ಹಿಂಗಾರು ಆರಂಭ: ರಾಜ್ಯದಾದ್ಯಂತ ಇನ್ನೂ ಮೂರು ದಿನ ಭಾರಿ ಮಳೆ
ಬೆಂಗಳೂರು, ಅಕ್ಟೋಬರ್ 21: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ ಹಾಗೂ ಹಿಂಗಾರು ಆರಂಭವಾಗಿರುವ ಕಾರಣ ರಾಜ್ಯದಾದ್ಯಂತ ಇನ್ನೂ ಮೂರು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಜಾವೂರದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ದಂಪತಿಯನ್ನ ರಕ್ಷಣೆ ಮಾಡಲಾಗಿದೆ. ತುಪ್ಪರಿಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ಪ್ರಕಾಶ್ ಮತ್ತು ಸವಿತಾರರನ್ನ ಹುಬ್ಬಳ್ಳಿಯಿಂದ ಕರೆಸಿದ್ದ ಬೋಟ್ ಮೂಲಕ ರಕ್ಷಣೆ ಮಾಡಲಾಯಿತು. ಸ್ಥಳಕ್ಕೆ ನವಲಗುಂದ ತಹಶೀಲ್ದಾರ್ ನವೀನ್ ಹುಲ್ಲೂರು ಭೇಟಿ ನೀಡಿದ್ದರು.
ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ ಗೋಪನಕೊಪ್ಪದಲ್ಲಿ ಸಣ್ಣಗೌಡಪ್ಪ ಶಿರೂರ, ಬಸವರಾಜ್ ಮಾರ್ಟಿನ್ ಮತ್ತು ಈರಪ್ಪ ಕಂಬಾರ ಅನ್ನೋರಿಗೆ ಸೇರಿದ ಮನೆಗಳು ಕುಸಿದಿವೆ.
ಈಶ್ವರ ನಗರದಲ್ಲಿ ಮನೆಗಳು ಮತ್ತು ಅಕ್ಷಯ ಕಾಲನಿಯ ಅಕ್ಷಯ ಕ್ಲಾಸಿಕ್ ಅಪಾರ್ಟ್ ಮೆಂಟ್ ಮತ್ತು ವಿಂಡ್ಸನ್ ಮ್ಯಾನರ್ ಅಪಾರ್ಟ್ ಮೆಂಟ್‌ಗೆ ನೀರು ನುಗ್ಗಿದೆ.
ಇನ್ನೂ ಬೆಂಗಳೂರಲ್ಲೂ ಸಾಧಾರಣ ಮಳೆಯಾಗಿದೆ. ಮುಂದಿನ 48 ಗಂಟೆಗಳಲ್ಲಿ ಮಳೆ ಇನ್ನಷ್ಟು ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಉತ್ತರ ಕರ್ನಾಟಕದ ಧಾರಾಕಾರ ಮಳೆ
ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ ಬೆನ್ನಲ್ಲೇ ಉತ್ತರ ಕರ್ನಾಟಕ, ಕರಾವಳಿ, ಕೊಡಗು, ಮಲೆನಾಡಿನ ಅನೇಕ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪ್ರಭಾವದಿಂದ ಮುಂದಿನ 48 ಗಂಟೆಗಳ ಕಾಲ ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಲ್ಲಿ ಇನ್ನೂ ಎರಡು ದಿನ ಮಳೆಯಾಗಲಿದೆ ಎನ್ನಲಾಗುತ್ತಿದೆ.

ಉತ್ತರ ಕರ್ನಾಟಕದಲ್ಲಿ ಹೆಚ್ಚು ಮಳೆ
ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಸೃಷ್ಟಿ ಆಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಒಂದೇ ಸಮನೆ ಮಳೆಯಾಗುತ್ತಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಭಾಗದಲ್ಲೂ ಧಾರಾಕಾರ ಮಳೆ ಆಗಿದ್ದು, ಆಡಿ ಗ್ರಾಮದಲ್ಲಿ ವಾಹನಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಊರಿಗೆ ಊರೇ ನೀರಲ್ಲಿ ಮುಳುಗಿತ್ತು. ಚಿಕ್ಕೋಡಿ, ಹುಕ್ಕೇರಿ, ರಾಯಭಾಗದಲ್ಲಿ ರಾತ್ರಿಯಿಡೀ ಮಳೆ ಆಗಿದೆ.

ಬೆಳಗಾವಿಯಲ್ಲಿ ಸಾಕಷ್ಟು ಮನೆಗಳು ಜಲಾವೃತ
ಬೆಳಗಾವಿ ಜಿಲ್ಲೆಯ ಬೂತರಾಮನಟ್ಟಿಯಲ್ಲೂ ಮನೆಗಳು ಜಲಾವೃತಗೊಂಡಿದ್ದವು. ಕಿತ್ತೂರು ಮತ್ತು ಬೈಲಹೊಂಗಲ, ರಾಮದುರ್ಗಾ ತಾಲೂಕಲ್ಲಿ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಸವದತ್ತಿಯಲ್ಲಿರುವ ನವಿಲುತೀರ್ಥ ಡ್ಯಾಂನಿಂದ 20 ಸಾವಿರ ಕ್ಯೂಸೆಕ್ ನೀರನ್ನ ಹೊರಬಿಡಲಾಗುತ್ತಿದೆ. ರಾಮದುರ್ಗ ತಾಲೂಕಿನ ಹೀರೆಹಂಪಿಹೊಳಿ, ಚಿಕ್ಕಹಂಪಿಹೊಳಿ, ಅವರಾದಿಯಲ್ಲಿ ಪ್ರವಾಹ ಮುನ್ನೆಚ್ಚರಿಕೆ ಹೊರಡಿಸಲಾಗಿದೆ. ಖಾನಾಪೂರ ತಾಲೂಕಿನ ಕಸಮಳಗಿಯಲ್ಲಿ ಮಳೆಗೆ ಮನೆ ಗೋಡೆ ಕುಸಿದು 55 ವರ್ಷದ ಲಿಯಾಕತ್ ಮಕನದಾರ ಎನ್ನುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಶಿವಾನಂದ್ ಭೇಟಿ ನೀಡಿದರು












Click it and Unblock the Notifications