ಚಿತ್ರಗಳಲ್ಲಿ ನೋಡಿ ನೂತನ ರಾಜ್ಯಪಾಲರ ಪ್ರಮಾಣ ವಚನ
ಬೆಂಗಳೂರು, ಸೆ.2 : ಕರ್ನಾಟಕದ ನೂತನ ರಾಜ್ಯಪಾಲರಾಗಿ ಗುಜರಾತ್ ಮೂಲದ ವಜುಭಾಯ್ ರುಡಾಭಾಯ್ ವಾಲಾ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಅವರು ವಜುಭಾಯ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು.
ಸೋಮವಾರ ಸಂಜೆ ಐದು ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಅವರು ನೂತನ ರಾಜ್ಯಪಾಲರಿಗೆ ಪ್ರಮಾಣವಚನ ಬೋಧಿಸಿದರು. ವಜುಭಾಯ್ ವಾಲಾ ಅವರು ಹಿಂದಿಯಲ್ಲಿ, ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.[ರಾಜ್ಯಪಾಲರ ಪರಿಚಯ ಇಲ್ಲಿದೆ]
ಪ್ರಮಾಣ ವಚನದ ಬಳಿಕ ಮುಖ್ಯ ನ್ಯಾಯಮೂರ್ತಿಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಗೌರವಿಸಿದರು. ಪ್ರಮಾಣವಚನ ಸ್ವೀಕಾರಕ್ಕೆ ಸಚಿವರು, ಬಿಜೆಪಿ ಶಾಸಕರು ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು. ಪ್ರಮಾಣ ವಚನ ಸಮಾರಂಭದ ಚಿತ್ರಗಳು ಇಲ್ಲಿವೆ

ಬೆಂಗಳೂರಿಗೆ ಆಗಮಿಸಿದ ವಜುಭಾಯ್ ವಾಲಾ
ಅಹಮದಾಬಾದ್‌ನಿಂದ ಸೋಮವಾರ ಬೆಳಗ್ಗೆ ವಜುಭಾಯ್ ರುಡಾಭಾಯ್ ವಾಲಾ ಅವರು ಬೆಂಗಳೂರಿಗೆ ಆಗಮಿಸಿದರು. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ವಜುಭಾಯ್ ವಾಲಾ ಅವರನ್ನು ಬರಮಾಡಿಕೊಂಡರು.

ಸಂಜೆ ಪ್ರಮಾಣ ವಚನ ಸಮಾರಂಭ
ರಾಜಭವನದಲ್ಲಿ ಸಂಜೆ ಪ್ರಮಾಣ ವಚನ ಸಮಾರಂಭ ಆಯೋಜಿಸಲಾಗಿತ್ತು. ರಾಜಭವನಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ವಜುಭಾಯ್ ವಾಲಾ ಅವರಿಗೆ ಹೂಗುಚ್ಛ ನೀಡಿ ಸ್ವಾಗತ ಕೋರಿದರು.

ವಿಶೇಷ ಪೂಜೆ ಸಲ್ಲಿಕೆ
ಪ್ರಮಾಣ ವಚನ ಸಮಾರಂಭಕ್ಕೂ ವಜುಭಾಯ್ ವಾಲಾ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪ್ರಮಾಣ ವಚನ ಬೋಧಿಸಿದ ಸಿಜೆ
ಗುಜರಾತ್ ಮೂಲದ ವಜುಭಾಯ್ ರುಡಾಭಾಯ್ ವಾಲಾ ಅವರಿಗೆ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲಾ ಅವರು ವಜುಭಾಯ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು.

ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ
ವಜುಭಾಯ್ ರುಡಾಭಾಯ್ ವಾಲಾ ಅವರು ಹಿಂದಿ ಭಾಷೆಯಲ್ಲಿ, ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

10 ನಿಮಿಷದ ಕಾರ್ಯಕ್ರಮ
ನೂತನ ರಾಜ್ಯಪಾಲರ ಅಧಿಕಾರ ಸ್ವೀಕಾರ ಸಮಾರಂಭ ಹತ್ತು ನಿಮಿಷದಲ್ಲಿ ಮುಕ್ತಾಯಗೊಂಡಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ರಾಷ್ಟ್ರಪತಿ ಹೊರಡಿಸಿರುವ ಕರ್ನಾಟಕ ರಾಜ್ಯಪಾಲರ ನೇಮಕ ಆದೇಶವನ್ನು ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ವಾಚಿಸಿದರು. ನಂತರ ಪ್ರಮಾಣ ವಚನ ಸಮಾರಂಭ ನಡೆಯಿತು, ಬಳಿಕ ರಾಷ್ಟ್ರಗೀತೆಯೊಂದಿಗೆ ಸಮಾರಂಭ ಕೊನೆಗೊಂಡಿತು.

ಸಂಪ್ರದಾಯ ಪಾಲನೆ
ಪ್ರಮಾಣವಚನ ಸ್ವೀಕಾರದ ಬಳಿಕ ಸಂಪ್ರದಾಯದಂತೆ ನೂತನ ರಾಜ್ಯಪಾಲರನ್ನು ಸಿಎಂ ಹಾಗೂ ಮುಖ್ಯ ನ್ಯಾಯಮೂರ್ತಿ ರಾಜಭವನದ ಒಳಗೆ ಕರೆದೊಯ್ದರು. ಅಧಿಕೃತ ಕಚೇರಿ ಪ್ರವೇಶಿಸುವ ಮುನ್ನ ಮತ್ತೊಮ್ಮೆ ರಾಷ್ಟ್ರಗೀತೆ ನುಡಿಸಲಾಯಿತು.

ಹಲವಾರು ನಾಯಕರು ಪಾಲ್ಗೊಂಡಿದ್ದರು
ರಾಜ್ಯಪಾಲರ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಸಂಪುಟದ ಹಲವು ಸಚಿವರು, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಸಂಸದರಾದ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.












Click it and Unblock the Notifications