ತುಮಕೂರಿಗೆ ಜನವರಿವರೆಗೆ ಮಾತ್ರ ಹೇಮಾವತಿ ನೀರು; ಎದುರಾಗಲಿದೆ ಸಂಕಷ್ಟ! ಜಿ.ಪರಮೇಶ್ವರ ಹೇಳಿದ್ದೇನು?
ತುಮಕೂರು: ತುಮಕೂರು ನಗರಕ್ಕೆ ಜನವರಿವರೆಗೆ ಮಾತ್ರ ಹೇಮಾವತಿ ನೀರು ಲಭ್ಯ; ಮುಂದಿನ ಪರಿಸ್ಥಿತಿಗೆ ತುರ್ತು ಕಾರ್ಯಯೋಜನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೇಂದ್ರದ ಬರ ಅಧ್ಯಯನ ತಂಡದಿಂದ ರಾಜ್ಯಾದ್ಯಂತ ಪರಿಶೀಲನೆ ನಡೆಯುತ್ತಿದ್ದು, ಎಲ್ಲ ಮಾಹಿತಿ ನೀಡಿದ್ದು ಅಗತ್ಯ ನೆರವು ದೊರೆಯುವ ವಿಶ್ವಾಸವಿದೆ. ಉತ್ತರ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ಸ್ವತಃ ತಾವೇ ಮೂರು ದಿನ ಹೋಗಿ ಪರಿಶೀಲಿಸುವುದಾಗಿ ಉಪಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದರು.
ಇಂದು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಸಭಾ ಕೊಠಡಿಯಲ್ಲಿ 'ತುಮಕೂರು ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಮತ್ತು ನಿರ್ವಹಣೆ' ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಜಿಲ್ಲೆಯಲ್ಲಿನ ಕುಡಿಯುವ ನೀರು, ಮೇವು, ಉದ್ಯೋಗ ಸೃಷ್ಟಿ ಸೇರಿದಂತೆ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆಯಾಗುತ್ತಿದ್ದರೂ ಬರ ಪರಿಸ್ಥಿತಿಯಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಕಂಡು ಬಂದಿಲ್ಲ. ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಕೇಂದ್ರ ಸರ್ಕಾರಕ್ಕೆ ಮೆಮೊರಾಂಡಮ್ ಸಲ್ಲಿಸಿತ್ತು. ರಾಜ್ಯದ ಮನವಿಯ ಮೇರೆಗೆ ಕೇಂದ್ರ ಸರ್ಕಾರ ಮೂರು ತಂಡಗಳನ್ನು ಕಳುಹಿಸಿದ್ದು, ಅಕ್ಟೋಬರ್ 3 ರಿಂದ 6ರವರೆಗೆ ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸುತ್ತಿವೆ ಎಂದು ತಿಳಿಸಿದರು.
ಕೇಂದ್ರ ತಂಡಗಳಿಗೆ ರಾಜ್ಯದಿಂದ ಸಮಗ್ರ ಮಾಹಿತಿ
ರಾಜ್ಯಕ್ಕೆ ಆಗಮಿಸಿರುವ ಕೇಂದ್ರದ ತಂಡಗಳಿಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ರಾಜ್ಯದ ಬರ ಪರಿಸ್ಥಿತಿ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ. ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತಂಡಗಳಿಗೆ ಸ್ಥಳೀಯ ಪರಿಸ್ಥಿತಿ ವಿವರಿಸಿದ್ದಾರೆ. ಬರದಿಂದ ತೀವ್ರವಾಗಿ ಬಾಧಿತವಾದ ಪ್ರದೇಶಗಳಿಗೆ ತಂಡಗಳನ್ನು ನೇರವಾಗಿ ಕರೆದೊಯ್ದು ವಾಸ್ತವ ಸ್ಥಿತಿಯನ್ನು ತೋರಿಸಲಾಗಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿಯೂ ಕೇಂದ್ರ ತಂಡ ಮೂರ್ನಾಲ್ಕು ತಾಲ್ಲೂಕುಗಳಿಗೆ ಭೇಟಿ ನೀಡಿದೆ. ರಾಜ್ಯದಲ್ಲಿ ಸುಮಾರು 217 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. 177 ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಮೆಮೊರಾಂಡಮ್ ಸಲ್ಲಿಸಲಾಗಿದ್ದು, ಈ ಪ್ರದೇಶಗಳಲ್ಲಿ ಸುಮಾರು ₹46 ಸಾವಿರ ಕೋಟಿ ನಷ್ಟ ಉಂಟಾಗಿದೆ. ಕೇಂದ್ರ ತಂಡಗಳು ಅಗತ್ಯ ಪರಿಶೀಲನೆ ನಡೆದ ಬಳಿಕ ಸೂಕ್ತ ಮತ್ತು ಅಗತ್ಯ ನೆರವು ಸಿಗುವ ವಿಶ್ವಾಸವಿದೆ ಎಂದರು.
