ಮುಖ್ಯಮಂತ್ರಿಗಳ ಜೊತೆ ಸಭೆ ವಿಫಲ: 3ನೇ ದಿನಕ್ಕೆ ಲಾರಿ ಮಾಲೀಕರ ಮುಷ್ಕರ
ಬೆಂಗಳೂರು, ಏಪ್ರಿಲ್ 16: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಲಾರಿ ಮಾಲೀಕರು ಮುಷ್ಕರ ಆರಂಭಿಸಿದ್ದಾರೆ. ಮುಷ್ಕರ ನಿರತ ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳು ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಲಾರಿ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ. ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ. ಮುಷ್ಕರವನ್ನು ಕೈಬಿಡುವಂತೆ ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿಯಲ್ಲಿ ಮುಷ್ಕರ ನಿರತ ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿದರು. ಗೃಹ ಸಚಿವ ಜಿ. ಪರಮೇಶ್ವರ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಲಾರಿ ಮಾಲಿಕರ ಸಂಘದ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯ ಮುಖ್ಯಾಂಶಗಳು: ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳ ಸಭೆಯ ಬಳಿಕ ಮುಖ್ಯಮಂತ್ರಿಗಳ ಕಛೇರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ. ಸಭೆಯಲ್ಲಿ ಯಾವ-ಯಾವ ವಿಚಾರಗಳ ಕುರಿತು ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದೆ.
* ಈ ಬಾರಿ ಬಜೆಟ್‌ನಲ್ಲಿ ಡಿಸೇಲ್ ಮೇಲಿನ ಸುಂಕ ರೂ. 2 ಹೆಚ್ಚಳ ಮಾಡಲಾಗಿದೆ. ಆದರೆ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಡಿಸೇಲ್ ದರ ನಮ್ಮ ರಾಜ್ಯದಲ್ಲಿ ಕಡಿಮೆಯಿದೆ. ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮುಷ್ಕರವನ್ನು ಕೈಬಿಡುವಂತೆ ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಸಭೆಯಲ್ಲಿ ಹೇಳಿದ್ದಾರೆ.
* ಲಾರಿ ಮಾಲೀಕರ ಸಂಘದ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಸರ್ಕಾರ ಬಡವರ ಪರವಾಗಿದ್ದು ಸರ್ಕಾರದೊಂದಿಗೆ ಲಾರಿ ಮಾಲೀಕರು ಸಹಕರಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
* ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಪ್ರತಿ ವರ್ಷ ಸುಮಾರು 14 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. 83 ಸಾವಿರ ಕೋಟಿ ರೂ. ಈ ವರ್ಷ ಬಂಡವಾಳ ವೆಚ್ಚಕ್ಕೆ ಮೀಸಲಿರಿಸಲಾಗಿದೆ ಎಂದು ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳ ಸಭೆಯಲ್ಲಿ ಮುಖ್ಯಮಂತ್ರಿಗಳು ವಿವರಿಸಿದ್ದಾರೆ.
* ಸಂಚಾರಿ ದಟ್ಟಣೆ ಅವಧಿಯಲ್ಲಿ ನಗರದ ಒಳಗೆ ಲಾರಿಗಳು ಪ್ರವೇಶಿಸುವುದರ ಬಗ್ಗೆ ಇರುವ ನಿರ್ಬಂಧ ತೆರವು ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಈ ಕುರಿತಾಗಿ ಇನ್ನೊಮ್ಮೆ ಲಾರಿ ಮಾಲೀಕರ ಸಂಘದೊಂದಿಗೆ ಸಭೆ ನಡೆಸಲಾಗುವುದು ಎಂದು ಸಭೆಯಲ್ಲಿ ಮುಖ್ಯಮಂತ್ರಿಗಳು ಭರವಸೆ ಕೊಟ್ಟಿದ್ದಾರೆ.
ಕರ್ನಾಟಕದಲ್ಲಿ ಸೋಮವಾರ ಮಧ್ಯರಾತ್ರಿಯಿಂದಲೇ ಲಾರಿ ಮಾಲೀಕರು ಮುಷ್ಕರ ಆರಂಭಿಸಿದ್ದಾರೆ. ಲಾರಿಗಳು ನಿಂತಲ್ಲೇ ನಿಂತಿದ್ದು, ಚಾಲಕರು, ಕ್ಲೀನರ್‌ಗಳು ಲಾರಿಯಲ್ಲಿಯೇ ಅಡುಗೆ ಬೇಯಿಸಿಕೊಂಡು ಊಟ ಮಾಡುತ್ತಿದ್ದಾರೆ. ಮುಷ್ಕರ ಅಂತ್ಯಗೊಳಿಸಲು ಸರ್ಕಾರ ನಡೆಸಿದ ಸಭೆ ವಿಫಲವಾಗಿದ್ದು, ಬುಧವಾರ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶಾಂತಿ ನಗರದ ಕೆಎಸ್ಆರ್‌ಟಿಸಿ ಕಛೇರಿಯಲ್ಲಿ ಲಾರಿ ಮಾಲೀಕರ ಸಂಘದ ಜೊತೆ ಸುಧೀರ್ಘ ಸಭೆಯನ್ನು ನಡೆಸಿದರು. ಲಾರಿ ಮಾಲೀಕರ ಹಾಗೂ ಏಜೆಂಟರ ಸಂಘದ ಅಧ್ಯಕ್ಷ ಜಿ. ಆರ್. ಷಣ್ಮುಖಪ್ಪ ಮತ್ತು ಇತರರ ಜೊತೆ ನಡೆಸಿದ ಸಭೆ ವಿಫಲವಾಯಿತು. ಬಳಿಕ ಪದಾಧಿಕಾರಿಗಳ ಜೊತೆ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಲು ತೆರಳಿ ಕಾವೇರಿಯಲ್ಲಿ ಸಭೆ ನಡೆಸಿದರು.
ಲಾರಿ ಚಾಲಕರು ಮುಷ್ಕರ ನಡೆಸುತ್ತಿದ್ದರೂ ಸಹ ಅಗತ್ಯ ಸೇವೆಗಳಾದ ಹಾಲು, ಔಷಧ, ಗೃಹ ಬಳಕೆ ಎಲ್‌ಪಿಜಿ, ಹಣ್ಣು-ತರಕಾರಿ, ಅಂಬ್ಯುಲೆನ್ಸ್, ಅಗ್ನಿಶಾಮಕ ಸೇವೆ ಎಂದಿನಂತೆ ಇರಲಿದೆ ಎಂದು ಸ್ಪಷ್ಟಪಡಿಸಲಾಗಿದೆ. ಮುಷ್ಕರಕ್ಕೆ ಟ್ಯಾಕ್ಸಿ ಚಾಲಕರು ಸಹ ಬೆಂಬಲ ಸೂಚಿಸಿದ್ದಾರೆ. ಆದರೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಂಗಳವಾರ ಓಲಾ, ಊಬರ್ ಟ್ಯಾಕ್ಸಿಗಳ ಸಂಚಾರ ಎಂದಿನಂತೆಯೇ ಇತ್ತು.












Click it and Unblock the Notifications