ತಪ್ಪದೇ ಬನ್ನಿ ಮೇಲುಕೋಟೆ ವೈರಮುಡಿ ಉತ್ಸವಕ್ಕೆ

By: ಬಿ.ಎಂ.ಲವಕುಮಾರ್, ಮೈಸೂರು
Subscribe to Oneindia Kannada

ಮೇಲುಕೋಟೆ ಎಂದಾಕ್ಷಣ ಚೆಲುವರಾಯಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಕಣ್ಮುಂದೆ ಬರುತ್ತದೆ. ಹಾಗೆನೋಡಿದರೆ ಮೇಲುಕೋಟೆಯಲ್ಲಿ ಪ್ರತಿವರ್ಷವೂ ಹಲವಾರು ಕಾರ್ಯಕ್ರಮ, ಉತ್ಸವಗಳು ನಡೆಯುತ್ತವೆ. ಆದರೆ ಅವುಗಳಲ್ಲಿ ಹತ್ತು ದಿನಗಳ ಕಾಲ ನಡೆಯುವ ಚೆಲುವರಾಯಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಅತ್ಯಂತ ಪ್ರಮುಖವಾಗಿದೆ.

ಚೆಲುವರಾಯಸ್ವಾಮಿಯ ವೈರಮುಡಿಯ ಬ್ರಹ್ಮೋತ್ಸವವು ಮಾರ್ಚ್ 19ರಂದು ನಡೆಯಲಿದ್ದು, ಮಾ. 22ರಂದು ರಥೋತ್ಸವ ನಡೆಯಲಿದೆ. ಪ್ರಾಪಂಚಿಕ ಪ್ರಖ್ಯಾತತೆ ಪಡೆದ ಮೇಲುಕೋಟೆ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸಿ ತಮ್ಮ ಭಕ್ತಿಭಾವವನ್ನು ಸಮರ್ಪಿಸಲಿದ್ದಾರೆ.[ಶಿರಸಿ ಮಾರಿಕಾಂಬಾ ಜಾತ್ರೆಗೆ ಎಲ್ಲರೂ ಬನ್ನಿ]

Vairamudi fest 2016 in Melukote Mandya

ವೈರಮುಡಿ ಎಂದರೇನು?

ವೈರಮುಡಿ ಎಂಬುವುದು ವಜ್ರ ಖಚಿತ ಕಿರೀಟವಾಗಿದ್ದು, ಇದು ಶ್ರೀಮಾನ್ ನಾರಾಯಣನ ಕಿರೀಟವೆಂದು ಕರೆಯಲಾಗುತ್ತದೆ. ದ್ವಾಪರಯುಗದಲ್ಲಿ ಕೃಷ್ಣನ ಮೂಲಕ ಚೆಲುವರಾಯನಿಗೆ ಗರುಡನಿಂದ ತೊಡಿಸಿದನೆಂಬುವುದು ಒಂದೆಡೆಯಾದರೆ, ಮತ್ತೊಂದೆಡೆ ವೈಕುಂಠದಿಂದ ರಾಕ್ಷಸ ವಿರೋಚನ ಕದ್ದಿದ್ದ ನಾರಾಯಣನ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಡಿ ಮರಳಿ ತಂದು ಚೆಲುವರಾಯನಿಗೆ ಅರ್ಪಿಸಿದನೆಂಬುದು ಜನವಲಯದಲ್ಲಿರುವ ನಂಬಿಕೆಯಾಗಿದೆ. ಇದನ್ನು ಚೆಲುವರಾಯಸ್ವಾಮಿಗೆ ಧರಿಸುವ ಸಂದರ್ಭ ನಡೆಯುವ ಉತ್ಸವವೇ ವೈರಮುಡಿ ಬ್ರಹ್ಮೋತ್ಸವವಾಗಿದೆ.

ವೈರಮುಡಿ ಉತ್ಸವ ಹೇಗೆ ಆಚರಣೆಗೆ ಬಂತು?

