Ambulance Strike: ರಾಜ್ಯದಲ್ಲಿ 108 ಆಂಬ್ಯುಲೆನ್ಸ್ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ.. ಕಾರಣವೇನು?
ಬೆಂಗಳೂರು, ಮೇ. 06: ಕಳೆದ ಐದು ತಿಂಗಳಿಂದ ವೇತನ ಸಿಗದ ಮತ್ತು ಸಂಬಳ ಕಡಿತದ ನಿರಂತರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ 108 ಆಂಬ್ಯುಲೆನ್ಸ್ ನೌಕರರು ಮೇ 6 ರ ರಾತ್ರಿ 8 ಗಂಟೆಯಿಂದ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇದರಿಂದಾಗಿ ರಾಜ್ಯಾದ್ಯಂತ ಆಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಕಂಡು ಬರಲಿದೆ.
ಕರ್ನಾಟಕದಾದ್ಯಂತ ಸುಮಾರು 715 ಆಂಬ್ಯುಲೆನ್ಸ್‌ಗಳು ಮತ್ತು ಸರಿಸುಮಾರು 3,500 ಉದ್ಯೋಗಿಗಳು 108 ಆಂಬ್ಯುಲೆನ್ಸ್ ಅಸೋಸಿಯೇಷನ್ ಜೊತೆಗೆ ಸಂಬಂಧ ಹೊಂದಿದ್ದಾರೆ. ಹೀಗಾಗಿಯೇ ತುರ್ತು ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ. ಆಂಬ್ಯುಲೆನ್ಸ್ ಸೇವೆಯನ್ನು ನಿರ್ವಹಿಸುವ ಜಿವಿಕೆ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ನಡುವಿನ ಅಸಮಾಧಾನದಿಂದ ಮುಷ್ಕರ ನಡೆಯುತ್ತಿದೆ.

ಸಿಗದ ಸಂಬಳ, ಆಂಬ್ಯುಲೆನ್ಸ್ ಚಾಲಕರ ಮುಷ್ಕರ
ಚಾಲಕರು ಮತ್ತು ವೈದ್ಯಕೀಯ ತಂತ್ರಜ್ಞರು ಸೇರಿದಂತೆ ನೌಕರರು ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಮೂರು ತಿಂಗಳ ಸಂಬಳವನ್ನು ಪಾವತಿಸಿಲ್ಲ ಎಂದು 108 ಆಂಬ್ಯುಲೆನ್ಸ್ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೆಚ್ಚುವರಿಯಾಗಿ, ಜನವರಿಯಲ್ಲಿ ಸಂಬಳ ಕಡಿತವಾಗಿದೆ. 30,000 ರೂಪಾಯಿಗಳಲ್ಲಿ ಕೇವಲ 12,000 ರೂಪಾಯಿ ಸಂಬಳ ಪಡೆದಿದ್ದಾರೆ.
ಕಳೆದ ಐದು ತಿಂಗಳಿನಿಂದ ಎರಡು ತಿಂಗಳ ವೇತನಕ್ಕೆ ಸಮನಾದ ವೇತನವನ್ನು ಮಾತ್ರ ಪಡೆದಿದ್ದೇವೆ ಎಂದು ಸಂಘದ ನೌಕರರು ಹೇಳಿದ್ದಾರೆ. ಸಂಘವು ಬೆಂಗಳೂರಿನಲ್ಲಿ ಸುಮಾರು 90 ಆಂಬ್ಯುಲೆನ್ಸ್‌ಗಳನ್ನು ನಿರ್ವಹಿಸುತ್ತಿದ್ದು, 400 ಕ್ಕೂ ಹೆಚ್ಚು ಕೆಲಸಗಾರರನ್ನು ಹೊಂದಿದೆ. ಕರ್ನಾಟಕ ರಾಜ್ಯ ಆರೋಗ್ಯ ವಿಮಾ 108 ನೌಕರರ ಸಂಘವು ಮುಷ್ಕರವನ್ನು ಆಯೋಜಿಸುತ್ತಿದೆ.

ಇಷ್ಟು ತಿಂಗಳಿನಿಂದ ಕಡಿತಗೊಳಿಸಿರುವ ವೇತನವನ್ನು ಇಂದು (ಮೇ 6) ಸಂಜೆಯೊಳಗೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ತಮ್ಮ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸದಿದ್ದರೆ ಸೇವೆಯನ್ನು ಸ್ಥಗಿತಗೊಳಿಸಲು ಸಿಬ್ಬಂದಿ ಸಿದ್ಧರಿದ್ದಾರೆ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ. ಇಲ್ಲದೆ ಇದ್ದರೇ ಸೋಮವಾರ ರಾತ್ರಿ 8 ಗಂಟೆಯಿಂದ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ವೇತನ ಬಿಡುಗಡೆ ಮಾಡದೇ ಇದ್ದರೇ, ಮೇ 6ರ ಇಂದು ರಾತ್ರಿಯ ಹೊತ್ತಿಗೆ, ರಾಜ್ಯದಾದ್ಯಂತ ಒಟ್ಟು 711 ಆಂಬ್ಯುಲೆನ್ಸ್‌ಗಳು 108 ಆಂಬ್ಯುಲೆನ್ಸ್ ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ. ಈ ಕಠಿಣ ನಿರ್ಧಾರ ಅನೇಕರ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ವಿಶೇಷವಾಗಿ ವೈದ್ಯಕೀಯ ಆರೈಕೆಯ ಅಗತ್ಯವಿರುವವರಿಗೆ ತುಂಬಾ ಕಷ್ಟವಾಗಲಿದೆ. ಆಂಬ್ಯುಲೆನ್ಸ್ ಸೇವೆಯ ಅಲಭ್ಯತೆಯಿಂದ ರೋಗಿಗಳಿಗೆ ಯಾವುದೇ ತೊಂದರೆ ಉಂಟಾದರೆ ಸರ್ಕಾರವೇ ನೇರ ಹೊಣೆ ಎಂದು ಒಕ್ಕೂಟ ಸ್ಪಷ್ಟಪಡಿಸಿದೆ.
ಆರೋಗ್ಯ ಆಯುಕ್ತ ರಂದೀಪ್ ಡಿ ಅವರನ್ನು ಉಲ್ಲೇಖಿಸಿರುವ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, "ನಾವು ಈಗಾಗಲೇ 108 ಸೇವಾ ಪೂರೈಕೆದಾರರಿಗೆ ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆ (ಎಸ್ಮಾ) ಸೂಚನೆಯನ್ನು ನೀಡಿದ್ದೇವೆ. ಆದ್ದರಿಂದ ಯಾವುದೇ ಸಮಯದಲ್ಲಿ 108 ತುರ್ತು ಆಂಬ್ಯುಲೆನ್ಸ್ ಸೇವೆಗಳಿಗೆ ಅಡ್ಡಿಯಾಗುವುದಿಲ್ಲ" ಎಂದಿದ್ದಾರೆ.
2024 ರ ಜನವರಿ ತಿಂಗಳವರೆಗೆ ಸೇವಾ ಪೂರೈಕೆದಾರರಿಂದ 108 ಉದ್ಯೋಗಿಗಳಿಗೆ ಸರಿಪಡಿಸಿದ ವೇತನವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಅನ್ವಯವಾಗುವ ಕನಿಷ್ಠ ವೇತನಕ್ಕೆ ಮಾತ್ರ ಪಾವತಿಸಲಾಗಿದೆ. ಆರ್ಥಿಕ ವರ್ಷ 2023-2024 ಕ್ಕೆ, ಸರ್ಕಾರವು ಸೇವಾ ಪೂರೈಕೆದಾರರಿಗೆ ಅಗತ್ಯವಿರುವ 162.40 ಕೋಟಿ ರೂ.ಗಳನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಿದೆ. FY 2024-25 ಕ್ಕೆ ಅನುಗುಣವಾಗಿ ಮುಂದಿನ ಕೆಲವು ದಿನಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್, ಏಪ್ರಿಲ್ 2024 ಕ್ಕೆ ಬಾಕಿ ಇರುವ ವೇತನವನ್ನು ಮೊದಲ ತ್ರೈಮಾಸಿಕ ಮುಂಗಡ ಬಿಡುಗಡೆಯಿಂದ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications