ಕರ್ನಾಟಕದಲ್ಲಿ ಕೊರೊನಾ ಕಠಿಣ ನಿಯಮ; ಸುಳಿವು ನೀಡಿದ ಸಚಿವ ಸುಧಾಕರ್?
ಬೆಂಗಳೂರು, ಏಪ್ರಿಲ್ 04: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಜಾರಿಗೊಳಿಸುವುದು ಅನಿವಾರ್ಯವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕೊವಿಡ್-19 ಸೋಂಕಿನ ಅಟ್ಟಹಾಸ ಹೆಚ್ಚಾಗಿದೆ. ಶನಿವಾರವೊಂದೇ ದಿನ ಆ ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂದರು.
ಕೊರೊನಾವೈರಸ್ ಸೋಂಕಿನ ಹೊಡೆತಕ್ಕೆ ಮಹಾರಾಷ್ಟ್ರ ತತ್ತರಿಸಿ ಹೋಗಿದೆ. ಕಳೆದ 24 ಗಂಟೆಗಳಲ್ಲೇ 500ಕ್ಕೂ ಹೆಚ್ಚು ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಅಂಥ ಪರಿಸ್ಥಿತಿ ರಾಜ್ಯದಲ್ಲಿ ಎದುರಾಗದಂತೆ ಮುಂಜಾಗ್ರತೆ ವಹಿಸಬೇಕಿದೆ. ಇಲ್ಲದೇ ಹೋದರೆ ಭವಿಷ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಸಚಿವ ಡಾ.ಕೆ ಸುಧಾಕರ್ ಎಚ್ಚರಿಕೆ ನೀಡಿದರು.

ಕರ್ನಾಟಕದಲ್ಲಿ ಕಠಿಣ ನಿಯಮ ಜಾರಿ ಅನಿವಾರ್ಯ:
ಕೊರೊನಾವೈರಸ್ ಸೋಂಕಿನ ಹರಡುವಿಕೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಮತ್ತು ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿ ಆಧರಿಸಿ ಕರ್ನಾಟಕದಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕಾದ ಅನಿವಾರ್ಯತೆಯಿದೆ ಎಂದು ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕೊರೊನಾವೈರಸ್ ಅಂಕಿ-ಸಂಖ್ಯೆ:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 4373 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 19 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 12610ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 1959 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 10,10,602ಕ್ಕೆ ಏರಿಕೆಯಾಗಿದೆ. ಈವರೆಗೂ 9,61,359 ಸೋಂಕಿತರು ಗುಣಮುಖರಾಗಿದ್ದು, 36,614 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications