ಖರ್ಗೆ ವಿರುದ್ಧ ಸ್ಪರ್ಧೆ : ಡಾ.ಉಮೇಶ್ ಜಾಧವ್ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 01 : 'ಬಿಜೆಪಿ ಸೇರುವಂತೆ ತಮಗೆ ಕೆಲ ಪಕ್ಷದ ಮುಖಂಡರು ದೂರವಾಣಿ ಮೂಲಕ ಸಂಪರ್ಕಿಸಿ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವುದಿಲ್ಲ' ಎಂದು ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಸ್ಪಷ್ಟಪಡಿಸಿದರು.
ಡಾ.ಉಮೇಶ್ ಜಾಧವ್ ಅವರು ಬಿಜೆಪಿ ಸೇರಲಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಈ ಕುರಿತು ಮಾಧ್ಯಮಗಳಿಗೆ ಅವರು ಸ್ಪಷ್ಟನೆ ನೀಡಿದರು. 'ಕಾಂಗ್ರೆಸ್‌ನಲ್ಲಿ ಎಷ್ಟು ವರ್ಷಗಳು ಇದ್ದರೂ ಯಾವುದೇ ಪ್ರಯೋಜನವಿಲ್ಲ. ಈ ಸರ್ಕಾರದಲ್ಲಿ ನಿಮಗೆ ಸಚಿವ ಸ್ಥಾನವೂ ಸಿಗುವುದಿಲ್ಲ. ಏನೂ ಸಿಗದ ಮೇಲೆ ಆ ಪಕ್ಷದಲ್ಲಿ ಇರಬೇಕು. ಬಿಜೆಪಿಗೆ ಬಂದರೆ ಖರ್ಗೆ ಅವರ ವಿರುದ್ಧ ಟಿಕೆಟ್ ನೀಡುವ ಜೊತೆ ಉನ್ನತ ಹುದ್ದೆ ನೀಡುವ ಭರವಸೆ ನೀಡಿದರು' ಎಂದರು.

'ಬಿಜೆಪಿಯವರ ಆಮಿಷಕ್ಕೆ ನಾನು ಬಲಿಯಾಗುವುದಿಲ್ಲ. ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ವೈದ್ಯ ವೃತ್ತಿ ಬಿಟ್ಟ ನಂತರ ನಾನು ಕಾಂಗ್ರೆಸ್‌ನಿಂದಲೇ ರಾಜಕೀಯ ಜೀವನ ಆರಂಭಿಸಿದ್ದೇನೆ. ಉಸಿರು ಇರುವ ತನಕವೂ ಇನ್ನು ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ' ಎಂದು ಹೇಳಿದರು.
'ಅವಿರೋಧವಾಗಿ ಆಯ್ಕೆ ಮಾಡಬೇಕೆಂದು ಹೇಳುವ ವ್ಯಕ್ತಿ ನಾನು. ಹೀಗಿರಬೇಕಾದರೆ ಅವರ ವಿರುದ್ಧ ಸ್ಪರ್ಧಿಸುವುದು ಅಸಾಧ್ಯದ ಮಾತು. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ನಾನು ಸ್ಪರ್ಧಿಸುವುದು ಕನಸಿನ ಮಾತು' ಎಂದು ತಿಳಿಸಿದರು.












Click it and Unblock the Notifications