ಪರಸ್ಪರ ಸಮ್ಮತಿಯಿದ್ದರೂ ವಿಚ್ಛೇದನಕ್ಕೆ 18 ತಿಂಗಳು ಕಾಯಬೇಕು
ಬೆಂಗಳೂರು, ಡಿಸೆಂಬರ್ 07: ಹಿಂದೂ ವಿವಾಹ ಕಾಯ್ದೆಯಡಿ ಪರಸ್ಪರ ಸಮ್ಮತಿಯ ಮೇರೆಗೆ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ಕೂಡ ವಿಚಾರಣಾ ನ್ಯಾಯಾಲಯ ಅರ್ಜಿಯನ್ನು ಏಕಾಏಕಿ ವಜಾಗೊಳಿಸದೆ ನಿಯಮದಂತೆ 18 ತಿಂಗಳು ಕಾದು ನಂತರ ಆದೇಶ ಹೊರಡಿಸಬೇಕಾಗುತ್ತದೆ.
ಕರ್ನಾಟಕ ಹೈಕೋರ್ಟ್ ಹೀಗೆಂದು ಆದೇಶಿಸಿರುವುದಲ್ಲದೆ, ದಂಪತಿ ವಿಚ್ಚೇದನ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ವಿಚಾರಣಾ ಕೋರ್ಟ್‌ನ ಆದೇಶ ರದ್ದು ಮಾಡಿ ನ್ಯಾಯಮೂರ್ತಿ ಕೆ. ಎಸ್. ಮುದ್ಗಲ್ ಮತ್ತು ನ್ಯಾಯಮೂರ್ತಿ ಕೆ. ವಿ. ಅರವಿಂದ್ ಅವರಿದ್ದ ವಿಭಾಗೀಯ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ದಂಪತಿ 2020ರ ನವೆಂಬರ್ 27ರಂದು ಮದುವೆಯಾಗಿದ್ದರು ಮತ್ತು ಅವರು 2021ರ ಸೆಪ್ಟಂಬರ್‌ನಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಅವರಿಬ್ಬರೂ ವಿವಾಹ ಬಂಧನ ತೊಡೆದುಕೊಳ್ಳಲು ಹಿಂದೂ ವಿವಾಹ ಕಾಯಿದೆ ಸೆಕ್ಷನ್ 13ಬಿ ಅನ್ವಯ, ತಮ್ಮಿಬ್ಬರ ನಡುವಿನ ಸಂಬಂಧ ಮುರಿದುಬಿದ್ದಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ವಿವಾಹ ವಿಚ್ಚೇದನ ಪಡೆದುಕೊಳ್ಳುವುದಾಗಿ ಅರ್ಜಿ ಸಲ್ಲಿಸಿದ್ದರು. ದಂಪತಿ ಪರಸ್ಪರ ಒಪ್ಪಿಗೆ ಮೇಲೆ ವಿಚ್ಛೇಧನ ಪಡೆಯುವುದಾಗಿ ಹೇಳಿದ್ದರು. ಆದರೆ ನ್ಯಾಯಾಲಯ ಮತ್ತೆ ಒಂದುಗೂಡುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ಮಾಡಿ ಎಂದು ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ವರ್ಗಾಯಿಸಿದ್ದರು.