ತುಮಕೂರಿಗೆ ಜನವರಿವರೆಗೆ ಮಾತ್ರ ನೀರು!
ತುಮಕೂರು ಜಿಲ್ಲೆಯಲ್ಲಿ ಬರ ಎದುರಾಗಿದ್ದು, ಕುಡಿಯಲು ನೀರಿನ ಸಮಸ್ಯೆ ಉಂಟಾಗಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬರ ನಿರ್ವಹಣೆಗೆ ಸಂಬಂಧಿಸಿದ ಸಭೆ ನಡೆಸಲು ಅಥವಾ ಅಗತ್ಯ ಕ್ರಮ ಕೈಗೊಳ್ಳಲು ಯಾವುದೇ ಅಡಚಣೆ ಇಲ್ಲ. ಇದೇ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಲಾಗಿದೆ. ಜಿಲ್ಲೆಯ ಕೆಲವು ಪ್ರದೇಶಗಳಿಗೆ ಕುಡಿಯುವ ನೀರಿನ ಪ್ರಮುಖ ಮೂಲ ಹೇಮಾವತಿ ನದಿಯಾಗಿದೆ. ಈಗಾಗಲೇ ಎರಡನೇ ಬಾರಿಗೆ ಹೇಮಾವತಿಯಿಂದ ನೀರು ಹರಿಸಲಾಗಿದೆ. ಆದರೆ ಪ್ರಸ್ತುತ ಲಭ್ಯವಿರುವ ನೀರಿನ ಪ್ರಮಾಣವನ್ನು ಗಮನಿಸಿದರೆ ತುಮಕೂರು ನಗರಕ್ಕೆ ಜನವರಿವರೆಗೆ ಮಾತ್ರ ಕುಡಿಯುವ ನೀರು ಪೂರೈಸಲು ಸಾಧ್ಯವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ನಿತ್ಯ ನೀರು ಪೂರೈಕೆ ಕಷ್ಟ!
ಮುಂದಿನ ದಿನಗಳಲ್ಲಿ ಮಳೆಯಾಗಿ ಹೇಮಾವತಿ ಜಲಾಶಯಕ್ಕೆ ಒಳಹರಿವು ಬಂದರೆ ಪರಿಸ್ಥಿತಿ ಸುಧಾರಿಸಬಹುದು. ಆದರೆ ಜನವರಿ ನಂತರವೂ ಮಳೆಯಾಗದಿದ್ದರೆ ಗಂಭೀರ ಸಮಸ್ಯೆ ಎದುರಾಗಲಿದೆ. ಆಗ ಕೊಳವೆಬಾವಿಗಳ ಮೇಲೆ ಅವಲಂಬಿಸಬೇಕಾಗುತ್ತದೆ. ತುಮಕೂರು ನಗರದಲ್ಲಿ 800ಕ್ಕೂ ಹೆಚ್ಚು ಕೊಳವೆಬಾವಿಗಳಿದ್ದರೂ, ಅವುಗಳಿಂದ ದೊರೆಯುವ ನೀರು ಇಡೀ ನಗರದ ಪ್ರತಿದಿನದ ಅಗತ್ಯ ಪೂರೈಸಲು ಸಾಕಾಗುವುದಿಲ್ಲ ಎಂದರು.
