ಜನವರಿ 8, 9ಕ್ಕೆ ದೇಶವ್ಯಾಪಿ ಮುಷ್ಕರ : ಏನಿರುತ್ತೆ, ಏನಿರಲ್ಲ?
Recommended Video

ಬೆಂಗಳೂರು, ಜನವರಿ 06 : ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜನವರಿ 8 ಮತ್ತು 9ರಂದು ರಾಷ್ಟ್ರ ವ್ಯಾಪ್ತಿ ಮುಷ್ಕರಕ್ಕೆ ಕರೆ ನೀಡಿವೆ. 12 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸಲಾಗುತ್ತಿದೆ.
ಜನವರಿ 8ರ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಜನವರಿ 9ರ ಬುಧವಾರ ಸಂಜೆ 5 ಗಂಟೆಯ ತನಕ ಮುಷ್ಕರ ನಡೆಯಲಿದೆ. ಕೇಂದ್ರ ಸರ್ಕಾರದ ವಿರುದ್ಧ ನಡೆಯಲಿರುವ ಮುಷ್ಕರಕ್ಕೆ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವೂ ಬೆಂಬಲ ನೀಡುವ ನಿರೀಕ್ಷೆ ಇದೆ.
ಕರ್ನಾಟಕದಲ್ಲಿ ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ಸೇರಿದಂತೆ ನಾಲ್ಕು ನಿಗಮದ ನೌಕರರು ಮುಷ್ಕರಕ್ಕೆ ಬೆಂಬಲ ನೀಡಲಿದ್ದು, ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಆಟೋ, ಕ್ಯಾಬ್ ಚಾಲಕರು ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.
ಆಸ್ಪತ್ರೆ, ಔಷಧಿ ಅಂಗಡಿ, ಆಂಬ್ಯುಲೆನ್ಸ್ ಸೇವೆಗೆ ಯಾವುದೇ ತೊಂದರೆ ಇಲ್ಲ. ನಮ್ಮ ಮೆಟ್ರೋ ಮತ್ತು ರೈಲು ಸೇವೆ ಎಂದಿನಂತೆ ಇರಲಿದೆ. ಎಷ್ಟು ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ನೀಡಿವೆ ಎಂಬುದು ಸೋಮವಾರ ಖಚಿತವಾಗಲಿದೆ...

ದೇಶವ್ಯಾಪಿ ಮುಷ್ಕರ
ಮೋಟಾರು ವಾಹನ ತಿದ್ದುಪಡಿ ಮಸೂದೆ 2017ಅನ್ನು ಹಿಂಪಡೆಯಲು, ಸಾರಿಗೆ ಉದ್ದಿಮೆಯನ್ನ ರಕ್ಷಿಸಲು ಮತ್ತು ಅಸಂಘಟಿತ ಸಾರಿಗೆ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷಾ ಕಾಯ್ದೆಯನ್ನು ಜಾರಿಗೊಳಿಸಲು ಬಂದ್ ಕರೆ ನೀಡಲಾಗಿದೆ.

ಕೆಎಸ್ಆರ್‌ಟಿಸಿ ಬಸ್ ಇಲ್ಲ
'ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ಬಸ್ ಸಂಚಾರ ಜನವರಿ 8 ಮತ್ತು 9ರಂದು ಸ್ಥಗಿತವಾಗಲಿದೆ' ಎಂದು ಸಿಐಟಿಯು ಉಪಾಧ್ಯಕ್ಷ ಅನಂತ್ ಸುಬ್ಬರಾವ್ ಅವರು ಹೇಳಿದ್ದಾರೆ.

ಆಟೋಗಳ ಸಂಚಾರವಿಲ್ಲ
ಆಟೋ ರಿಕ್ಷಾ ಚಾಲಕರ ಐಕ್ಯ ಹೋರಾಟ ಸಮಿತಿ ಎರಡು ದಿನಗಳ ದೇಶವ್ಯಾಪಿ ಮುಷ್ಕರಕ್ಕೆ ಬೆಂಬಲ ನೀಡಿದೆ. ಆಟೋ ಚಾಲಕರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಮುಷ್ಕರದ ದಿನ ಆಟೋಗಳು ರಸ್ತೆಗೆ ಇಳಿಯುವುದಿಲ್ಲ.

ಟ್ಯಾಕ್ಸಿ ಸೇವೆ ಇಲ್ಲ
ಎರಡು ದಿನದ ಮುಷ್ಕರಕ್ಕೆ ಟ್ಯಾಕ್ಸಿ ಚಾಲಕರು ಸಹ ಬೆಂಬಲ ನೀಡಿದ್ದಾರೆ. ಆದರೆ, ಓಲಾ ಮತ್ತು ಊಬರ್ ಟ್ಯಾಕ್ಸಿಗಳ ಸೇವೆ ಸ್ಥಗಿತಗೊಳ್ಳುವುದಿಲ್ಲ. ವಿಮಾನ ನಿಲ್ದಾಣದ ಟ್ಯಾಕ್ಸಿಗಳು ಎಂದಿನಂತೆ ಸಂಚಾರ ನಡೆಸಲಿವೆ.

ಹೋಟೆಲ್, ಚಿತ್ರೋದ್ಯಮ?
ಹೋಟೆಲ್ ಮಾಲೀಕರು ಮುಷ್ಕರಕ್ಕೆ ನೈತಿಕ ಬೆಂಬಲ ನೀಡಲಿದ್ದಾರೆ. ಆದ್ದರಿಂದ, ಹೋಟೆಲ್‌ಗಳು ತೆರೆದಿರುತ್ತವೆ. ಚಲನಚಿತ್ರ ಪ್ರದರ್ಶನ ಬಂದ್ ಮಾಡುವ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.

ಶಾಲಾ-ಕಾಲೇಜುಗಳು
ಬಸ್, ಆಟೋ ಸಂಚಾರ ಸ್ಥಗಿತಗೊಳ್ಳುವುದದಿಂದ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಹೋಗಲು ಸಮಸ್ಯೆ ಆಗಲಿದೆ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುತ್ತದೆ.

ಮೆಟ್ರೋ, ಆಸ್ಪತ್ರೆ, ರೈಲು
ಎರಡು ದಿನದ ಮುಷ್ಕರದ ವೇಳೆ ಆಸ್ಪತ್ರೆ, ಮೆಡಿಕಲ್ ಶಾಪ್, ನಮ್ಮ ಮೆಟ್ರೋ, ರೈಲು ಸೇವೆಗೆ ಯಾವುದೇ ತೊಂದರೆ ಇಲ್ಲ. ಆಂಬ್ಯಲೆನ್ಸ್, ಹಾಲಿನ ವಾಹನಗಳು ಸಹ ಎಂದಿನಂತೆ ಇರಲಿವೆ.












Click it and Unblock the Notifications