ಅನರ್ಹರನ್ನು ಸೋಲಿಸಿ ಎಂದು ಟ್ವಿಟರ್ ಅಭಿಯಾನ
ಬೆಂಗಳೂರು, ಡಿಸೆಂಬರ್ 03 : 15 ಕ್ಷೇತ್ರಗಳ ಉಪ ಚುನಾವಣೆಗೆ ಎರಡು ದಿನಗಳು ಬಾಕಿ ಇದೆ. ಅನರ್ಹ ಶಾಸಕರನ್ನು ಉಪ ಚುನಾವಣೆಯಲ್ಲಿ ಸೋಲಿಸಿ ಎಂದು ಜಾಗೃತಿ ಮೂಡಿಸಲು ಟ್ವಿಟರ್ ಅಭಿಯಾನವನ್ನು ಕೈಗೊಳ್ಳಲಾಗಿದೆ.
ಡಿಸೆಂಬರ್ 3ರ ಮಂಗಳವಾರ ಮಧ್ಯಾಹ್ನ 'ಅನರ್ಹರನ್ನು ಸೋಲಿಸಿ ಕರ್ನಾಟಕದ ಗೌರವ ಉಳಿಸಿ' ಎಂಬ ಶೀರ್ಷಿಕೆಯಡಿ ಟ್ವಿಟರ್ ಅಭಿಯಾನ ಕೈಗೊಳ್ಳಲಾಗಿದೆ. ಜನರು ಟ್ವೀಟ್ ಮಾಡುವ ಮೂಲಕ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಕರ್ನಾಟಕದ 17 ಶಾಸಕರು ಅನರ್ಹಗೊಂಡಿದ್ದು, 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಮತದಾನ ನಡೆಯುತ್ತಿದೆ. ಮತದಾನಕ್ಕೆ 2 ದಿನಗಳು ಬಾಕಿ ಇರುವಾಗ ಅನರ್ಹರನ್ನು ಸೋಲಿಸಿ ಎಂಬ ಅಭಿಯಾನ ಮಾಡಲಾಗುತ್ತಿದೆ.
ಹಲವು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಟ್ವಿಟರ್‌ನಲ್ಲಿ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಈ ಮೂಲಕ ಅಭಿಯಾನವನ್ನು ಯಶಸ್ವಿಯಾಗಿಸಲು ಕೈ ಜೋಡಿಸಿದ್ದಾರೆ. 17 ಅನರ್ಹ ಶಾಸಕರ ಪೈಕಿ ಹಲವರು ಉಪ ಚುನಾವಣಾ ಕಣದಲ್ಲಿದ್ದಾರೆ.

ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ
'ಅನರ್ಹರನ್ನು ಸೋಲಿಸಿ ಕರ್ನಾಟಕದ ಗೌರವ ಉಳಿಸಿ' ಎಂಬ ಶೀರ್ಷಿಕೆಯಡಿ ಟ್ವಿಟರ್ ಅಭಿಯಾನ ನಡೆಯುತ್ತಿದೆ. ಆಸಕ್ತರು #RejectDisqualifiedMLAs ಮತ್ತು ಅನರ್ಹ ಶಾಸಕರನ್ನು ತಿರಸ್ಕರಿಸಿ ಎಂಬ ಹ್ಯಾಷ್ ಟ್ಯಾಗ್ ಬಳಸಿ ಜನರು ಟ್ವೀಟ್ ಮಾಡಬಹುದಾಗಿದೆ.

ಪ್ರಜ್ವಲ್ ರೇವಣ್ಣ ಮನವಿ
ಹಾಸನ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಈ ಕುರಿತು ಫೇಸ್‌ಬುಕ್‌ನಲ್ಲಿ ಫೋಸ್ಟ್ ಹಾಕಿದ್ದಾರೆ.
"ಹಣ-ಅಧಿಕಾರದ ಆಸೆಗಾಗಿ ತಮ್ಮನ್ನು ಮಾರಿಕೊಂಡು ರಾಜ್ಯದ ಅಭಿವೃದ್ದಿಗೆ ಬಳಕೆಯಾಗಬೇಕಾಗಿದ್ದ ತೆರಿಗೆದಾರರ ಹಣ ಚುನಾವಣೆಗೆ ಪೋಲಾಗುವಂತೆ ಮಾಡಿದ ಅನರ್ಹ ಶಾಸಕರನ್ನು ಡಿ.5 ರಂದು ನಡೆಯುವ ಉಪಚುನಾವಣೆಯಲ್ಲಿ ಸೋಲಿಸಿ ಕನ್ನಡಿಗರು ಸ್ವಾಭಿಮಾನ ಮೆರೆಯಬೇಕೆಂದು ವಿನಂತಿ" ಎಂದು ಮನವಿ ಮಾಡಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಮನವಿ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ, ವರುಣಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಸಹ ಅಭಿಯಾನಕ್ಕೆ ಬೆಂಬಲ ಸೂಚಿಸಿ ಟ್ವಿಟ್ ಮಾಡಿದ್ದಾರೆ. ಈ ಬಾರಿ ಅನರ್ಹರು ಮತ್ತೆ ಚುನಾಯಿತರಾದರೆ ಕನ್ನಡ ನಾಡಿಗೆ ಬಹುದೊಡ್ಡ ಕಳಂಕ. ಸ್ವಾಭಿಮಾನದ ಪತನ. ನಾನು ಅಭಿಯಾನದ ಭಾಗವಾಗುವೆ. ನೀವೂ ಭಾಗವಹಿಸಿ ಎಂದು ಕರೆ ಕೊಟ್ಟಿದ್ದಾರೆ.

ಅನರ್ಹ ಅಭ್ಯರ್ಥಿಗಳನ್ನು ಸೋಲಿಸಿ
ಕರ್ನಾಟಕದ ಅರ್ಧದಷ್ಟು ನೆರೆ ಬಂದು ಜನ ಸಂಕಷ್ಟದಲ್ಲಿದ್ದಾಗ ಬಾಂಬೆಯ ಹೋಟೆಲ್‌ನಲ್ಲಿ ಮಜಾ ಮಾಡುತ್ತಿದ್ದ ಅನರ್ಹ ಅಭ್ಯರ್ಥಿಗಳನ್ನು ಉಪ ಚುನಾವಣೆಯಲ್ಲಿ ಸೋಲಿಸಿ ಎಂದು ಕರೆ ನೀಡಲಾಗಿದೆ.












Click it and Unblock the Notifications