Tomato Price: ಟೊಮೆಟೊ 200 ರೂಪಾಯಿ ಅಲ್ಲ, ಈಗ 2 ರೂಪಾಯಿ!
ಟೊಮೆಟೊ ಬೆಳೆದರೆ ಶ್ರೀಮಂತಿಕೆ ಬರುತ್ತೆ.. ರಾತ್ರೋ ರಾತ್ರಿ ಲಕ್ಷ ಲಕ್ಷ ಕಾಸು ಸಂಪಾದಿಸಿ ಸೆಟಲ್ ಆಗಬಹುದು.. ಹಿಂಗೆ ಟೊಮೆಟೊ ಬೆಲೆ ಏರಿಕೆ ಕಂಡಾಗ ಕೇಳಿಬಂದ ಮಾತುಗಳು ವೆರೈಟಿ ಆಗಿದ್ದವು. ಅದರಲ್ಲೂ ರೈತರು ಜೀವನದಲ್ಲಿ ಅದೃಷ್ಟಕ್ಕೆ ಒಂದೆರಡು ಲಕ್ಷ ಲಾಭ ಮಾಡಿದ್ದೆ ತಡ ಕಣ್ಣು ಕುಕ್ಕಿತ್ತು. ಹಾಗೇ ಲಕ್ಷ ಲಕ್ಷ ಲಾಭ ಗಳಿಸಿದ್ದು ಕೇವಲ ಬೆರಳೆಣಿಕೆಯ ರೈತರು ಮಾತ್ರ. ಆದರೆ ಈಗ ಟೊಮೆಟೊ ಬೆಳೆದ ರೈತರ ಕಥೆ ಏನಾಗಿದೆ ಗೊತ್ತಾ?
ಟೊಮೆಟೊ ಬೆಲೆ ಯಾವ ರೇಂಜ್‌ಗೆ ಕುಸಿತ ಕಂಡಿದೆ ಅಂದ್ರೆ ಟೊಮೆಟೊ ಬೆಳೆದ ರೈತರು ಈಗ ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ಲಕ್ಷ ಲಕ್ಷ ಸಾಲ ಮಾಡಿ ತಂದು ಬೆಳೆ ಬೆಳೆದಿರುವ ರೈತರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಒಂದೆರಡು ತಿಂಗಳ ಹಿಂದಷ್ಟೇ ಟೊಮೆಟೊ ಪ್ರತಿ ಕೆಜಿಯ ಬೆಲೆ ಭರ್ಜರಿ ₹200 ರೂಪಾಯಿಗೂ ಹೆಚ್ಚಿತ್ತು. ಕೆಲವು ದಲ್ಲಾಳಿಗಳು ಮುಂದೆ ಟೊಮೆಟೊ ರೇಟ್ 500 ರೂಪಾಯಿ ಮುಟ್ಟುತ್ತೆ ಅನ್ನೋ ಭ್ರಮೆಯಲ್ಲಿದ್ರು. ಆದ್ರೆ ಈಗ ಎಷ್ಟಿದೆ ಗೊತ್ತಾ ಟೊಮೆಟೊ ರೇಟ್?

₹200 ರೂಪಾಯಿ ಅಲ್ಲ 2 ರೂಪಾಯಿ!
ಹೌದು, ಟೊಮೆಟೊ ಬೆಲೆ ಇದೀಗ 2 ರೂಪಾಯಿ ಬಂದು ನಿಂತಿದೆ. ಕೆಲ ವಾರದ ಹಿಂದೆ ಟೊಮೆಟೊ ಬೆಳೆಗೆ ಪೊಲೀಸರು ಭದ್ರತೆ ಕೊಡುವ ರೇಂಜ್‌ಗೆ ಬೆಲೆ ಏರಿಕೆ ಕಂಡಿತ್ತು. ಆದ್ರೆ ಈಗ ಬೀದಿ ಬೀದಿಯಲ್ಲಿ ಟೊಮೆಟೊ ಬಿಸಾಡಿ ರೈತರು ಆಕ್ರೋಶ ಹೊರಹಾಕಿದ್ದಾರೆ. ಹೀಗೆ ರೈತರು ಆಕ್ರೋಶ ಹೊರಹಾಕಲು ಕಾರಣ ಬೆಲೆ ಕುಸಿತ. ಟೊಮೆಟೊ ಬೆಲೆ ಈಗ ಪಾತಾಳ ಸೇರಿದ್ದು, ₹200 ರೂಪಾಯಿ ಬೆಲೆಯಿಂದ 2 ರೂಪಾಯಿಗೆ ಕುಸಿದು ಬಿದ್ದಿದೆ ಟೊಮೆಟೊ. ಹೀಗಾಗಿ ಭಾರತದ ರೈತರ ಪರಿಸ್ಥಿತಿ ಮತ್ತೊಮ್ಮೆ ಜಗತ್ತಿಗೇ ಮನವರಿಕೆ ಆಗಿದೆ.
ದೇಶದ ವಿವಿಧೆಡೆ ಬೆಲೆ ಕುಸಿತ!
ಪುಣೆ, ಹೈದರಾಬಾದ್, ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಟೊಮೆಟೊ ಬೆಲೆ ಭಾರಿ ಕುಸಿತ ಕಂಡಿದೆ. ಅದರಲ್ಲೂ ಪುಣೆಯಲ್ಲಿ ಪ್ರತಿ ಕ್ವಿಂಟಲ್ ಟೊಮೆಟೊ ₹200 ರೂಪಾಯಿಗೆ ಕುಸಿತ ಕಂಡಿದೆ ಎಂದು ವರದಿಯಾಗಿದೆ. ಹಾಗಾದರೆ ಪ್ರತಿ ಕೆಜಿ ಟೊಮೆಟೊ 2 ರೂಪಾಯಿ ತಲುಪಿದಂತೆ ಆಯ್ತು. ಇಷ್ಟುದಿನ ಆಸೆಯಿಂದ ಒಳ್ಳೆಯ ಬೆಲೆ ಸಿಗುತ್ತೆ ಅಂತಾ ರೈತರು ಈ ಬೆಳೆ ಬೆಳೆದಿದ್ದರು. ಆದ್ರೆ ಈಗ ಆಗಿರುವುದೇ ಬೇರೆ, ಟೊಮೆಟೊ ಬೆಳೆದ ರೈತರ ಕೈಗೆ ಅಲ್ಲಿ ಹೂಡಿರುವ ಬಂಡವಾಳದ ಹಣ ಕೂಡ ಬರ್ತಿಲ್ಲ. ಏನು ಮಾಡೋದು ಅನ್ನೊದೆ ಇದೀಗ ರೈತರಿಗೆ ಅರ್ಥವಾಗುತ್ತಿಲ್ಲ.

