ಉತ್ತರ ಕನ್ನಡದ ಯುವ ನೇತಾರ ನಿವೇದಿತ್ ಆಳ್ವ ಸಂದರ್ಶನ
ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಹುತೇಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ. ಕಳೆದ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳು ಟಿಕೆಟ್ ನೀಡಲಿಲ್ಲವೆಂದು ಬಂಡಾಯವೆದ್ದು ಪಕ್ಷೇತರರಾಗಿ ಗೆದ್ದ ಇಬ್ಬರೂ ಈಗ ಮೂಲ ಬೇರನ್ನು ಸೇರಿಕೊಂಡಿದ್ದಾರೆ.
ಸತತವಾಗಿ ಬಿಜೆಪಿ ಅಭ್ಯರ್ಥಿಗಳಿಗೇ ಮಣೆಹಾಕುತ್ತಿರುವ ಶಿರಸಿ ಕ್ಷೇತ್ರದಲ್ಲಿ ಈ ಬಾರಿ ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವ ಅವರ ಪುತ್ರ ನಿವೇದಿತ್ ಆಳ್ವ ಅವರು ಕೂಡಾ ಟಿಕೆಟ್ ಆಕಾಂಕ್ಷಿ. ಆನಂದ್ ಅಸ್ನೋಟಿಕರ್, ಜೆಡಿಎಸ್ ಸೇರಿದ್ದರೂ, ಎರಡು ರಾಷ್ಟ್ರೀಯ ಪಕ್ಷಗಳ ನಡುವೆಯೇ ನೇರ ಸ್ಪರ್ಧೆ ಎನ್ನುವುದು ನಿವೇದಿತ್ ರಾಜಕೀಯ ಲೆಕ್ಕಾಚಾರ.
ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿದ್ದ ಪರಮೇಶ್ ಮೇಸ್ತ ಹತ್ಯೆ, ಕೇಂದ್ರ ಕೌಶಲಾಭಿವೃದ್ದಿ ಸಚಿವ ಅನಂತ್ ಕುಮಾರ್ ಹೆಗಡೆ ಕಾರ್ಯವೈಖರಿಯ ಬಗ್ಗೆ ನಿವೇದಿತ್ ಆಳ್ವ, 'ಒನ್ ಇಂಡಿಯಾ' ಜೊತೆ ಮಾತುಕತೆ ನಡೆಸಿದ್ದಾರೆ.
ಪ್ರ: ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಈ ಬಾರಿ ಎಷ್ಟು ಸೀಟ್ ಕಾಂಗ್ರೆಸ್ ಗೆಲ್ಲಬಹುದು?
ಆಳ್ವ: ಆರಕ್ಕೆ ಆರೂ ಕಾಂಗ್ರೆಸ್ ಗೆಲ್ಲಬಹುದು. ಕಳೆದ ಬಾರಿ ಕಾಂಗ್ರೆಸ್ ಮೂರು ಕ್ಷೇತ್ರ ಮಾತ್ರ ಗೆದ್ದಿದ್ದರೂ, ಪ್ರಾಕ್ಟಿಕಲ್ ಆಗಿ ಗೆದ್ದ ಇಬ್ಬರು ಪಕ್ಷೇತರರು ಕಾಂಗ್ರೆಸ್ಸಿನವರು. ಹಾಗಾಗಿ ಆರರಲ್ಲಿ ನಾವು ಐದು ಗೆದ್ದಂತೆ. ಈ ಬಾರಿ ನಮ್ಮ ಸರಕಾರ ನೀಡಿದ ಭರವಸೆಯನ್ನೆಲ್ಲಾ ಪೂರೈಸಿದೆ. ಹಾಗಾಗಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ನಮ್ಮಲ್ಲಿದೆ. ಮುಂದೆ ಓದಿ..

