ವಾಲ್ಮೀಕಿ ನಿಗಮದ ಹಗರಣ: ಹರೀಶ್ ಬಂಧನ, ಮಾಜಿ ಸಚಿವರಿಗೆ ಶುರುವಾಯಿತು ಡವಡವ
ವಾಲ್ಮೀಕಿ ನಿಗಮದಲ್ಲಿ ನಡೆದ ನೂರಾರು ಕೋಟಿ ರೂಪಾಯಿ ಹಗರಣದ ತನಿಖೆಗೆ ಮಹತ್ವದ ತಿರುವು ಸಿಕ್ಕಿದೆ. ಬುಧವಾರ ಜಾರಿ ನಿರ್ದೇಶನಾಲಯ ತಂಡದ ಅಧಿಕಾರಿಗಳು ದಾಳಿ ಮಾಡಿದ್ದು, ಆರೋಪಿಗಳಿಗೆ ಡವಡವ ಆರಂಭವಾಗಿದೆ. ರಾಜ್ಯದ 18 ಕಡೆಗಳಲ್ಲಿ ದಾಳಿ ನಡೆದಿದ್ದು, ಇದೇ ವೇಳೆ ಮಾಜಿ ಸಚಿವ ಬಿ.ನಾಗೇಂದ್ರ ಅವರ ಪಿಎ ಅವರನ್ನು ಬಂಧಿಸಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ 18 ಕಡೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ ಮಾಜಿ ಸಚಿವ ನಾಗೇಂದ್ರ ಅವರ ಫ್ಲ್ಯಾಟ್ ಮೇಲೂ ದಾಳಿ ನಡೆಸಿದ್ದು ಪರಿಶೀಲನೆ ನಡೆದಿದೆ. ತಮ್ಮ ಆಪ್ತ ಹರೀಶ್ ಅವರ ಬಂಧನ ಆಗುತ್ತಿದ್ದಂತೆ ಮಾಜಿ ಸಚಿವರಿಗೆ ಹೆದರಿಕೆ ಶುರುವಾಗಿದೆ. ನಾಗೇಂದ್ರ ಇಂದು ಬಂಧನವಾಗುವ ಸಾಧ್ಯತೆ ದಟ್ಟವಾಗಿದೆ.

ಹರೀಶ್ ಬಂಧಿಸಿದ್ದು ಏಕೆ?
ವಾಲ್ಮಿಕಿ ನಿಗಮದ ಹಗರಣವನ್ನು ಅಧಿಕಾರಿಗಳು ಎಳೆ ಎಳೆಯಾಗಿ ಬಿಚ್ಚುತ್ತಿದ್ದಾರೆ. ಹೀಗಾಗಿ ಪಿಎ ಹರೀಶ್ ಅವರ ಪಾತ್ರದ ಸುಳಿವು ಸಿಕ್ಕಿದೆ. ನಿಗಮದ ಅಧ್ಯಕ್ಷ ನಾಗೇಂದ್ರ ಅವರ ಪಿಎ ಅವರಿಗೆ ಎಂಡಿ ಪದ್ಮನಾಭ್ ಹಣ ವರ್ಗಾವಣೆ ಮಾಡಲಾಗಿದೆ. ಹರೀಶ್ ಅವರ ಖಾತೆಗೆ 25 ಲಕ್ಷ ಬಂದಿದೆ. ಅಲ್ಲದೆ ಇನ್ನು ಹರೀಶ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ವಿಚಾರಣೆಗೆ ಬಂಧಿಸಿದ್ದಾರೆ.
ಈ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಾಕ್ಷ ಬಿವೈ ವಿಜಯೇಂದ್ರ ಮಾತನಾಡಿ, ವಾಲ್ಮೀಕಿ ನಿಗಮದ ಬಹುಕೋಟಿ ಅವ್ಯವಹಾರ ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದ ಭ್ರಷ್ಟಾಚಾರವಾಗಿದೆ. ದಲಿತರ ಹಣವನ್ನು ಬೇರೆ ರಾಜ್ಯಗಳ ಚುನಾವಣೆಗೆ ಬಳಸಿಕೊಂಡಿರುವುದು ಜಗಜ್ಜಾಹೀರಾಗಿದೆ ಎಂದಿದ್ದಾರೆ.












Click it and Unblock the Notifications