರಣನಾಗಿರುವ ರಾವ್, ತನ್ನ ಕೆಲಸಕ್ಕೆ 1.50 ಕೋಟಿ ಅಕ್ರಮ ಲಾಭ ಮಾಡಿಕೊಂಡಿದ್ದು ಗೊತ್ತಾಗಿದೆ.
ದೋಷಾರೋಪಣೆ ಪಟ್ಟಿಯಲ್ಲಿ ಆರೋಪಿಗಳ ವಿವರ ನೀಡಲಾಗಿದೆ. ಸತ್ಯನಾರಾಯಣ ವರ್ಮಾ ಗಾದಿರಾಜು, ಶ್ರೀನಿವಾಸ ರಾವ್ ಕಾಕಿ, ಸತ್ಯನಾರಾಯಣ ಇಟಕಾರಿ, ಸಾಯಿ ತೇಜ ದೇವರಪಲ್ಲಿ, ಜೆಜೆ ಪದ್ಮನಾಭ, ಪರಶುರಾಮ ದುರುಗಣ್ಣನವರ್, ಎಂ, ಚಂದ್ರಮೋಹನ್, ಜಿ.ಕೆ ಜಗದೀಶ್, ತೇಜ ತಮಟಮ್, ಪಿಟ್ಟಲ ಶ್ರೀನಿವಾಸ್, ಈ.ನಾಗೇಶ್ವರ ರಾವ್, ನೆಕ್ಕಂಟಿ ನಾಗರಾಜ್ ಆರೋಪಿಗಳಾಗಿದ್ದಾರೆ.












Click it and Unblock the Notifications