ಉತ್ತರ ಕನ್ನಡದಲ್ಲಿ ತಲೆ ಎತ್ತಲಿದೆ 'ವಿಶ್ವ ದರ್ಜೆ' ಪ್ರವಾಸಿ ತಾಣ: ಏನೇನಿದೆ ಮಾಸ್ಟರ್ ಪ್ಲಾನ್‌ನಲ್ಲಿ?
ಬೆಂಗಳೂರು, ಆಗಸ್ಟ್ 10: ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುಕೋಟಿ ವೆಚ್ಚದಲ್ಲಿ 'ವಿಶ್ವ ದರ್ಜೆಯ' ಪ್ರವಾಸಿತಾಣ ತಲೆ ಎತ್ತಲಿದೆ. ಈ ಸಂಬಂಧ ಐಡೆಕ್ ಸಂಸ್ಥೆಯು ಸೂಕ್ತ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಬೆಂಗಳೂರಿನಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (KSIIDC) ಮತ್ತು ಇನ್ನಿತರ ಅಧಿಕಾರಿಗಳ ಜೊತೆಗೆ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಸಭೆ ನಡೆಸಿ ಕೆಲವು ಅಭಿವೃದ್ಧಿ ವಿಚಾರಗಳನ್ನು, ಯೋಜನೆಗಳ ಕುರಿತು ಚರ್ಚಿಸಿದರು. ಇದೇ ಸಂದರ್ಭದಲ್ಲಿ ಅವರು ಐಡೆಕ್ ಸಂಸ್ಥೆಯು ಸಿದ್ಧಪಡಿಸಿರುವ ಮಾಸ್ಟರ್ ಪ್ಲ್ಯಾನ್ ಅನ್ನು ವೀಕ್ಷಿಸಿ, ಪೂರ್ಣ ಮಾಹಿತಿ ಪಡೆದುಕೊಂಡರು.

ಅರಣ್ಯ ಪ್ರದೇಶ ಮತ್ತು ಕರಾವಳಿ ಭಾಗವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ 'ತದಡಿ'ಯನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿಯೇ ಉಳಿಸಿಕೊಳ್ಳಲಾಗಿದೆ. ಅಲ್ಲಿ ಇದೀಗ 300 ಕೋಟಿ ರೂ. ವೆಚ್ಚದಲ್ಲಿ ವಿಶ್ವ ದರ್ಜೆಯ ಪರಿಸರ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯೋಜನೆ ಸಹ ಸಿದ್ಧವಾಗಿದೆ.
ತ್ವರಿತ ಅನುಮೋದನೆ ಪಡೆಯಲು ಸಜ್ಜು
ಈ ಯೋಜನೆಗೆ ಕರ್ನಾಟಕ ಮತ್ತು ಭಾರತ ಸರ್ಕಾರಗಳ ಪರಿಸರ ಹಾಗೂ ಅರಣ್ಯ ಸೇರಿದಂತೆ ಇನ್ನೂ ಹಲವು ಇಲಾಖೆಗಳಿಂದ ತ್ವರಿತವಾಗಿ ಅನುಮೋದನೆ ಪಡೆದುಕೊಳ್ಳಲಾಗುವುದು. ಈ ಕುರಿತ ಪ್ರಕ್ರಿಯೆಗಳು ಜಾರಿಯಲ್ಲಿವೆ ಎಂದು ತಿಳಿಸಿದರು.
ಈ ಹಿಂದೆ 'ತದಡಿ'ಯನ್ನು ಬಂದರು ಆಗಿ ಅಭಿವೃದ್ಧಿ ಪಡಿಸಲು ಚಿಂತಿಸಲಾಗಿತ್ತು. ಆಗ ಅದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಹೀಗಾಗಿ ಇದನ್ನು 300 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಪರಿಸರ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ತೀರ್ಮಾನಿಸಲಾಗಿದೆ.
