ಸಾಯೋವರೆಗೂ RSS ವಿರೋಧಿಸುತ್ತೇನೆ; ಸಿಟಿ ರವಿಗೆ ಮಾನ ಮರ್ಯಾದೆ ಇಲ್ಲ : ಸಿದ್ದರಾಮಯ್ಯ ಆಕ್ರೋಶ
ನಾನು ಬದುಕಿರೋವರೆಗೂ ಆರ್ ಎಸ್ ಎಸ್ ವಿರೋಧಿಸುತ್ತೇನೆ. ಅಧಿಕಾರ ಇರಲಿ ಬಿಡಲಿ ನಾನು ಆರ್ ಎಸ್ ಎಸ್ ವಿರೋಧಿಸುತ್ತೇನೆಂದು ಸಿದ್ದರಾಮಯ್ಯ ಗುಡುಗಿದ್ದಾರೆ.
ಮೈಸೂರು, ಮಾರ್ಚ್7: ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜಕೀಯ ನಾಯಕರ ನಡುವೆ ವಾಕ್ಸಮರ ಜೋರಾಗುತ್ತಿದೆ. ಬಿಜೆಪಿ ನಾಯಕರು ಹಾಗೂ ಸಿದ್ದರಾಮಯ್ಯ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದ್ದು, ಸಿ ಟಿ ರವಿ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಸಿದ್ದರಾಮಯ್ಯ ಮಾತನಾಡಿ, ನನ್ನ ಕೊನೆಯ ಉಸಿರು ಇರುವವರೆಗೂ ಆರ್ ಎಸ್ ಎಸ್ ಅನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.
ಸಂವಿಧಾನವನ್ನು ಆರ್ ಎಸ್ ಎಸ್ ಮತ್ತು ಹಿಂದೂ ಮಹಾಸಭಾ ಮೊದಲಿಂದಲೂ ವಿರೋಧಿಸಿವೆ. ಬಿಜೆಪಿ ಸಂವಿಧಾನಕ್ಕೆ ವಿರುದ್ದ ಇರುವ ಪಕ್ಷ. ಸಂವಿಧಾನ ವಿರೋಧಿಸುವುದು ಎಂದರೆ ಅದು ಅಂಬೇಡ್ಕರ್ ವಿರೋಧಿಸಿದಂತೆ ಎಂದು ಹೇಳಿದರು.

ಹಿಂದೂ ಬೇರೆ ಹಿಂದುತ್ವ ಬೇರೆ. ನಾನು ಹಿಂದೂ, ಮನು ಸ್ಮೃತಿ ಆಧಾರದ ವ್ಯವಸ್ಥೆಯೇ ಹಿಂದುತ್ವ. ಈಗ ಬಿಜೆಪಿ ಅವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾ ಭಾಷಣ ಮಾಡುತ್ತಾರೆ. ಆದ್ರೆ, ಆರ್ ಎಸ್ ಎಸ್ ಆರೋಗ್ಯ ಸಮಾಜ ನಿರ್ಮಾಣದ ವಿರೋಧಿ ಸಂಘಟನೆಯಾಗಿದೆ.ಇದಕ್ಕಾಗಿ ನಾನು ಆರ್ ಎಸ್ ಎಸ್ ಅನ್ನು ವಿರೋಧಿಸುತ್ತೇನೆ ಅಂತ ಹೇಳಿದ್ರು. ಅಸಮಾನತೆ ಇದ್ದ ಕಾರಣ ಬಸವಣ್ಣ ಅವತ್ತು ಅನುಭವ ಮಂಟಪವನ್ನು ಹುಟ್ಟುಹಾಕಿದ. ಅವತ್ತಿನ ಅನುಭವ ಮಂಟಪವೇ ಇವತ್ತಿನ ಸಂಸತ್ ಎಂದು ಹೇಳಿದರು.

ಅವನ್ಯಾವನೋ ಸಿ ಟಿ ರವಿ ನನ್ನನ್ನು ಸಿದ್ದರಾಮುಲ್ಲಾ ಖಾನ್ ಅಂತ ಕರೀತಾನೆ. ನಾನು ಹಿಂದೂ, ನನ್ನ ಅಪ್ಪ ಅಮ್ಮ ಹಿಂದೂ, ನಾನು ಹಿಂದೂ ದೇವರನ್ನು ಪೂಜಿಸುತ್ತೇನೆ. ಆದರೂ ನನ್ನನ್ನು ಆ ಸಿ ಟಿ ರವಿ ಏನೋನೋ ಸಿದ್ದರಾಮುಲ್ಲಾ ಖಾನ್ ಅಂತಾ ಕರೀತಾನೆ. ಅವನಿಗೆ ಮಾನ ಮಾರ್ಯದೆ ಇದ್ಯಾ? ಶೂದ್ರರು ಅವನ ಭಾಷಣಕ್ಕೆ ಚಪ್ಪಾಳೆ ತಟ್ಟುತ್ತಾರೆ. ನಾನು ಬದುಕಿರೋವರೆಗೂ ಆರ್ ಎಸ್ ಎಸ್ ವಿರೋಧಿಸುತ್ತೇನೆ. ಅಧಿಕಾರ ಇರಲಿ ಬಿಡಲಿ ನಾನು ಆರ್ ಎಸ್ ಎಸ್ ವಿರೋಧಿಸುತ್ತೇನೆಂದು ಸಿದ್ದರಾಮಯ್ಯ ಗುಡುಗಿದ್ದಾರೆ.












Click it and Unblock the Notifications