Pre Poll Survey: ಕರ್ನಾಟಕ ಬಿಜೆಪಿ ಮುಖದಲ್ಲಿ ಮಂದಹಾಸ ಮೂಡಿಸಿದ ಮತ್ತೊಂದು ಸಮೀಕ್ಷೆ! ಕಾಂಗ್ರೆಸ್ ಪಾಡೇನು?
ಬೆಂಗಳೂರು, ಏಪ್ರಿಲ್. 17: ಈ ತಿಂಗಳಿಂದ ಲೋಕಸಭೆ ಚುನಾವಣೆ ಆರಂಭವಾಗಲಿದೆ. ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆಯಲಿದೆ. ಕರ್ನಾಟಕದಲ್ಲಿಯೂ ಕೆಲವು ಜಿಲ್ಲೆಗಳಲ್ಲಿ ಏಪ್ರಿಲ್ 26 ಕ್ಕೆ ಮತದಾನ ನಡೆಯಲಿದೆ.
ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ, ಅದು ಏಪ್ರಿಲ್ 26 ಮತ್ತು ಮೇ 7 ರಂದು ಮತದಾನ ನಡೆಯಲಿದೆ. ಅದೇ ರೀತಿ ಏಳನೇ ಮತ್ತು ಕೊನೆಯ ಹಂತ ಜೂನ್ 1 ರಂದು ನಡೆಯಲಿದೆ. ಜೂನ್ 4 ರಂದು ದೇಶಾದ್ಯಂತ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಭಾರತದ ಚುನಾವಣಾ ಆಯೋಗ ಘೋಷಿಸಿದೆ.

ಟಿವಿ9, ಪೋಲ್‌ಸ್ಟ್ರಾಟ್ ಮತ್ತು ಪೀಪಲ್ಸ್ ಇನ್‌ಸೈಟ್ ಸಮೀಕ್ಷೆ
ಈಗಾಗಲೇ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಹಲವು ಸಮೀಕ್ಷೆಗಳು, ಅಭಿಪ್ರಾಯ ಸಂಗ್ರಹಗಳು ಹೊರಬಿದ್ದಿವೆ. ಇದೇ ರೀತಿ ಟಿವಿ9 ಭಾರತ್ ವರ್ಷ್, ಪೋಲ್‌ಸ್ಟ್ರಾಟ್ ಮತ್ತು ಪೀಪಲ್ಸ್ ಇನ್‌ಸೈಟ್ ಜಂಟಿಯಾಗಿ ಸಮೀಕ್ಷೆ ನಡೆಸಿದ್ದು, ಫಲಿತಾಂಶಗಳನ್ನು ಹಂಚಿಕೊಂಡಿದೆ. ದೇಶದ ಒಟ್ಟು 543 ಸ್ಥಾನಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಎನ್‌ಡಿಎ ದೇಶದಲ್ಲಿ 362 ಸ್ಥಾನಗಳನ್ನು ಗೆಲ್ಲಬಹುದು. ಅದರಲ್ಲಿ ಬಿಜೆಪಿ 319 ಸ್ಥಾನಗಳನ್ನು ಗೆಲ್ಲಬಹುದು ಮತ್ತು ಅದರ ಮಿತ್ರಪಕ್ಷಗಳು 43 ಸ್ಥಾನಗಳನ್ನು ಗೆಲ್ಲಲಿದೆ.
ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು 149 ಸ್ಥಾನಗಳನ್ನು ಗೆಲ್ಲಬಹುದು. ಅದರಲ್ಲಿ ಕಾಂಗ್ರೆಸ್ 49 ಸ್ಥಾನಗಳನ್ನು ಪಡೆಯಬಹುದು ಮತ್ತು ಮೈತ್ರಿಕೂಟದಲ್ಲಿರುವ ಇತರ ಪಕ್ಷಗಳು 100 ಸ್ಥಾನಗಳನ್ನು ಗೆಲ್ಲಬಹುದು. ಇದಲ್ಲದೇ 32 ಸ್ಥಾನಗಳು ಇತರರಿಗೆ ಹೋಗಬಹುದು ಎಂದು ತಿಳಿಸಿದೆ.

ಕರ್ನಾಟಕದಲ್ಲಿ ಯಾರಿಗೆ ಹೆಚ್ಚು ಸ್ಥಾನ?
ಕರ್ನಾಟಕ ರಾಜ್ಯದಲ್ಲಿ 28 ಲೋಕಸಭಾ ಸ್ಥಾನಗಳಿವೆ. ಅವುಗಳಲ್ಲಿ, ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) 23 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಕಾಂಗ್ರೆಸ್ 5 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದಿದೆ. ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಭಾರತೀಯ ಜನತಾ ಪಕ್ಷ 20 ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಅದರ ಮಿತ್ರಪಕ್ಷ ಜಾತ್ಯತೀತ ಜನತಾ ದಳ ನಿಂತಿರುವ ಮೂರು ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ. ಇನ್ನು, ಇಪ್ಪತ್ತಕ್ಕೂ ಹೆಚ್ಚು ಸ್ಥಾನ ಗಳಿಸುವ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಕೇವಲ 5 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ಬಹಿರಂಗಪಡಿಸಿದೆ.
ಈ ಸಮೀಕ್ಷೆಯಲ್ಲಿ ಲೋಕಸಭೆಯ ಎಲ್ಲಾ 543 ಕ್ಷೇತ್ರಗಳನ್ನು ಒಳಗೊಂಡಿತ್ತು. ಎಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ಸಮೀಕ್ಷೆಯು ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಮಾದರಿಗಳನ್ನು ತೆಗೆದುಕೊಂಡಿದೆ. ಈ ಸಮೀಕ್ಷೆಯನ್ನು ಏಪ್ರಿಲ್ 1 ರಿಂದ ಏಪ್ರಿಲ್ 13 ರವರೆಗೆ ನಡೆಸಲಾಗಿದ್ದು, ದೇಶಾದ್ಯಂತ 4123 ವಿಧಾನಸಭಾ ಕ್ಷೇತ್ರಗಳ ಮಾದರಿಯನ್ನು ತೆಗೆದುಕೊಳ್ಳಲಾಗಿದೆ.
ಕರ್ನಾಟಕ ಲೋಕಸಭಾ ಚುನಾವಣೆ
ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಿದ್ದು, ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 14 ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತದಾನ ನಡೆದರೆ, ಉಳಿದ 14 ಕ್ಷೇತ್ರಗಳಿಗೆ ಮೇ 7 ರಂದು ಮತದಾನ ನಡೆಯಲಿದೆ.
2019ರಲ್ಲಿ ಲೋಕಸಭೆ ಚುನಾವಣೆಯೂ ಎರಡು ಹಂತಗಳಲ್ಲಿ ನಡೆದಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 25 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೊಂದು ಕ್ಷೇತ್ರ ಗೆದ್ದಿದ್ದವು. ಸ್ವತಂತ್ಯ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಒಂದು ಕ್ಷೇತ್ರವನ್ನು ಗೆದ್ದಿದ್ದರು. ಈಗ ಅವರು ಬಿಜೆಪಿ ಸೇರಿದ್ದಾರೆ.












Click it and Unblock the Notifications