ಪರ್ಯಾಯ ವ್ಯವಸ್ಥೆಗೆ ಸೂಚನೆ
ಹೇಮಾವತಿಯನ್ನು ಹೊರತುಪಡಿಸಿ ತುಮಕೂರು ನಗರಕ್ಕೆ ದೊಡ್ಡ ಪ್ರಮಾಣದಲ್ಲಿ ನೀರು ಒದಗಿಸಬಹುದಾದ ಪರ್ಯಾಯ ಮೂಲ ಲಭ್ಯವಿಲ್ಲ. ಹೀಗಾಗಿ ಜನವರಿ ನಂತರ ಎದುರಾಗಬಹುದಾದ ಪರಿಸ್ಥಿತಿಗೆ ಈಗಿನಿಂದಲೇ ಕಂಟಿಂಜೆನ್ಸಿ ಪ್ಲಾನ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆಚ್ಚುವರಿ ಕೊಳವೆಬಾವಿಗಳ ಅಗತ್ಯವಿದೆಯೇ, ಬೇರೆ ಯಾವ ಪರ್ಯಾಯ ನೀರಿನ ಮೂಲಗಳನ್ನು ಬಳಸಬಹುದು ಎಂಬುದನ್ನು ಪರಿಶೀಲಿಸಲು ತಿಳಿಸಿದ್ದೇನೆ ಎಂದು ತಿಳಿಸಿದರು.
ನೀರನ್ನು ಮಿತವಾಗಿ ಬಳಸಲು ಕರೆ: ಮೇ ತಿಂಗಳವರೆಗೆ ಪರಿಸ್ಥಿತಿ ಸವಾಲಿನದ್ದಾಗಬಹುದು. ಆದ್ದರಿಂದ ನೀರಿನ ಬಳಕೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ರೂಪಿಸುವುದಕ್ಕಿಂತ ಜನರ ಮೂಲಭೂತ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ.
ರಾಜ್ಯದಲ್ಲಿ ಜನರು ನೀರನ್ನು ಅತ್ಯಂತ ಮಿತವಾಗಿ ಬಳಸಬೇಕು. ವಾಹನಗಳನ್ನು ತೊಳೆಯಲು, ಅನಗತ್ಯವಾಗಿ ಹೆಚ್ಚಿನ ನೀರು ಬಳಸಲು ಸಾಧ್ಯವಾದಷ್ಟು ಕಡಿವಾಣ ಹಾಕಬೇಕು. ಮನೆಯ ದಿನನಿತ್ಯದ ಬಳಕೆಯಲ್ಲಿಯೂ ನೀರನ್ನು ಉಳಿತಾಯ ಮಾಡುವ ಮೂಲಕ ಜನರು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಳೆ ಸಾಧ್ಯತೆ ಕಡಿಮೆ
ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಮುಂದಿನ ಹಲವು ತಿಂಗಳುಗಳವರೆಗೆ ಸಮರ್ಪಕ ಮಳೆಯ ಸಾಧ್ಯತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು. ಈ ಕಾರಣದಿಂದ ಈಗಿರುವ ನೀರಿನ ಸಂಪನ್ಮೂಲವನ್ನು ಅತ್ಯಂತ ಜಾಗರೂಕತೆಯಿಂದ ಬಳಸಬೇಕಿದೆ. ಬರ ನಿರ್ವಹಣೆ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಸಾರ್ವಜನಿಕರ ಸಹಕಾರವೂ ಅಷ್ಟೇ ಮುಖ್ಯ. ಪ್ರತಿಯೊಬ್ಬರೂ ತಮ್ಮ ಮಟ್ಟದಲ್ಲಿ ನೀರಿನ ಸಂರಕ್ಷಣೆ ಮತ್ತು ಮಿತ ಬಳಕೆಗೆ ಆದ್ಯತೆ ನೀಡಬೇಕು ಎಂದು ವಿನಂತಿಸಿಕೊಂಡರು.