ಕರ್ನಾಟಕದಲ್ಲಿ ಬೆಲೆ ಎಷ್ಟಿದೆ?
ಅಷ್ಟಕ್ಕು ಕಳೆದ 3 ತಿಂಗಳು ನಿರಂತವಾಗಿ ಗಗನಕ್ಕೇರಿದ್ದ ಟೊಮೆಟೊ ಈಗ ಕೇಳುವವರೆ ದಿಕ್ಕಿಲ್ಲ. ಇತ್ತೀಚಿಗೆ ಟೊಮೆಟೊ ಬೆಲೆ ಇಡೀ ದೇಶದಲ್ಲೇ ಸದ್ದು ಮಾಡಿತ್ತು. ನಿರಂತರ ಬೆಲೆ ಏರಿಕೆಯಿಂದ ದಾಖಲೆ ಬರೆದಿದ್ದ ಟೊಮೆಟೊ ಈಗ ಅಷ್ಟೇ ವೇಗವಾಗಿ ಪಾತಾಳ ಸೇರಿದೆ. ಜುಲೈ ಕೊನೆಯಲ್ಲಿ 14 ಕೆಜಿ ಬಾಕ್ಸ್ ಟೊಮೆಟೊ 2700 ರೂಪಾಯಿ ದಾಖಲೆಯ ಬೆಲೆಗೆ ಮಾರಾಟ ಮಾಡಲಾಗಿತ್ತು. ಈಗ ಕೇವಲ 60 ರಿಂದ 200 ರೂಪಾಯಿಗೆ 14 ಕೆಜಿ ಬಾಕ್ಸ್ ಹರಾಜಾಗಿದೆ. ಅಂದರೆ ಪ್ರತಿ ಕೆಜಿಗೆ ಕೇವಲ 15 ರೂಪಾಯಿ ಆಸುಪಾಸು ಎನ್ನಬಹುದು. ಹೀಗೆ ಕರ್ನಾಟಕದಲ್ಲೂ ಟೊಮೆಟೊ ಬೆಲೆ ಭಾರಿ ಕುಸಿತ ಕಾಣುತ್ತಿದೆ.

ಉತ್ತರ ಭಾರತ ಮತ್ತು ಟೊಮೆಟೊ ಬೆಳೆಯದ ಪ್ರದೇಶದಲ್ಲಿ ಕಳೆದ ತಿಂಗಳಿಂದ ಟೊಮೆಟೊಗೆ ಬೇಡಿಕೆ ಕುಸಿದಿದೆ. ಬೇರೆ ರಾಜ್ಯದಿಂದಲು ಟೊಮೆಟೊ ಭಾರಿ ಪ್ರಮಾಣದಲ್ಲಿ ಮಾರುಕಟ್ಟೆ ಕಡೆಗೆ ಹೆಜ್ಜೆ ಹಾಕಿದೆ. ಇದರ ಜೊತೆಗೆ ವಾತಾವರಣ ಏರುಪೇರು ಕೂಡ ನಷ್ಟ ಮಾಡುತ್ತಿದೆ. ಇದರ ಪರಿಣಾಮ ಟೊಮೆಟೊ ಬೆಲೆ ಹಿಡಿತಕ್ಕೆ ಸಿಕ್ಕಿದೆ. ಆದರೆ ಕಷ್ಟಪಟ್ಟು ಟೊಮೆಟೊ ಬೆಳೆದ ರೈತನ ಕಣ್ಣಲ್ಲಿ ರಕ್ತ ಬರುವಂತಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲೂ ಕೆಂಪು ಸುಂದರಿಯ ಬೆಲೆ ಪಾತಾಳಕ್ಕೆ ಕುಸಿಯುವ ಭೀತಿ ಇದೆ.












Click it and Unblock the Notifications