Congress Guarantee: ಯಾರು ಕರೆಂಟ್ ಬಿಲ್, ಬಸ್ ಟಿಕೆಟ್ ತೆಗೆದುಕೊಳ್ಳಬೇಡಿ; ರಾಜ್ಯದ ಜನರಿಗೆ ಕರೆ ನೀಡಿದ ಖೂಬಾ
ಬೆಂಗಳೂರು ,ಮೇ 31: ಯಾರು ಕರೆಂಟ್ ಬಿಲ್ ಕಟ್ಟಬಾರದು ಹಾಗೂ ಯಾವ ಮಹಿಳೆಯರು ಬಸ್ ಟಿಕೆಟ್ ತೆಗೆದುಕೊಳ್ಳಬೇಡಿ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ ರಾಜ್ಯದ ಜನರಿಗೆ ಕರೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರರ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿಗಳನ್ನು ರಾಜ್ಯದ ಜನರು ನಂಬಿ ಮತ ಹಾಕಿದ ಪರಿಣಾಮ ಇಂದು 135 ಸೀಟು ಬಂದಿದ್ದು ಮುಗ್ಧ ಜನರನ್ನು ಗ್ಯಾರಂಟಿ ಕಾರ್ಡ್ ಗಳ ಮುಖಾಂತರ ರಣ ತಂತ್ರ ರೂಪಿಸಿ ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದಿದ್ದಾರೆ.

ಅಧಿಕಾರಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ ನಿನ್ನಗೂ ಫ್ರೀ, ನನ್ನಗೂ ಫ್ರೀ ಎಂದಿದ್ರು ಇವತ್ತು ಕಂಡಿಷನ್ ಗಳನ್ನು ಅಪ್ಲೈ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಖೂಬಾ ಕಿಡಿಕಾರಿದ್ರು. ಇನ್ನೂ ಸಿದ್ದರಾಮಯ್ಯ ಅತ್ತೆ - ಸೊಸೆ ಜಗಳ ನಿಲ್ಲಿಸಲು ಒಂದು ಮಂತ್ರಾಲಯ ಒಪನ್ ಮಾಡಬೇಕು ಯಾಕೆಂದ್ರೆ ಅತ್ತೆ - ಸೊಸೆಯ ಜಗಳವಾದಾಗ ಸಿದ್ದರಾಮಯ್ಯ ಸಂಧಾನ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೇವಡಿ ಮಾಡಿದರು.
ಕೇಂದ್ರದಲ್ಲಿ ನರೇಂದ್ರ ಮೋದಿಜಿ ಅವರ ಸರಕಾರವು ಯಶಸ್ವಿಯಾಗಿ ಮತ್ತು ಫಲಪ್ರದವಾಗಿ 9 ವರ್ಷಗಳನ್ನು ಪೂರೈಸಿದೆ. ಇದರ ಅಂಗವಾಗಿ ಇಡೀ ದೇಶಾದ್ಯಂತ ಪ್ರತಿಯೊಂದು ಲೋಕಸಭಾ ಕ್ಷೇತ್ರಗಳಲ್ಲಿ ಕಳೆದ 9 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಮೂಲಭೂತ ಸೌಕರ್ಯ ಯೋಜನೆಗಳ ಯಶಸ್ವಿ ಅನುಷ್ಠಾನ, ಸಾಮಾಜಿಕ ಸುರಕ್ಷತಾ ಯೋಜನೆಗಳ ಜಾರಿ ಸೇರಿದಂತೆ ಅನೇಕ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಜೂನ್ 30ರವರೆಗೆ ಮಹಾಸಂಪರ್ಕ ಅಭಿಯಾನವನ್ನು ಬಿಜೆಪಿ ಕೈಗೊಂಡಿದೆ ಎಂದರು.

ಈ ಅಭಿಯಾನದಲ್ಲಿ ಲಾಭಾರ್ಥಿಗಳ ಸಮಾವೇಶ ನಡೆಸಲಾಗುವುದು. ಕೇಂದ್ರ ಸರಕಾರದ ಅನುದಾನದಿಂದ ಲೋಕಸಭಾ ಕ್ಷೇತ್ರಗಳಲ್ಲಿ ಕೈಗೊಂಡ ಮೂಲಸೌಕರ್ಯಗಳ ವಿವರ ಕೊಡಲಾಗುವುದು. ಪ್ರಬುದ್ಧರ ಸಭೆ, ವ್ಯಾಪಾರಸ್ಥರ ಸಭೆ, ಯೋಗ ದಿನ ಆಚರಣೆ ಸೇರಿ ಅನೇಕ ಆಯಾಮಗಳಲ್ಲಿ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ. 2024ರ ಲೋಕಸಭಾ ಚುನಾವಣಾ ತಯಾರಿ ದೃಷ್ಟಿಕೋನದಿಂದ ಕೆಲಸ ನಿರ್ವಹಿಸಲಾಗುವುದು.
ಇವತ್ತು ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಆಯ್ದ ಲೋಕಸಭಾ ಸದಸ್ಯರ ಸಭೆ ನಡೆಸಲಾಗಿದೆ. ಈ ವಿಚಾರಗಳ ಚರ್ಚೆ ನಡೆದಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಸಂಕಲ್ಪದೊಂದಿಗೆ, ಕಾರ್ಯತಂತ್ರ ಮತ್ತು ಕಾರ್ಯಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
2014ಕ್ಕಿಂತ ಮೊದಲು 10 ವರ್ಷಗಳ ಕಾಲ ಯುಪಿಎ ಆಳ್ವಿಕೆ ಇತ್ತು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಯಾವ ರೀತಿ ಅಭಿವೃದ್ಧಿಗೆ ಹಿನ್ನಡೆ ಆಗಿತ್ತು ಮತ್ತು ಕಳೆದ 9 ವರ್ಷಗಳಲ್ಲಿ ನಾವು ಅಭಿವೃದ್ಧಿಯನ್ನು ಯಾವ ಮಟ್ಟಕ್ಕೆ ಏರಿಸಿದ್ದೇವೆ ಎಂದು ತಿಳಿಸಲಾಗುವುದು.
ಭಾರತದ ಜಿಡಿಪಿ 4.8 ಶೇ ಇರುವುದು, ಹಣದುಬ್ಬರವು ಶೇ 6.3 ಇದೆ; ನಿರುದ್ಯೋಗ ಪ್ರಮಾಣ ಶೇ 6.8 ಇದೆ. ಯುಪಿಎ ಕಾಲದಲ್ಲಿ ಜಿಡಿಪಿ- ಹಣದುಬ್ಬರ, ನಿರುದ್ಯೋಗ ಮಟ್ಟವು ಡಬಲ್ ಡಿಜಿಟ್‍ನಲ್ಲಿತ್ತು. ಈ ಪ್ರಗತಿ ಸಾಧ್ಯವಾಗಲು ನರೇಂದ್ರ ಮೋದಿಜಿ ಅವರ ಸಮರ್ಥ ಆಡಳಿತ, ದಿಟ್ಟ ನಿರ್ಧಾರ ಮತ್ತು ಯೋಜನೆಗಳು ಕಾರಣ ಎಂದು ಜನರಿಗೆ ಮನವರಿಕೆ ಆಗಿದೆ. ಇದನ್ನು ಮತ್ತೊಮ್ಮೆ ಜನರಿಗೆ ತಿಳಿಸುತ್ತೇವೆ ಎಂದರು.
ನೂತನ ಸಂಸತ್ ಭವನದ ಉದ್ಘಾಟನೆಗೆ ಹಲವು ವಿರೋಧ ಪಕ್ಷದವರು ಗೈರುಹಾಜರಾಗಿದ್ದರು. ಇದು ಶೋಭೆ ತರುವ ವಿಚಾರವಲ್ಲ. ವಿರೋಧ ಪಕ್ಷದವರು ತಮ್ಮ ವಿರೋಧಕ್ಕೆ ಕಾರಣವನ್ನು ಸಾರ್ವಜನಿಕವಾಗಿ ಹೇಳಲು ಅವರಿಗೆ ವಿಷಯಗಳಿಲ್ಲ ಎಂದು ಟೀಕಿಸಿದರು. ಮೋದಿಯವರ ಉಪಸ್ಥಿತಿಯ ಯಾವುದೇ ಕಾರ್ಯಕ್ರಮ ಇದ್ದರೂ ಅದು ಮೋದಿಮಯ ಆಗುತ್ತಿದೆ. ಇದಕ್ಕೆ ಅವರ ಜನಪ್ರಿಯತೆ ಮತ್ತು ವರ್ಚಸ್ಸೇ ಕಾರಣ ಎಂದು ವಿಶ್ಲೇಷಿಸಿದರು.












Click it and Unblock the Notifications