33 ವಾರಗಳಿಗೆ ಸಾಕಾಗುವ ಮೇವು ಲಭ್ಯ
ಜಾನುವಾರುಗಳು ರೈತರ ಆಸ್ತಿಯಾಗಿದ್ದು, ಅವುಗಳನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಆದ್ಯತೆ. ಎರಡು ತಿಂಗಳ ಹಿಂದೆಯೇ ರೈತರಿಗೆ ಮೇವು ಬೀಜದ ಕಿಟ್ಗಳನ್ನು ವಿತರಿಸಲಾಗಿದೆ. ಈಗ ಅವುಗಳಿಂದ ಬೆಳೆದ ಮೇವು ಬಳಕೆಗೆ ಬರುವ ಹಂತದಲ್ಲಿದೆ. ಜೋಳ ಸೇರಿದಂತೆ ಮೇವು ಬೆಳೆಗಳು ಮೂರು-ನಾಲ್ಕು ಅಡಿಯಷ್ಟು ಬೆಳೆದಿದ್ದು, ಮುಂದಿನ ದಿನಗಳಲ್ಲಿ ಅವು ರೈತರಿಗೆ ನೆರವಾಗಲಿವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಮೇವು ಖರೀದಿ ಮತ್ತು ಪೂರೈಕೆಗಾಗಿ ಈಗಾಗಲೇ 125 ಕೋಟಿ ರೂ. ಒದಗಿಸಿದೆ. ಅಗತ್ಯವಿದ್ದರೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಲಾಗುವುದು. ತುಮಕೂರು ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 33 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಪಾವಗಡದಲ್ಲಿ ಸುಮಾರು 15 ವಾರಗಳಿಗೆ ಸಾಕಾಗುವಷ್ಟು ಮೇವು ಇದೆ. ಅಲ್ಲಿ ಪರ್ಯಾಯ ಬೆಳೆ ಹಾಗೂ ಇತರೆ ಮೂಲಗಳ ಮೂಲಕ ಕೊರತೆಯನ್ನು ಸರಿದೂಗಿಸಲಾಗುವುದು. ತಿಪಟೂರು ರೈತರು ಮೇವು ಬ್ಯಾಂಕ್ ಸ್ಥಾಪಿಸುವಂತೆ ಬೇಡಿಕೆ ಇಟ್ಟಿದ್ದು, ಸಕಾರ ತಕ್ಷಣವೇ ಮೇವು ಬ್ಯಾಂಕ್ ಆರಂಭಿಸಬೇಕಾದ ಪರಿಸ್ಥಿತಿ ಬಂದಿಲ್ಲ. ಆದರೆ ಅಗತ್ಯ ಉಂಟಾದ ತಕ್ಷಣವೇ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ಆರಂಭಿಸಲಾಗುವುದು ಎಂದು ಭರವಸೆ ಕೊಟ್ಟರು.
ವಿಬಿ-ಜಿ ರಾಮ್ ಜಿ: ಉದ್ಯೋಗ ಹೆಚ್ಚಳಕ್ಕೆ ಕ್ರಮ
ವಿಬಿ-ಜಿ ರಾಮ್ ಜಿ (VB-G RAM G) ಕಾರ್ಯಕ್ರಮದಡಿ ಈಗಾಗಲೇ ಸುಮಾರು ನಾಲ್ಕೂವರೆ ಲಕ್ಷದಿಂದ ಐದು ಲಕ್ಷ ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿಸಲಾಗಿದೆ. ಈ ಕಾಮಗಾರಿಗಳನ್ನು ಮತ್ತಷ್ಟು ಹೆಚ್ಚಿಸಿ ಗ್ರಾಮೀಣ ಜನರಿಗೆ ಉದ್ಯೋಗ ಮತ್ತು ಆದಾಯ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇವೆ. ರೈತರ ನೆರವಿಗಾಗಿ ರಾಜ್ಯ ಸರ್ಕಾರ ಈಗಾಗಲೇ ಪ್ರತಿ ರೈತರಿಗೆ ₹2,500 ನೆರವು ನೀಡುತ್ತಿದೆ. ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ತೀವ್ರ ಬರ ಪರಿಸ್ಥಿತಿ ಎದುರಾಗಿದೆ. ಇದನ್ನು ಸರ್ಕಾರ, ಪ್ರತಿಪಕ್ಷ ಮತ್ತು ಸಾರ್ವಜನಿಕರು ಒಟ್ಟಾಗಿ ಎದುರಿಸಬೇಕಾಗಿದೆ ಎಂದು ಕರೆ ನೀಡಿದರು.