ಶಿರಸಿಯಲ್ಲಿ ಕಾಂಗ್ರೆಸ್ಸಿಗೆ ಅನುಕೂಲಕರ ಪರಿಸ್ಥಿತಿ ಇದೆಯಾ?
ಪ್ರ: ಶಿರಸಿ ಕ್ಷೇತ್ರದಲ್ಲಿ ಕಳೆದ ಬಾರಿ ಕಾಗೇರಿಯವರ ಗೆಲುವಿನ ಅಂತರ ಸುಮಾರು ಮೂರು ಸಾವಿರದೊಳಗೆ. ಈ ಬಾರಿ ಶಿರಸಿಯಲ್ಲಿ ಕಾಂಗ್ರೆಸ್ಸಿಗೆ ಅನುಕೂಲಕರ ಪರಿಸ್ಥಿತಿ ಇದೆಯಾ?
ಆಳ್ವ: ಹೋದ ಚುನಾವಣೆಯಲ್ಲಿ ದೀಪಕ್ ಹೊನ್ನಾವರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಆವತ್ತಿನಿಂದ ನಾನು ಅಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಸರಕಾರದ ಮೇಲೆ ಒತ್ತಡ ಹೇರಿ ವಿವಿಧ ಯೋಜನೆಗಳಿಗಾಗಿ ಹದಿನೈದು ಕೋಟಿ ರೂಪಾಯಿಯನ್ನು ನಾನು ಶಿರಸಿಗೆ ತಂದಿದ್ದೇನೆ. ನಾನು ಕೂಡಾ ಆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ.

ಪರಮೇಶ್ ಮೇಸ್ತ ಎನ್ನುವ ಹುಡುಗನ ಸಾವು
ಪ್ರ: ಪರಮೇಶ್ ಮೇಸ್ತ ಎನ್ನುವ ಹುಡುಗನ ಸಾವಿನ ಸುತ್ತ ನಡೆದ ರಾಜಕೀಯದ ಬಗ್ಗೆ?
ಆಳ್ವ: ಆ ಹುಡುಗನ ಸಾವು ಯಾವಾಗ ಸಾರ್ವಜನಿಕವಾಯಿತೋ, ಅಂದೇ ಆ ಹುಡುಗನ ತಂದೆ, ಪರಮೇಶ್ ಯಾವುದೇ ಸಂಘಟನೆಯಲ್ಲಿ ತನ್ನನ್ನು ತೊಡಗಿಸಿಕೊಂಡಿಲ್ಲ ಎಂದು ಹೇಳಿದ್ದರು. ಪೋಸ್ಟ್ ಮಾರ್ಟಂ ವರದಿ ಬಂತು, ಪೋಲಿಸರು ವರದಿ ನೀಡಿದರು. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಡಬೇಕಾಗುತ್ತದೆ. ಸೋಷಿಯಲ್ ಮಿಡಿಯಾದಲ್ಲಿ ಏನೇನೋ ಗುಲ್ಲೆಬ್ಬಿತು. ಮಣಿಪಾಲ ಆಸ್ಪತ್ರೆಯ ಪೋಸ್ಟ್ ಮಾರ್ಟಂ ವರದಿಯನ್ನೇ ಶೋಭಾ ಕರಂದ್ಲಾಜೆ ನಂಬುವುದಿಲ್ಲ. ಬಿಜೆಪಿಯವರದ್ದು ಮತ್ತೆ ಹಿಟ್ ಎಂಡ್ ರನ್ ಪಾಲಿಟಿಕ್ಸ್.