ತ್ರೇತಾಯುಗದಲ್ಲಿ ಅಯೋಧ್ಯೆಯ ದಶರಥ ಮಹಾರಾಜ ತನ್ನ ಮಾನಸ ಪುತ್ರ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿ, ಪಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನವನ್ನು ಗೊತ್ತು ಮಾಡಿ ಅರಮನೆಯಲ್ಲಿ ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿದ್ದನು.[ಮೈಲಾರಲಿಂಗೇಶ್ವರನ ಜಾತ್ರೆಯಲ್ಲಿ ಗೊರವಯ್ಯ ನುಡಿದ ಭವಿಷ್ಯವಾಣಿ]

ಇನ್ನೇನು ಪಟ್ಟಾಭಿಷೇಕ ನಡೆಯಬೇಕೆನ್ನುವಷ್ಟರಲ್ಲಿ ಕೈಕೇಯಿಯ ಕುತಂತ್ರದಿಂದಾಗಿ ಶ್ರೀರಾಮ ವನವಾಸಕ್ಕೆ ತೆರಳಬೇಕಾಯಿತು. ಆದರೆ ತನ್ನ ಅಣ್ಣ ಶ್ರೀರಾಮನ ಪಟ್ಟಾಭಿಷೇಕವನ್ನು ಕಣ್ಣಾರೆ ನೋಡಬೇಕೆನ್ನುವ ಬಯಕೆಯಲ್ಲಿದ್ದ ಸೋದರ ಲಕ್ಷ್ಮಣನಿಗೆ ತನ್ನ ಆಸೆ ಈಡೇರಲಿಲ್ಲವಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು.

ಆದರೆ ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಆದಿಶೇಷನ ಅವತಾರವಾಗಿದ್ದ ಲಕ್ಷ್ಮಣ ಮುಂದೆ ಕಲಿಯುಗದಲ್ಲಿ ರಾಮಾನುಜರಾಗಿ ಜನಿಸಿ, ಶ್ರೀರಾಮನ ಆರಾಧ್ಯದೈವ ಚೆಲುವರಾಯಸ್ವಾಮಿ ನೆಲೆಸಿದ. ಮೇಲುಕೋಟೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕೆ ನಿಗದಿಪಡಿಸಿದ.

ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನದಂದೇ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಧರಿಸುವ ಮೂಲಕ ತನ್ನ ಮನದ ಇಚ್ಛೆಯನ್ನು ನೆರವೇರಿಸಿಕೊಂಡನು ಎಂಬುದು ಪುರಾಣದ ಕಥೆಯಾಗಿದೆ. ಈ ಸುದಿನವನ್ನು ಪ್ರತಿವರ್ಷವೂ ವೈರಮುಡಿ ಬ್ರಹ್ಮೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.[ಜನಪದ ಸೊಗಡಿನಿಂದ ಮಿಂಚಿದ ಸುತ್ತೂರು ರಥೋತ್ಸವ]

Vairamudi fest 2016 in Melukote Mandya

ಮೊದಲು ವೈರಮುಡಿ ಕಿರೀಟ ಯಾರ ಆಶ್ರಯದಲ್ಲಿತ್ತು?

ಮೈಸೂರು ರಾಜರ ಆಡಳಿತದಲ್ಲಿ ವೈರಮುಡಿ ಕಿರೀಟ ರಾಜಾಶ್ರಯದಲ್ಲಿತ್ತಾದರೂ ಬಳಿಕ ಸರ್ಕಾರದ ವಶಕ್ಕೆ ಹಸ್ತಾಂತರಿಸಲಾಯಿತು. ಈಗ ಮಂಡ್ಯದ ಸರ್ಕಾರಿ ಖಜಾನೆಯಲ್ಲಿದ್ದು, ಉತ್ಸವದ ಸಂದರ್ಭ ವೈರಮುಡಿ, ರಾಜಮುಡಿ ಕಿರೀಟವನ್ನು ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ತರಲಾಗುತ್ತದೆ. ಬಳಿಕ ದ್ವಾರದ ಹನುಮಂತನ ಗುಡಿಯ ಬಳಿಯಿಂದ ಬೆಳ್ಳಿ ಪಲ್ಲಕಿಯಲ್ಲಿರಿಸಿ ಪೂಜಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ.