ಎತ್ತಿನಹೊಳೆ ಯೋಜನೆ
ಇಲ್ಲಿನ ಕೋರಾ ಹೋಬಳಿಯ ರೈತರು ಎಂಬತ್ತಹಳ್ಳಿ ಕೆರೆಗೆ ಎತ್ತಿನಹೊಳೆ ಯೋಜನೆಯ ನೀರು ಹರಿಸುವಂತೆ ಒತ್ತಾಯಿಸಿದ್ದಾರೆ. ಯೋಜನೆಯ ಮುಖ್ಯ ಎಂಜಿನಿಯರ್ ಅವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಎತ್ತಿನಹೊಳೆಯಿಂದ ಎಷ್ಟು ಪ್ರಮಾಣದ ನೀರು ಲಭ್ಯವಾಗಲಿದೆ ಎಂಬುದನ್ನು ಆಧರಿಸಿ ಕ್ರಮ ಕೈಗೊಳ್ಳಬೇಕಿದೆ. ಕೊರಟಗೆರೆಗೆ ಈಗಾಗಲೇ ನೀಡಿರುವ ನೀರಿನ ಹಂಚಿಕೆಯೊಳಗೆ ಹೊಂದಾಣಿಕೆ ಮಾಡಿಕೊಂಡು ಕೋರಾ ಹೋಬಳಿಯನ್ನೂ ಸೇರಿಸುವಂತೆ ಯೋಜನೆ ಮರುಪರಿಶೀಲಿಸಲು ಮುಖ್ಯ ಎಂಜಿನಿಯರ್ಗೆ ತಿಳಿಸಿದ್ದೇವೆ.
ಎತ್ತಿನಹೊಳೆ ಯೋಜನೆಯ ಪ್ರಾಯೋಗಿಕ ನೀರು ಹರಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಾಸನ ಭಾಗದಲ್ಲಿ ಕೆಲವು ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳಬೇಕಿವೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗೆ ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದ್ದು, ಕೆಲವು ರೈತರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ಹಾಲಿನ ದರ ಹೆಚ್ಚಳ ಆಗುತ್ತಾ?
ಸದ್ಯ ಹಾಲಿನ ದರ ಏರಿಕೆ ಕುರಿತು ಅಂತಿಮ ನಿರ್ಧಾರ ಇನ್ನೂ ಮಾಡಿಲ್ಲ. ಅದರ ಮೇಲೆ ಚರ್ಚೆಗಳು ನಡೆಯುತ್ತಿವೆ. ಕೆಎಂಎಫ್ ಅಂತಿಮವಾಗಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ. ದರ ಹೆಚ್ಚಳವಾದಲ್ಲಿ ಅದರ ಪ್ರಯೋಜನವನ್ನು ರೈತರಿಗೆ ಯಾವ ರೀತಿಯಲ್ಲಿ ತಲುಪಿಸಬಹುದು ಹಾಗೂ ಸರ್ಕಾರ ರೈತರ ನೆರವಿಗೆ ಎಷ್ಟರಮಟ್ಟಿಗೆ ಬರಬಹುದು ಎಂಬುದನ್ನು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.


Click it and Unblock the Notifications
