Lorry Strike: ರಾಜ್ಯಾದ್ಯಂತ ಲಾರಿ ಮುಷ್ಕರ ಆರಂಭ; ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ?
ಡೀಸೆಲ್ ಬೆಲೆ ಏರಿಕೆ ಹಿಂಪಡೆಯುವುದು ಮತ್ತು ಇತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಲಾರಿ ಮಾಲೀಕರು ಸೋಮವಾರ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್‌ಗಳ ಸಂಘದ (ಎಫ್‌ಕೆಎಸ್‌ಎಲ್‌ಒಎ) ನೇತೃತ್ವದಲ್ಲಿ ಮುಷ್ಕರ ನಡೆಯುತ್ತಿದ್ದು, ರಾಜ್ಯದಲ್ಲಿ ಸರಕು ಸಾಗಾಣಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಡೀಸೆಲ್ ಬೆಲೆ ಏರಿಕೆ ಹಿಂಪಡೆಯಬೇಕು ಮತ್ತು ಟೋಲ್ ಶುಲ್ಕವನ್ನು ಕಡಿಮೆ ಮಾಡಬೇಕು ಎನ್ನುವುದು ಪ್ರಮುಖ ಬೇಡಿಕೆಗಳಾಗಿವೆ. ಮುಷ್ಕರದ ಬಗ್ಗೆ ಮಾತನಾಡಿರುವ ಎಫ್‌ಕೆಎಸ್‌ಎಲ್‌ಒಎ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, ಸುಮಾರು ಆರು ಲಕ್ಷ ಟ್ರಕ್‌ಗಳು ಮುಷ್ಕರಕ್ಕೆ ಬೆಂಬಲ ಕೊಟ್ಟಿವೆ ಎಂದು ಹೇಳಿದ್ದಾರೆ. ನಮ್ಮ ನಿರ್ಧಾರ ದೃಢವಾಗಿದೆ, ಸರ್ಕಾರ ಡೀಸೆಲ್ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳುವವರೆಗೆ ಮುಷ್ಕರ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಲು ವಿತರಣಾ ವಾಹನಗಳನ್ನು ಹೊರತುಪಡಿಸಿ, ಇಂಧನ, ಎಲ್‌ಪಿಜಿ, ನಿರ್ಮಾಣ ಸಾಮಗ್ರಿಗಳು ಮತ್ತು ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು ಸೇರಿದಂತೆ ಇತರ ಎಲ್ಲಾ ಸರಕು ಸಾಗಣೆದಾರರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ. 24 ರಾಜ್ಯಗಳ 60 ಕ್ಕೂ ಹೆಚ್ಚು ಸಾರಿಗೆ ಸಂಘಗಳು ಪ್ರತಿಭಟನೆಗಳಿಗೆ ಬೆಂಬಲ ನೀಡುವುದಾಗಿ ಹೇಳಿವೆ. ಈ ರಾಜ್ಯಗಳ ಟ್ರಕ್‌ಗಳು ಆಂದೋಲನದ ಸಮಯದಲ್ಲಿ ಕರ್ನಾಟಕದೊಳಗೆ ಬರುವುದಿಲ್ಲ ಎಂದು ಷಣ್ಮುಗಪ್ಪ ತಿಳಿಸಿದ್ದಾರೆ.
ಏಪ್ರಿಲ್ 1 ರಿಂದ ಡೀಸೆಲ್ ಮಾರಾಟ ತೆರಿಗೆಯನ್ನು 18.44% ರಿಂದ 21.17% ಕ್ಕೆ ಏರಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಈ ಮುಷ್ಕರ ನಡೆಯುತ್ತಿದೆ. ತೆರಿಗೆ ಹೆಚ್ಚಳದಿಂದ ಡೀಸೆಲ್ ಬೆಲೆ ಲೀಟರ್‌ಗೆ ₹2.05 ರಷ್ಟು ಏರಿಕೆಯಾಗಿದ್ದು, ಸಾಗಣೆದಾರರಿಗೆ ಕಾರ್ಯಾಚರಣೆಯ ವೆಚ್ಚ ಹೆಚ್ಚಾಗಿದೆ. ಲಾರಿ ಮಾಲೀಕರು ಈಗಾಗಲೇ ಹೆಚ್ಚಿನ ವೆಚ್ಚದ ಹೊರೆಯನ್ನು ಹೊಂದಿದ್ದಾರೆ. ಈ ಹೆಚ್ಚಳದಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಲಾರಿ ಮಾಲಿಕರ ಬೇಡಿಕೆಗಳೇನು?
ರಾಜ್ಯದೊಳಗೆ ಟೋಲ್ ಸಂಗ್ರಹವನ್ನು ಸಂಪೂರ್ಣವಾಗಿ ತೆಗೆದುಹಾಕುವುದು, ರಾಜ್ಯ ಗಡಿಗಳಲ್ಲಿ ಆರ್‌ಟಿಒ ಚೆಕ್‌ಪೋಸ್ಟ್‌ಗಳನ್ನು ರದ್ದುಮಾಡುವುದು ಮತ್ತು ವಾಹನದ ಫಿಟ್‌ನೆಸ್ ಪ್ರಮಾಣಪತ್ರವನ್ನು ನವೀಕರಿಸಲು ₹15,000 ಶುಲ್ಕವನ್ನು ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಹಿಂತೆಗೆದುಕೊಳ್ಳುವುದು ಪ್ರಮುಖ ಬೇಡಿಕೆಗಳಾಗಿವೆ.
ಲಾರಿ, ಟ್ರಕ್ ಸೇವೆಗಳು ಬಂದ್ ಆಗಲಿದ್ದು, ಅಗತ್ಯ ಸರಕು ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ದಿನಗಳಕೆ ವಸ್ತುಗಳ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಮುಖ್ಯವಾಗಿ ಸೊಪ್ಪು, ತರಕಾರಿ ಬೆಲೆ ಏರಿಳಿತವಾಗುವ ಸಾಧ್ಯತೆ ಇದೆ. ಲಾರಿ ಮಾಲಿಕರ ಮುಷ್ಕರಕ್ಕೆ ಟ್ಯಾಕ್ಸಿ ಚಾಲಕರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೂ ಬೆಂಗಳೂರಿನಲ್ಲಿ ಟ್ಯಾಕ್ಸಿ ಸೇವೆ ಎಂದಿನಂತೆ ಮುಂದುವರೆಯಲಿದೆ.












Click it and Unblock the Notifications