ಅನಂತ್ ಕುಮಾರ್ ಹೆಗಡೆ ಪ್ರಾಭಲ್ಯ ಹೇಗಿದೆ?
ಪ್ರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆಯವರ ಪ್ರಾಭಲ್ಯ ಹೇಗಿದೆ?
ಆಳ್ವ: ಅನಂತ್ ಕುಮಾರ್ ಹೆಗಡೆಯವರ ಪ್ರಭಾವ ಈ ಬಾರಿಯ ಚುನಾವಣೆಯಲ್ಲಿ ವರ್ಕೌಟ್ ಆಗುವುದಿಲ್ಲ. ಯಾಕೆಂದರೆ ನಮ್ಮ ಜಿಲ್ಲೆಯ ಜನರು ಬುದ್ದಿವಂತರು, ಅದಕ್ಕೆ ಉದಾಹರಣೆ ಎಲ್ಲಾ ಮಾಧ್ಯಮದ ಪ್ರಮುಖರು, ಇತರರು ನಮ್ಮ ಜಿಲ್ಲೆಯವರು. ಕುಮಟಾ, ಶಿರಸಿಯಲ್ಲಿ ಏನಾಯಿತು ಅದೆಲ್ಲಾ ಸತ್ಯಕ್ಕೆ ದೂರವಾದದ್ದು. ಅವರು ಪ್ರತಿನಿಧಿಸುವ ಕ್ಷೇತ್ರಕ್ಕೆ ಏನು ಅಭಿವೃದ್ದಿಯಾಗಬೇಕು ಅದನ್ನು ಮಾಡುವುದನ್ನು ಬಿಟ್ಟು, ಮಿಕ್ಕೆಲ್ಲಾ ಕೆಲಸವನ್ನು ಹೆಗಡೆ ಮಾಡುತ್ತಿದ್ದಾರೆ. ಅವರೊಬ್ಬರು ಕೇಂದ್ರ ಸಚಿವರು, ಅವರ ಸಚಿವಾಲಯದ ಬಗ್ಗೆ ಏನಾದರೂ ಮಾತನಾಡಿದ್ದು ವರದಿಯಾಗಿದೆಯಾ, ನಾನಂತೂ ಕೇಳಿಲ್ಲ.

ಕ್ಷೇತ್ರದ ಅಭಿವೃದ್ದಿಯ ಕನಸನ್ನು ಯಾವರೀತಿ ಕಾಣುತ್ತಿದ್ದೀರಾ
ಪ್ರ: ಶಿರಸಿ ಕ್ಷೇತ್ರದ ಟಿಕೆಟ್ ಸಿಕ್ಕಿ, ನೀವು ಗೆದ್ದರೆ ನಿಮ್ಮ ಕ್ಷೇತ್ರದ ಅಭಿವೃದ್ದಿಯ ಕನಸನ್ನು ಯಾವರೀತಿ ಕಾಣುತ್ತಿದ್ದೀರಾ?
ಆಳ್ವ: ಶಿರಸಿಯಿಂದ ನೂರು ಕಿ.ಮೀನಲ್ಲಿ ಹುಬ್ಬಳ್ಳಿ ಸಿಗುತ್ತದೆ, ಅಲ್ಲಿಂದ ಸ್ವಲ್ಪ ದೂರ ಹೋದರೆ ಬೆಳಗಾವಿ. ಈ ಕಡೆ ಮಂಗಳೂರು, ಉಡುಪಿ. ಒಟ್ಟಿನಲ್ಲಿ ಶಿರಸಿ ಎಲ್ಲಾ ಪ್ರಮುಖ ನಗರಗಳಿಗೆ ಹತ್ತಿರವಾಗಿದೆ. ಶಿರಸಿಗೆ ಕೈಗಾರಿಕೆ ತರಬೇಕು, ಪ್ರವಾಸೋದ್ಯಮ ಬೆಳೆಸಬೇಕು. ಮೂಲಭೂತ ಸೌಕರ್ಯದ ಕೆಲಸ ಆಗಬೇಕಾಗಿದೆ, ಎರಡು ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿ ಹಾದು ಹೋಗುತ್ತವೆ. ತಾಳಗುಪ್ಪ ತನಕ ಬಂದಿರುವ ರೈಲ್ವೆ ಹಳಿಯನ್ನು ಸಿದ್ದಾಪುರದ ತನಕ ತರಬಹುದು. ಈ ರೀತಿ ಕ್ಷೇತ್ರದ ಅಭಿವೃದ್ದಿಗೆ ಹಲವು ಕನಸನ್ನು ಹೊಂದಿದ್ದೇನೆ.











Click it and Unblock the Notifications