ಬಿಡದಿ: ತೆಪ್ಪ ಮುಗುಚಿ ಇಬ್ಬರು ಯುವಕರ ದುರ್ಮರಣ
ರಾಮನಗರ, ಅಕ್ಟೋಬರ್ 16: ಮೀನು ಹಿಡಿಯಲು ಹೋದ ಯುವಕರಿಬ್ಬರು ತೆಪ್ಪ ಮುಗುಚಿ ಸಾವನ್ನಪ್ಪಿರುವ ಘಟನೆ ರಾಮನಗರದ ಬಿಡದಿ ಸಮೀಪದ ನೆಲ್ಲಿಗುಡ್ಡೆ ಕೆರೆಯಲ್ಲಿ ನಡೆದಿದೆ.
ಬಿಡದಿ ಸಮೀಪದ ಅವರೆಗೆರೆ ಗ್ರಾಮದ ರವಿ (20) ಹಾಗೂ ಉಮೇಶ್ (31) ಮೃತ ದುರ್ದೈವಿಗಳು. ಭಾನುವಾರ ಸಾಯಂಕಾಲ ಭಾರೀ ವೇಳೆ ಮಳೆಯಾಗಿದ್ದರಿಂದ ಕೆರೆಯಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ತೆಪ್ಪ ಮುಗುಚಿ ಇಬ್ಬರು ಬಲೆಯ ಒಳಗೆ ಸಿಲುಕಿ ಕೆರೆಯಲ್ಲಿ ಸಾವನ್ನಪ್ಪಿದ್ದಾರೆ.

ಭಾನುವಾರ ಸಾಯಂಕಾಲ ನೆಲ್ಲಿಗುಡ್ಡೆ ಕೆರೆಯಲ್ಲಿ ಮೀನು ಹಿಡಿಯಲು ತೆಪ್ಪದಲ್ಲಿ ತೆರಳಿದ್ದರು. ರಾತ್ರಿಯಾದರೂ ಸಹ ಇಬ್ಬರೂ ಮನೆಗೆ ಬಂದಿರಲಿಲ್ಲ. ಅಲ್ಲದೇ ಗ್ರಾಮದಲ್ಲೂ ಅವರಿಬ್ಬರ ಸುಳಿವು ಇರಲಿಲ್ಲ. ಇದರಿಂದ ಆತಂಕಗೊಂಡ ಮೃತರ ಪೋಷಕರು ಸ್ಥಳೀಯರನ್ನು ವಿಚಾರಿಸಿದಾಗ ಮೀನು ಹಿಡಿಯಲು ಹೋಗಿದ್ದಾರೆಂದು ತಿಳಿಸಿದ್ದಾರೆ.
ಕೂಡಲೇ ರವಿ ಹಾಗೂ ಉಮೇಶ್ ಕುಟುಂಬದವರು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿ ಶಾಮಕ ಸಿಬ್ಬಂದಿ ನೆಲ್ಲಿಗುಡ್ಡೆ ಕೆರೆಯಲ್ಲಿ ಶವಶೋಧ ನಡೆಸುವ ವೇಳೆ ಮೊದಲಿಗೆ ತೆಪ್ಪ ಸಿಕ್ಕಿದೆ.
ಬಳಿಕ ಇಬ್ಬರು ಸಾವನ್ನಪ್ಪಿರುವುದು ಖಾತ್ರಿಯಾಗಿ ಶೋಧ ನಡೆಸಿದಾಗ ಇಬ್ಬರ ಮೃತದೇಹಗಳು ಬಲೆಯಲ್ಲಿ ಸಿಲುಕಿದ್ದು ಹೊರತೆಗೆಯಲಾಗಿದೆ.












Click it and Unblock the Notifications