Hit And Run Law: ಕರ್ನಾಟಕದಲ್ಲಿಂದು ಟ್ರಕ್ ಚಾಲಕರ ಅನಿರ್ದಿಷ್ಟಾವಧಿ ಮುಷ್ಕರ!
ಬೆಂಗಳೂರು ಜನವರಿ 17: 10 ವರ್ಷ ಜೈಲು ಶಿಕ್ಷೆಯೊಂದಿಗೆ ₹7 ಲಕ್ಷ ದಂಡ ವಿಧಿಸುವ ಹೊಸ ಹಿಟ್ ಅಂಡ್ ರನ್ ಕಾನೂನಿನ ವಿರುದ್ಧ ಕರ್ನಾಟಕ ಟ್ರಕ್ ಚಾಲಕರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಇದರ ಭಾಗವಾಗಿ ಇಂದು ರಾತ್ರಿ 12ಗಂಟೆಯಿಂದ ಯಾವ ಲಾರಿ ಕೂಡ ಸಂಚಾರ ಮಾಡುವುದಿಲ್ಲ.
ಹಿಟ್ ಅಂಡ್ ರನ್ ಪ್ರಕರಣಗಳಿಗೆ ಹೊಸದಾಗಿ ಜಾರಿಗೆ ತಂದಿರುವ ಕಾನೂನನ್ನು ವಿರೋಧಿಸಿ ಕರ್ನಾಟಕದಲ್ಲಿ ಟ್ರಕ್ ಚಾಲಕರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಿದ್ಧರಾಗಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಟ್ರಕ್ ಚಾಲಕರು ಮುಷ್ಕರವನ್ನು ಬೆಂಬಲಿಸಲು ಮತ್ತು ತಮ್ಮ ವಾಹನಗಳನ್ನು ರಸ್ತೆಗಿಳಿಸದಂತೆ ಕೋರಲಾಗಿದೆ. ಇದರಿಂದಾಗಿ ಇಂದು ಟ್ರಕ್ ಚಾಲಕರು ಲಾರಿಗಳನ್ನು ರಸ್ತೆಗಿಳಿಸುವುದಿಲ್ಲ ಎಂದು ಕರ್ನಾಟಕ ಲಾರಿ ಮಾಲೀಕರ ಸಂಘ ತಿಳಿಸಿದೆ.

ಸಂಘದ ಅಧ್ಯಕ್ಷ ಸಿ ನವೀನ್ ರೆಡ್ಡಿ, ಕೇಂದ್ರ ಸರ್ಕಾರವು ಏಕಪಕ್ಷೀಯ ನಿರ್ಧಾರಕ್ಕೆ ಬಂದಿದ್ದು ಅದು ತರಾತುರಿಯಾಗಿ ಕಾನೂನನ್ನು ಜಾರಿಗೆ ತಂದಿದೆ. ಅವರು ಅದನ್ನು ನಿರ್ಧರಿಸುವ ಮೊದಲು ನಮ್ಮೊಂದಿಗೆ ಸಂಪರ್ಕಿಸಲಿಲ್ಲ. ಜೊತೆಗೆ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಹಿಟ್ ಅಂಡ್ ರನ್ ಪ್ರಕರಣಗಳ ಈ ಹೊಸ ಕಾನೂನು ಏನು?
ಹೊಸದಾಗಿ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಿಗೆ ₹ 7 ಲಕ್ಷ ದಂಡ ಮತ್ತು 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲು ಅವಕಾಶ ನೀಡಲಾಗಿದೆ. ಈ ಕಾನೂನು ವಿರೋಧಿಸಿ ಟ್ರಕ್ ಚಾಲಕರು, ಟ್ಯಾಕ್ಸಿ ಮತ್ತು ಬಸ್ ನಿರ್ವಾಹಕರು ರಾಷ್ಟ್ರವ್ಯಾಪಿ ಮುಷ್ಕರವನ್ನು ಪ್ರಾರಂಭಿಸಿದರು. ಆದರೆ ಈ ಕಾನೂನು ಜಾರಿಗೆ ತರುವ ಮುನ್ನ ನಮ್ಮೊಂದಿಗೆ ಚರ್ಚಿಸಬೇಕಿತ್ತು. ಇದು ಸಮ್ಮತವಾದ ಕಾನೂನು ಅಲ್ಲ ಎಂದು ಚಾಲಕರು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ. ಕೂಡಲೆ ನೂತನ ಕಾನೂನನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಈ ರಾಜ್ಯವ್ಯಾಪಿ ಮುಷ್ಕರ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, ಲಾಜಿಸ್ಟಿಕ್ಸ್ ಮತ್ತು ಇಂಧನ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು.
ಇದೇ ಕಾನೂನನ್ನು ವಿರೋಧಿಸಿ ಟ್ರಕ್‌ಗಳು, ಟ್ಯಾಕ್ಸಿಗಳು ಮತ್ತು ಬಸ್‌ಗಳ ನಿರ್ವಾಹಕರು ತಿಂಗಳ ಆರಂಭದಲ್ಲಿ ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ನಡೆಸಿದರು. ಇದು ಚಾಲಕರಿಗೆ ಅನಾವಶ್ಯಕ ಕಿರುಕುಳ ನೀಡುವ ಕಾನೂನಾಗಿದೆ ಎಂದು ಹೇಳಿಕೊಂಡು ಅನೇಕರು ಈ ನಿಬಂಧನೆಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಹರ್ಯಾಣ, ಪಂಜಾಬ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಬಿಹಾರದ ಸ್ಥಳೀಯ ಸಾರಿಗೆ ಒಕ್ಕೂಟಗಳು, ಖಾಸಗಿ ಬಸ್‌ಗಳು, ಟ್ರಕ್‌ಗಳು, ತೈಲ ಟ್ಯಾಂಕರ್‌ಗಳು ಮತ್ತು ಟ್ಯಾಕ್ಸಿಗಳು ಈ ಅವಧಿಯಲ್ಲಿ ರಸ್ತೆಯಿಂದ ದೂರ ಉಳಿದಿವೆ. ದೇಶವು ಮುಷ್ಕರದಿಂದ ಭಾಗಶಃ ಪರಿಣಾಮವನ್ನು ಕಂಡಿದೆ. ಕೆಲವು ರಾಜ್ಯಗಳು ಕಡಿಮೆ ಇಂಧನ ಲಭ್ಯತೆಯನ್ನು ವರದಿ ಮಾಡಿದೆ. ಏಕೆಂದರೆ ತೈಲ ಟ್ಯಾಂಕರ್ ಚಾಲಕರು ಸಹ ಪ್ರತಿಭಟನೆಯನ್ನು ಬೆಂಬಲಿಸಿದರು.
ಜನವರಿ 2 ರಂದು, ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (ಎಐಎಂಟಿಸಿ) ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರೊಂದಿಗಿನ ಸಭೆಯ ನಂತರ ರಾಷ್ಟ್ರವ್ಯಾಪಿ ಟ್ರಕ್ ಚಾಲಕರು ಹೊಸ ಹಿಟ್ ಅಂಡ್ ರನ್ ಕಾನೂನು ವಿರುದ್ಧ ಪ್ರತಿಭಟನೆಯನ್ನು ಕೊನೆಗೊಳಿಸಲು ನಿರ್ಧರಿಸಿದರು.












Click it and Unblock the Notifications