ಮಧ್ಯಸ್ಥಿಕೆದಾರರು ಇಬ್ಬರ ನಡುವೆ ಸಹಮತ ಮೂಡಿಸಿ ಮತ್ತೆ ಒಗ್ಗೂಡಿಸಲು ಪ್ರಯತ್ನಿಸಿದರಾದರೂ ಅದು ಫಲ ನೀಡಲಿಲ್ಲ, ಇಬ್ಬರೂ ಮಧ್ಯಸ್ಥಿಗೆ ಗೈರು ಹಾಜರಾಗಿದ್ದರು. ಹಾಗಾಗಿ ಮಧ್ಯಸ್ಥಿಕೆ ಕೇಂದ್ರ ವರದಿಯನ್ನು ಸಲ್ಲಿಸಿತ್ತು. ಅದನ್ನು ಆಧರಿಸಿ ವಿಚಾರಣಾ ನ್ಯಾಯಾಲಯ, ದಂಪತಿಗೆ ಈ ಪ್ರಕರಣವನ್ನು ಮುನ್ನಡೆಸಲು ಆಸಕ್ತಿ ಇಲ್ಲಎಂದು ದಾಖಲಿಸಿ ಕೇಸ್ ವಜಾ ಮಾಡಿತ್ತು. ಅದನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಹೈಕೋರ್ಟ್ ಆದೇಶವೇನು?; ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ ದಂಪತಿಗೆ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರಕ್ಕ ತೆರಳುವಂತೆ ಸೂಚಿಸಿದೆ. ಜತೆಗೆ ಮಧ್ಯಸ್ಥಿಕೆ ಕೇಂದ್ರ ವಿಚಾರಣಾ ನ್ಯಾಯಾಲಯಕ್ಕೆ ಮಧ್ಯಸ್ಥಿಕೆ ವರದಿಯನ್ನು ಸಲ್ಲಿಸಬೇಕು. ಆ ವರದಿ ಆಧರಿಸಿ ವಿಚಾರಣಾ ನ್ಯಾಯಾಲಯ ಕಾನೂನು ಪ್ರಕಾರ ವಿಚ್ಛೇದನ ಅರ್ಜಿಯನ್ನು ಇತ್ಯರ್ಥಪಡಿಸಬಹುದು ಎಂದು ಆದೇಶಿಸಿದೆ.
ಪಕ್ಷಗಾರರ ಮನವಿ ಇಲ್ಲದೆ ವಿಚಾರಣಾ ನ್ಯಾಯಾಲಯ ತನ್ನಷ್ಟಕ್ಕೆ ತಾನೇ ಅರ್ಜಿಯನ್ನು ವಜಾಗೊಳಿಸಬಾರದು ಎಂದೂ ಸಹ ನ್ಯಾಯಪೀಠ ಹೇಳಿದೆ. ನ್ಯಾಯಪೀಠ "ಹಿಂದೂ ವಿವಾಹ ಕಾಯಿದೆ ಸೆಕ್ಷನ್ 13ಬಿ ಅನ್ವಯ, ದಂಪತಿಗಳು ಅರ್ಜಿ ಸಲ್ಲಿಸುವ ಮುನ್ನ ಒಂದು ವರ್ಷ ಪ್ರತ್ಯೇಕವಾಗಿ ವಾಸವಿರಬೇಕು. ಪಕ್ಷಗಾರರು ಜೊತೆಯಲ್ಲಿ ವಾಸ ಮಾಡುವಂತಿಲ್ಲ ಮತ್ತು ಇಬ್ಬರೂ ಪರಸ್ಪರ ವಿವಾಹ ಸಂಬಂಧ ಮುರಿದುಕೊಳ್ಳಲು ಒಪ್ಪಿರಬೇಕು ಹಾಗೂ ಅರ್ಜಿ ಸಲ್ಲಿಸಿದ ಆರು ತಿಂಗಳವರೆಗೆ ಅವರು ಆ ಅರ್ಜಿಯನ್ನು ನ್ಯಾಯಾಲಯ ಮುಂದೆ ಮಂಡಿಸುವಂತಿಲ್ಲ ಎಂದು ಆದೇಶಿಸಿದೆ.
ಆದರೆ, ಈ ಪ್ರಕರಣದಲ್ಲಿಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಕೇವಲ 9 ತಿಂಗಳಿಗೆ ವಜಾಗೊಳಿಸಿದೆ. ನಿಗದಿಯಂತೆ ಪ್ರಕರಣದ ಇತ್ಯರ್ಥಕ್ಕೆ 18 ತಿಂಗಳು ಕಾಲಾವಕಾಶ ಇದೆ, ಆದರೆ ಅದಕ್ಕೂ ಮುನ್ನ ವಿಚಾರಣಾ ನ್ಯಾಯಾಲಯ ಸೆಕ್ಷನ್ 13 ಬಿ(2) ಅನ್ನು ಪಾಲನೆ ಮಾಡಿಲ್ಲ. ಹಾಗಾಗಿ ವಿಚಾರಣಾ ನ್ಯಾಯಾಲಯ ತಪ್ಪೆಸಗಿದೆ ಎಂದು ನ್ಯಾಯಪೀಠ ಹೇಳಿದೆ.












Click it and Unblock the Notifications