ವೈರಮುಡಿ ಬ್ರಹ್ಮೋತ್ಸವದಲ್ಲಿ ಚೆಲುವರಾಯಸ್ವಾಮಿ ಅಲಂಕಾರ ಹೇಗಿರುತ್ತದೆ?

ವೈರಮುಡಿ ಬ್ರಹ್ಮೋತ್ಸವ ಸಂದರ್ಭ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಮಾತ್ರವಲ್ಲದೆ, ಮೈಸೂರು ಅರಸರಾದ ರಾಜ ಒಡೆಯರ್ ಅರ್ಪಿಸಿದ ರಾಜಮುಡಿಯಲ್ಲದೆ, ಗಂಡಭೇರುಂಡ ಪದಕ, ಶಂಖ, ಚಕ್ರ, ಗಧೆ, ಪದ್ಮಪೀಠ, ಕರ್ಣಕುಂಡಲ ಸೇರಿದಂತೆ 14 ಆಭರಣಗಳನ್ನು ಧರಿಸಲಾಗುತ್ತದೆ.[ಒಂದು ದಿನದ ಮೇಲುಕೋಟೆ ಪ್ರವಾಸಕ್ಕೆ ಹೋಗಿ ಬನ್ನಿ]

Vairamudi fest 2016 in Melukote Mandya

ದಶ ದಿನೋತ್ಸವ ಸಂಭ್ರಮ

* ಹತ್ತು ದಿನಗಳ ಉತ್ಸವದಲ್ಲಿ ಪ್ರತಿದಿನವೂ ವಿವಿಧ ಕೈಂಕರ್ಯಗಳೊಂದಿಗೆ ಉತ್ಸವ ನಡೆಯುತ್ತದೆ. ಕಲ್ಯಾಣೋತ್ಸವದ ಮೂಲಕ ಉತ್ಸವ ಆರಂಭವಾಗುತ್ತದೆ. ಧ್ವಜಾರೋಹಣದಂದು ಗರುಡನಿಗೆ ಪೂಜೆ ಸಲ್ಲಿಸುವುದರೊಂದಿಗೆ ಬ್ರಹ್ಮೋತ್ಸವಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸಲಾಗುವುದು. ಆ ದಿನ ಚೆಲುವರಾಯಸ್ವಾಮಿ ಹಂಸವಾಹನದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ.

* ಎರಡನೆಯ ದಿನ ಶ್ರೀದೇವಿ ಭೂದೇವಿಯರೊಂದಿಗೆ ಶೇಷವಾಹನದ ಸೊಬಗಾದರೆ, ಮೂರನೆಯ ದಿನ ಕಲ್ಯಾಣನಾಯಕಿ ಅಮ್ಮನವರೊಂದಿಗೆ ಚಿನ್ನದ ಪಲ್ಲಕ್ಕಿಯಲ್ಲಿ ನಾಗವಲ್ಲಿ ಮಹೋತ್ಸವದ ಮೆರವಣಿಗೆ ನಡೆಯುತ್ತದೆ. ಅಲ್ಲದೆ ಲೋಕಕಲ್ಯಾಣಾರ್ಥ ಹೋಮ ಕೂಡ ಮಾಡಲಾಗುತ್ತದೆ.[ಸಂತಾನಪ್ರಾಪ್ತಿಯ ಐತಿಹ್ಯವಿರುವ 'ಯಶಸ್ವೀ' ತೊಟ್ಟಿಲಮಡು ಹರಕೆ]

* ಜಾತ್ರೆಯಲ್ಲಿ ನಾಲ್ಕನೆಯ ದಿನವು ಬಹಳ ಪ್ರಮುಖ ದಿನವಾಗಿದ್ದು ಅಂದು ರಾತ್ರಿ ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾದ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಹಾಗೂ ಬ್ರಾಹ್ಮಿ ಮುಹೂರ್ತದಲ್ಲಿ ರಾಜಮುಡಿ ಕಿರೀಟವನ್ನು ಧಾರಣೆ ಮಾಡಲಾಗುತ್ತದೆ.

* ಐದನೆಯ ದಿನ ಸಂಜೆ ದೇಶಿಕರ ಸನ್ನಿಧಿಯಲ್ಲಿ ಪ್ರಹ್ಲಾದ ಪರಿಪಾಲನೋತ್ಸವ ನಡೆಯುತ್ತದೆ. ಅಂದು ರಾತ್ರಿ ಬಂಗಾರದ ಗರುಡವಾಹನದಲ್ಲಿ ಅಲಂಕಾರಗೊಂಡ ಚೆಲುವರಾಯಸ್ವಾಮಿ ಭಕ್ತರಿಗೆ ದರ್ಶನ ನೀಡುತ್ತಾನೆ.

* ಆರನೆಯ ದಿನ ಗಜೇಂದ್ರಮೋಕ್ಷ ಅಲಂಕಾರದ ವೈಭೋತ್ಸವ ಬಳಿಕ ಆನೆ, ಕುದುರೆ ಮಹೋತ್ಸವವು ನಡೆಯುತ್ತದೆ.

* ಏಳನೆಯ ದಿನ ಶ್ರೀದೇವಿ, ಭೂದೇವಿ, ಕಲ್ಯಾಣನಾಯಕಿ ಹಾಗೂ ರಾಮಾನುಜರೊಂದಿಗೆ ಮಹಾರಥೋತ್ಸವವು ನಡೆಯುತ್ತದೆ. ರಾತ್ರಿ ಬಂಗಾರದ ಪಲ್ಲಕಿ ಸೇವೆಯೂ ಜರುಗುತ್ತದೆ.[ಮೇಲುಕೋಟೆ ನಾಪತ್ತೆಯಾಗಿದ್ದ ಆಭರಣ ಹುಂಡಿಯಲ್ಲಿ ಪತ್ತೆ!]

* ಎಂಟನೆಯ ದಿನದಂದು ಕಲ್ಯಾಣಿಯಲ್ಲಿ ಚೆಲುವರಾಯಸ್ವಾಮಿಯ ತೆಪ್ಪೋತ್ಸವವು ನಡೆಯುತ್ತದೆ. ಒಂಭತ್ತನೆಯ ದಿನ ತೀರ್ಥಸ್ನಾನ, ಅವಭೃತ ನಂತರ ಸಂಜೆ ಪರಕಾಲ ಮಠದಲ್ಲಿ ವೈಭವದಿಂದ ಪಟ್ಟಾಭಿಷೇಕ ಜರುಗುತ್ತದೆ.

* ಹತ್ತನೆಯ ದಿನ ಜಾತ್ರೆಯ ಅಂತಿಮ ದಿನವಾಗಿದ್ದು ಅಂದು ಶ್ರೀಚೆಲುವರಾಯಸ್ವಾಮಿಗೆ ಮಹಾಭಿಷೇಕ ನೆರವೇರುತ್ತದೆ. ಅಲ್ಲಿಗೆ ವೈರಮುಡಿ ಜಾತ್ರೆಯ ಸಂಭ್ರಮ ಮುಗಿದು ಹೋಗುತ್ತದೆ.

ಜಾತ್ರೆಗೆ ಸುತ್ತಮುತ್ತಲ ಹಳ್ಳಿಗಳಿಂದ ದೂರದ ಊರುಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡು ಪುನೀತರಾದ ಸಂತಸದಲ್ಲಿ ಮನೆಗೆ ತೆರಳುತ್ತಾರೆ.[ದೇವಾಲಯದಲ್ಲಿ ನಡೆದ ಅಪಶಕುನಕ್ಕೆ ಬೆಚ್ಚಿಬಿದ್ದ ಜನತೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This temple of Melkote is popular for its Vairamudi Utsav, which is held in the month of March/April, the procession idol of Cheluvaraya Narayana Swamy is decorated with a diamond crown and taken out in procession. The Vairamudi utsav, which is the chief annual celebration, is witnessed by more than 4 lakh people.
Please Wait while comments are loading...