ಸಂಬಂಧಿಸಿದ ಇಲಾಖೆಗಳಿಂದ ತ್ವರಿತ ಅನುಮತಿ ಪಡೆದುಕೊಂಡ ಬಳಿಕ ಇದನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಕೆಎಸ್‌ಐಐಡಿಸಿಯನ್ನು ಹಿಂದೆಯೇ ಇದಕ್ಕೆ ನೋಡಲ್ ಏಜೆನ್ಸಿಯಾಗಿ ಮಾಡಲಾಗಿತ್ತು. ನನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಪ್ಲಾನ್‌ನಲ್ಲಿ ಏನೇನಿದೆ?
ಉದ್ದೇಶಿತ ಯೋಜನೆಯಡಿಯಲ್ಲಿ ಹೈಟೆಕ್ ರೆಸಾರ್ಟ್, 184 ಟ್ರೀ ಹಟ್‌ಗಳು, 70 ಹೋಟೆಲ್ ಕೊಠಡಿಗಳು, ಪರಿಸರ ಸ್ನೇಹಿ ವಾಯುವಿಹಾರ ಪಥ, ಯೋಗ ತಾಣ, ಪೆಡ್ಲಿಂಗ್ ಬೋಟ್, ತೂಗು ಸೇತುವೆಗಳು, ಸ್ಕೈವಾಕ್ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುವುದು. ಅದಕ್ಕಾಗಿ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆಯಲಾಗುವುದು.
ಸದ್ಯಕ್ಕೆ ಕೆಎಸ್‌ಐಐಡಿಸಿ ಬಳಿ 1,419 ಎಕರೆ ಭೂಮಿ ಇದೆ, ಕೆಪಿಸಿಎಲ್ 400 ಎಕರೆಯನ್ನು ಬಿಟ್ಟುಕೊಡಬೇಕಿದೆ. ಇವೆಲ್ಲಕ್ಕೂ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಒಟ್ಟಿನಲ್ಲಿ ತದಡಿಯನ್ನು ಕಡಲತೀರ ವಲಯ ನಿರ್ವಹಣಾ ಯೋಜನೆಯಡಿ ಸೇರಿಸಲಾಗುವುದು. ಜತೆಗೆ ಇಲ್ಲಿರುವ ಮ್ಯಾನ್‌ಗ್ರೋವ್ ಕಾಡನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಐಡೆಕ್‌ನಿಂದ ತೌಲನಿಕ ಅಧ್ಯಯನ
ಮಾಸ್ಟರ್ ಪ್ಲಾನ್ ಸಿದ್ಧಪಡಿಸಿರುವ ಐಡೆಕ್ ಸಂಸ್ಥೆಯು ಜಗತ್ತಿನಲ್ಲಿರುವ ವಿಖ್ಯಾತ ಸಮುದ್ರ ದಂಡೆಯ ಪ್ರವಾಸಿ ತಾಣಗಳೊಂದಿಗೆ ತದಡಿ ಪರಿಸರದ ತೌಲನಿಕ ಅಧ್ಯಯನ ನಡೆಸಿದೆ. ಇದರ ಸಮಗ್ರ ಅಭಿವೃದ್ಧಿಗಾಗಿ 'ತದಡಿ ಇಕೋ ಟೂರಿಸಂ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್' ಎನ್ನುವ ಪ್ರತ್ಯೇಕ ಘಟಕ ತೆರೆಯಲಾಗುವುದು ಎಂದು ಸಚಿವರು ವಿವರಿಸಿದರು.
ಸಭೆಯಲ್ಲಿ ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ ಆರ್ ರವಿ, ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ, ಮತ್ತು ಐಡೆಕ್ ಸಂಸ್ಥೆಯ ಸಿಇಒ ಜಯಕಿಷನ್ ಇದ್ದರು. ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ, ಕುಮಟಾ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾ ಅರಣ್ಯಾಧಿಕಾರಿಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications