ಸಿಹಿ ಸುದ್ದಿ: 3 ವಿದ್ಯುತ್ ಯೋಜನೆಗಳ ₹389 ಕೋಟಿ ಬಾಕಿ ಮೊತ್ತ ಮನ್ನಾ: ಸರ್ಕಾರ
ಬೆಂಗಳೂರು, ನವೆಂಬರ್ 22: ಕರ್ನಾಟಕ ರಾಜ್ಯ ಸರ್ಕಾರವು ಪ್ರಮುಖ ಮೂರು ವಿದ್ಯುತ್ ಯೋಜನೆಗಳ ಫಲಾನುಭವಿಗಳ ಕೋಟ್ಯಂತರ ರೂಪಾಯಿ (₹389 ಕೋಟಿ) ಬಾಕಿ ಮೊತ್ತವನ್ನು ಮನ್ನಾ ಮಾಡಲು ನಿರ್ಧರಿಸಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದರು.
ಬೆಂಗಳೂರಿನ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯದ ವಿದ್ಯುತ್ ಯೋಜನೆಗಳಾದ 'ಕುಟೀರ ಭಾಗ್ಯ', 'ಭಾಗ್ಯಜ್ಯೋತಿ' ಮತ್ತು 'ಅಮೃತ ಜ್ಯೋತಿ' ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ಅಥವಾ ಹೆಚ್ಚಿನ ಸಬ್ಸಿಡಿ ದರದಲ್ಲಿ ವಿದ್ಯುತ್ ಪಡೆಯುತ್ತಿದ್ದ ಫಲಾನುಭವಿಗಳಿಗೆ ₹389 ಕೋಟಿ ಮೊತ್ತದ ಬಾಕಿ ಮನ್ನಾ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಮೂರು ಪ್ರಮುಖ ಯೋಜನೆಗಳನ್ನು ನೂತನ 'ಗೃಹ ಜ್ಯೋತಿ' ಯೋಜನೆ ಜೊತೆಗೆ ವಿಲೀನ ಮಾಡಿಕೊಂಡಿದೆ. ವಸತಿ ವಿದ್ಯುತ್ ಸಂಪರ್ಕಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುತ್ತದೆ. ಇದರೊಂದಿಗೆ ಇದೀಗ ಬಾಕಿ ಬಿಲ್ ಅನ್ನು ಮನ್ನಾ ಮಾಡಲಿದೆ.
ಹೆಚ್ಚುವರಿ ವಿದ್ಯುತ್ ಪೂರೈಕೆ
ರಾಜ್ಯದಲ್ಲಿ ಈ ಹಿಂದೆ 'ಕುಟೀರ ಭಾಗ್ಯ' ಹಾಗೂ 'ಭಾಗ್ಯ ಜ್ಯೋತಿ' ಯೋಜನೆಯ ಫಲಾನುಭವಿಗಳು 40 ಹಾಗೂ 'ಅಮೃತ ಜ್ಯೋತಿ' ವಿದ್ಯುತ್ ಯೋಜನೆಯ ಫಲಾನುಭವಿಗಳು 75 ಯೂನಿಟ್ ಪಡೆಯುತ್ತಿದ್ದರು. 40 ಯೂನಿಟ್ ಪಡೆದವರಿಗೆ ಈಗ 50 ಯೂನಿಟ್ ಜೊತೆಗೆ 10 ಯೂನಿಟ್ ಮತ್ತು 75 ಯೂನಿಟ್ ಪಡೆಯುವವರಿಗೆ 75 ಯೂನಿಟ್ ಒದಗಿಸಲು ನಿರ್ಧರಿಸಿದ್ದೇವೆ. 10ರಷ್ಟು ಹೆಚ್ಚುವರಿಯಾಗಿ ವಿದ್ಯುತ್ ನೀಡಲಾಗುವುದು ಎಂದು ಸಚಿವರು ವಿವರಿಸಿದರು.
ವಿಲೀನಗೊಂಡ 'ಕುಟೀರ ಭಾಗ್ಯ', 'ಭಾಗ್ಯಜ್ಯೋತಿ' ಹಾಗೂ 'ಅಮೃತ ಜ್ಯೋತಿ' ಯೋಜನೆಗಳ ಫಲಾನುಭವಿಗಳ ₹389 ಕೋಟಿ ಭಾರಿ ಮೊತ್ತದ ಬಾಕಿ ಇತ್ತು. ಅದನ್ನು ಮನ್ನಾ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಇತ್ತೀಚೆಗೆ ಚರ್ಚಿಸಿದ್ದೇವೆ. ಈ ಕುರಿತು ಸರ್ಕಾರ ಒಪ್ಪಿದೆ ಎಂದು ಮಾಹಿತಿ ನೀಡಿದರು.

ಸೋಲಾರ್ ಸಬ್‌ಸ್ಟೇಷನ್‌ಗಾಗಿ ಟೆಂಡರ್
ಸೋಲಾರ್ ಉಪಸ್ಟೇಷನ್‌ಗಳಿಗೆ ರಾಜ್ಯ ಸರ್ಕಾರದಿಂದ ಟೆಂಡರ್ ಕರೆಯಲಾಗಿದೆ. 750 ಮೆಗಾವ್ಯಾಟ್ ಒದಗಿಸುವ ಏಳು ಬಿಡ್‌ದಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಆದಷ್ಟು ಬೇಗವೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಪ್ರತಿ ಯೂನಿಟ್‌ಗೆ ₹3.17 ದರವನ್ನು ನಿಗದಿಪಡಿಸಿದೆ. ತುಮಕೂರು ಜಿಲ್ಲೆಯ ಪಾವಗಡದ ಅನೇಕ ರೈತರು ಸೌರ ವಿದ್ಯುತ್ ಉತ್ಪಾದಿಸುವವರಿಗೆ 8,000 ಎಕರೆ ಭೂಮಿ ನೀಡಲು ಮುಂದೆ ಬಂದಿದ್ದಾರೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದರು.
ಬೇಸಿಗೆಯಲ್ಲಿ ಅಧಿಕ ವಿದ್ಯುತ್‌ಗೆ ಬೇಡಿಕೆ
ರಾಜ್ಯದಲ್ಲಿ ಬೇಸಿಗೆಯಲ್ಲಿ 16,000 ಮೆಗಾ ವ್ಯಾಟ್ ವರೆಗೆ ವಿದ್ಯುತ್ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಇದು ಹಾಲಿ ಬಳಕೆಯಾಗುತ್ತಿರುವ ವಿದ್ಯುತ್ ಗಿಂತಲೂ ಅಧಿಕ ಪ್ರಮಾಣ ಎಂದ ಸಚಿವರು, ಬೇಡಿಕೆಯಷ್ಟು ವಿದ್ಯುತ್ ಪೂರೈಕೆ ಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಹೆಚ್ಚು ವಿದ್ಯುತ್ ಉತ್ಪಾದಿಸುವ ಜೊತೆಗೆ ಪಂಜಾಬ್ ಸೇರಿದಂತೆ ಬೇರೆಡೆಯಿಂದ ವಿದ್ಯುತ್ ಪಡೆಯುತ್ತಿದ್ದೇವೆ. ರೈತರಿಗೆ ನಿರಂತರವಾಗಿ ಏಳು ಗಂಟೆ ವಿದ್ಯುತ್ ನೀಡಲಾಗುವುದು ಎಂದು ಇಂಧನ ಸಚಿವರು ಭರವಸೆ ನೀಡಿದರು.












Click it and Unblock the Notifications