ಗೌರಿ ಲಂಕೇಶ್ ಹಂತಕರ ಪತ್ತೆ?, ಇತರ ದಿನದ ಪ್ರಮುಖ ಸುದ್ದಿ
ಬೆಂಗಳೂರು, ಅಕ್ಟೋಬರ್ 30 : ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಜಾಡನ್ನು ಎಸ್‌ಐಟಿ ಪತ್ತೆ ಮಾಡಿದೆ ಎಂದು ಟಿವಿ 9 ವರದಿ ಮಾಡಿದೆ. ಹಂತಕರು 4 ರಾಜ್ಯಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ, ಅವರು ಯಾವುದೇ ಸಂಘಟನೆಗೆ ಸೇರಿದವರಲ್ಲ ಎಂದು ಎಸ್‌ಐಟಿಗೆ ಮಾಹಿತಿ ಸಿಕ್ಕಿದೆ ಎನ್ನುತ್ತದೆ ವರದಿ.
ಸೆ.5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದ ಮುಂದೆ ಗೌರಿ ಲಂಕೇಶ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಕೆಲವು ದಿನಗಳ ಹಿಂದೆ ಎಸ್‌ಐಟಿ ಹಂತರಕ ರೇಖಾಚಿತ್ರವನ್ನು ಬಿಡುಗಡೆ ಮಾಡಿತ್ತು. ಈಗ ಹಂತಕರ ಜಾಡು ಪತ್ತೆಯಾಗಿದೆ ಎಂಬ ವರದಿ ಬಂದಿದೆ.
ಹಂತಕರು ಮಧ್ಯಪ್ರದೇಶ, ಉತ್ತರ ಪ್ರದೇಶ ಹೀಗಿ 4 ರಾಜ್ಯಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ. ನಿರಂತರವಾಗಿ ಅವರು ನೆಲೆಗಳನ್ನು ಬದಲಾವಣೆ ಮಾಡುತ್ತಿದ್ದಾರೆ. ದೇಶದಲ್ಲಿ ನಡೆದ ಹಲವು ಹತ್ಯೆಗಳಲ್ಲಿ ಇವರ ಕೈವಾಡವಿದೆ ಎಂದು ಎಸ್‌ಐಟಿ ಉನ್ನತ ಮೂಲಗಳು ಮಾಹಿತಿ ನೀಡಿದೆ ಎಂದು ಟಿವಿ 9 ವರದಿ ಹೇಳಿದೆ.
ಕರ್ನಾಟಕ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು ಘೋಷಣೆ ಮಾಡಿದೆ. ಕರ್ನಾಟಕ ಮತ್ತು ಭಾರತದ ಇಂದಿನ ಪ್ರಮುಖ ಸುದ್ದಿಗಳ ವಿವರಗಳು ಇಲ್ಲಿವೆ...

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
2017ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಸೋಮವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ನವೆಂಬರ್ 1ರಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಪಟ್ಟಿ

ತಮಿಳುನಾಡಿನಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ
ತಮಿಳುನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಮೊಬೈಲ್, ತುರ್ತು ಬ್ಯಾಟರಿಗಳನ್ನು ರೀಚಾರ್ಜ್ ಮಾಡಿಕೊಳ್ಳುವಂತೆ ಸರ್ಕಾರ ಸೂಚನೆ ಕೊಟ್ಟಿದೆ. ಚೆನ್ನೈನಲ್ಲಿ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಳೆಯ ವಿವರಗಳ ಸುದ್ದಿಗಾಗಿ ಕ್ಲಿಕ್ ಮಾಡಿ.

ಭೀಮಾತೀರದಲ್ಲಿ ಮತ್ತೆ ನೆತ್ತರು
ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಸೋಮವಾರ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೊಂಕಣಗಾಂವ್ ಗ್ರಾಮದಲ್ಲಿ ಪೊಲೀಸರು ಹಾಗೂ ಭೀಮಾತೀರದ ಹಂತಕನ ನಡುವೆ ಗುಂಡಿನ ಚಕಮಕಿ ನಡೆಸಿದೆ. ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಪಿಎಸ್ ಐ ಗೋಪಾಲ್ ಅವರು ಗಾಯಗೊಂಡಿದ್ದಾರೆ.

ನವೆಂಬರ್ 1ರಂದು ಹೊಸ ಪಕ್ಷ ಘೋಷಣೆ
ಕೂಡ್ಲಿಗಿಯ ಮಾಜಿ ಡಿವೈಎಸ್ಪಿ ಅನುಪಮ ಶೆಣೈ ಅವರು ಹೊಸ ರಾಜಕೀಯ ಪಕ್ಷ ಕಟ್ಟುತ್ತಿದ್ದಾರೆ. ಸೋಮವಾರ ಬಳ್ಳಾರಿಯಲ್ಲಿ ಮಾತನಾಡಿದ ಅವರು, ನವೆಂಬರ್ ಮೊದಲ ವಾರದಲ್ಲಿಯೇ ಪಕ್ಷ ಅಸ್ತಿತ್ವಕ್ಕೆ ಬರಲಿದೆ. ನವೆಂಬರ್ 1ರಂದು ಪಕ್ಷದ ಹೆಸರು ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಸ್ಪಷ್ಟನೆ ನೀಡಿದ ಎಚ್.ಡಿ.ಕುಮಾರಸ್ವಾಮಿ
ಪಿ.ಜಿ.ಆರ್.ಸಿಂಧ್ಯಾ ಅವರು ವರುಣಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. 'ಚುನಾವಣೆಗೆ ವರುಣಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಇಡೀ ರಾಜ್ಯದಲ್ಲಿ ಪಕ್ಷದ ಸಮಗ್ರ ಸಂಘಟನೆಯ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ' ಎಂದು ಹೇಳಿದ್ದಾರೆ.

ದೇವರು ಅಪವಿತ್ರ ಆಗಿಬಿಡ್ತಾನಾ?
ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳ ಭೇಟಿ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಇಂದು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಿದ್ದರಾಮಯ್ಯ, 'ನಾನು ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಹೋದಾಗ ಮೀನು ತಿಂದಿದ್ದು ನಿಜ, ಕೋಳಿ ತಿಂದಿದ್ದೂ ನಿಜ. ಮಾಂಸ ತಿಂದು ಹೋದ್ರೆ ದೇವರು ಅಪವಿತ್ರ ಆಗಿಬಿಡ್ತಾನಾ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಯೋಗಿ, ಸಾಹಿತ್ಯ ಮದುವೆ ತಯಾರಿ
ಲೂಸ್ ಮಾದ ಯೋಗಿ ಮತ್ತು ಸಾಹಿತ್ಯ ಮದುವೆಯ ಶಾಸ್ತ್ರಗಳು ಇಂದು ವರನ ಮನೆಯಲ್ಲಿ ಆರಂಭವಾಗಿವೆ. ಬೆಂಗಳೂರಿನ ನಗರದ ಕೋಣನಕುಂಟೆಯಲ್ಲಿರುವ ಯೋಗಿ ಅವರ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಚಪ್ಪರ ಪೂಜೆ, ಅರಿಶಿಣ ಶಾಸ್ತ್ರ ನಡೆಯಿತು. ಯೋಗಿ ಕುಟುಂಬದ ಆಪ್ತರು ಇದರಲ್ಲಿ ಭಾಗಿಯಾಗಿದ್ದರು. ನವೆಂಬರ್ 02 ವಿವಾಹ ನಡೆಯಲಿದೆ.












Click it and Unblock the Notifications