Valmiki Corporation Scam: ಚಂದ್ರಶೇಖರ್ ಕುಟುಂಬಕ್ಕೆ ಕೆಎಸ್ ಈಶ್ವರಪ್ಪ ಆರ್ಥಿಕ ನೆರವು
ಶಿವಮೊಗ್ಗ ಸೆಪ್ಟೆಂಬರ್ 14: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ 5 ಲಕ್ಷ ಆರ್ಥಿಕ ನೆರವು ನೀಡಲಾಗಿದೆ.
ರಾಷ್ಟ್ರ ಭಕ್ತ ಬಳಗದಿಂದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಐದು ಲಕ್ಷ ಚಂದ್ರಶೇಖರ್ ಕುಟುಂಬಕ್ಕೆ 5 ಲಕ್ಷ ಆರ್ಥಿಕ ನೆರವು ನೀಡಲಾಗಿದೆ. ಶಿವಮೊಗ್ಗ ನಗರದ ಶಿವಾಲಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ, ದೇವಾಲಯದಿಂದ ಕಾಲ್ನಡಿಗೆಯಲ್ಲಿ ಚಂದ್ರಶೇಖರ್ ಮನೆಗೆ ತೆರಳಿದ ಕೆ.ಎಸ್.ಈಶ್ವರಪ್ಪ ಅವರು ನೆರವು ನೀಡಿದ್ದಾರೆ. ರಾಷ್ಟ್ರದ ಭಕ್ತರ ಬಳಗದಿಂದ ಚಂದ್ರಶೇಖರ್ ಪತ್ನಿ ಕವಿತಾಗೆ ನಗದು ರೂಪದಲ್ಲಿ ಹಣ ಹಸ್ತಾಂತರ ಮಾಡಲಾಗಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, 'ನಾನು ತುಂಬಾ ನೊಂದು ಮಾತಾನಾಡುತ್ತಿದ್ದೇನೆ. ಇಡೀ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಅನ್ನುವುದಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವೇ ಸಾಕ್ಷಿ. 187 ಕೋಟಿ ವ್ಯವಹಾರ ಆಗಿರೋದು ಸಿಎಂ ಕೂಡ ಒಪ್ಪಿಕೊಂಡಿದ್ದಾರೆ. ಚಂದ್ರಶೇಖರ್ ಮೃತಪಟ್ಟಾಗ ಸಿಎಂ ಇಲ್ಲಿಗೆ ಬರಬೇಕಿತ್ತು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇನೆ ಅಂತಾ ಹೇಳಬೇಕಿತ್ತು' ಎಂದು ಬೇಸರ ವ್ಯಕ್ತಪಡಿಸಿದರು.
ನಾಗೇಂದ್ರ ಇವತ್ತು ಜೈಲಿನಲ್ಲಿ ಇದ್ದಾರೆ. ಚಂದ್ರಶೇಖರ್ ಆತ್ಮಹತ್ಯೆಗೆ ಮುಖ್ಯಮಂತ್ರಿ ಪರಿಹಾರ ಕೊಡುವ ಭರವಸೆ ನೀಡಿದ್ದರು. ಮುಖ್ಯಮಂತ್ರಿಗಳ ಭರವಸೆ ಹಾಗೆಯೇ ಉಳಿದಿದೆ. ಚಂದ್ರಶೇಖರ್ ಕುಟುಂಬಕ್ಕೆ ಈ ಹಿಂದೆ ರಾಷ್ಟ್ರ ಭಕ್ತರ ಬಳಗದಿಂದ ಈ ಹಿಂದೆ 3 ಲಕ್ಷ ಕೊಟ್ಟಿದ್ದೇವು. ಇಂದು 5 ಲಕ್ಷ ರೂ ಪರಿಹಾರದ ಹಣ ಕೊಟ್ಟಿದ್ದೇವೆ. ಸೆ. 20 ರೊಳಗೆ ಸರ್ಕಾರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು. ಪರಿಹಾರ ಕೊಡದಿದ್ದರೆ ಜೈಲು ಭರೋ ಚಳುವಳಿ ಮಾಡ್ತೀವಿ. ಪರಿಹಾರ ಸಿಗಲಿ ಅನ್ನೋದು ನಮ್ಮ ಉದ್ದೇಶ. ಸಿಎಂ ಈ ಬಗ್ಗೆ ಗಮನಹರಿಸಿ ಪರಿಹಾರ ಬಿಡುಗಡೆ ಮಾಡಲಿ ಎಂದು ಎಚ್ಚರಿಕೆ ನೀಡಿದರು.

ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಪ್ರಕರಣ
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಅನುದಾನ ಹಣವು ದುರುಪಯೋಗವಾಗಿರುವುದಾಗಿ ಆರೋಪಿಸಿ ಡೆತ್ ನೋಟ್ ಬರೆದು ಚಂದ್ರಶೇಖರ್ ಪಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಮೃತರ ಪತ್ನಿಯು ನೀಡಿದ ದೂರಿನ ಮೇರೆಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಮುಖ್ಯ ನಿಬಂಧಕರಾದ ಎ. ರಾಜಶೇಖರ್ ರವರು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಅನುದಾನ ಹಣವು ಬ್ಯಾಂಕ್ ಮೂಲಕ ದುರ್ಬಳಕೆಯಾಗಿರುವುದಾಗಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರು ನಗರದ ಹೈಗೌಂಡ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ಎರಡು ಪ್ರಕರಣಗಳನ್ನು ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರಗಳ ಗಂಭೀರತೆಯನ್ನು ಸರ್ಕಾರವು ಪರಿಗಣಿಸಿ ಈ ಕುರಿತು ಸಮಗ್ರ ತನಿಖೆಯನ್ನು ಕೈಗೊಳ್ಳಲು ರಾಜ್ಯದ ವಿಶೇಷ ತನಿಖಾ ಸಂಸ್ಥೆಯಾದ ಸಿಐಡಿಯ ವಿಶೇಷ ತನಿಖಾ ತಂಡವನ್ನು ರಚಿಸಿ ಸರ್ಕಾರವು ಆದೇಶಿಸಿದೆ.












Click it and Unblock the Notifications