ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ತಲೆನೋವು: 'ತಿಗಳ ಕ್ಷತ್ರಿಯರ ನಡೆ ಕಾಂಗ್ರೆಸ್ ಕಡೆ' ಸಮಾವೇಶ, ವಿವರ
ಬೆಂಗಳೂರು, ಮಾರ್ಚ್ 12: ಕರ್ನಾಟಕದಲ್ಲಿ ಚುನಾವಣೆ ಕಾವು ಪಡೆಯುತ್ತಿದ್ದಂತೆ ವರ್ಷಗಳಿಂದ ಮನವಿ ಮಾಡಿದ್ದ ಸಮುದಾಯಗಳು ಮತ್ತೆ ತಮ್ಮ ಬೇಡಿಕೆ ಹಿಡಿದು ರಸ್ತೆಗಿಳಿಯುವುದು ಮಾಮೂಲು. ಅದೇ ರೀತಿ ತಿಗಳ ಕ್ಷತ್ರಿಯ ಸಮುದಾಯ ಬೃಹತ್ ಸಮಾವೇಶವೊಂದನ್ನು ನಡೆಸುವುದಾಗಿ ತಿಳಿಸಿದೆ. ಇದು ಆಡಳಿತಾರೂಢ ಬಿಜೆಪಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ರಾಜ್ಯ ಬಿಜೆಪಿ ಸರ್ಕಾರ ಎಲ್ಲ ಜಾತಿ, ಸಮುದಾಯದವರ ಏಳಿಗೆಗಾಗಿ ಅಭಿವೃದ್ಧಿ ನಿಗಮ ಮಂಡಳಿಗಳನ್ನು ಸ್ಥಾಪನೆ ಮಾಡಿದೆ. ಆದರೆ ರಾಜ್ಯದ ಬೃಹತ್ ಸಮುದಾಯಗಳಲ್ಲಿ ಗುರುತಿಸಿಕೊಳ್ಳುವ ಸುಮಾರು 40 ಲಕ್ಷ ಜನಸಂಖ್ಯೆ ಇರುವ ಹೊಂದಿರುವ ತಿಗಳ ಕ್ಷತ್ರಿಯ ಸಮುದಾಯವನ್ನು ನಿರ್ಲಕ್ಷಿಸಿದೆ. ಈ ಸಂಬಂಧ ಸಮುದಾಯದ ಮುಖಂಡರ ಅಸಮಾಧಾನ ಹೊರ ಹಾಕಿದ್ದಾರೆ.

ಅಷ್ಟೇ ಅಲ್ಲದೇ ಇದೇ ಮಾರ್ಚ್ 14ರಂದು 'ತಿಗಳ ಕ್ಷತ್ರಿಯರ ನಡೆ ಕಾಂಗ್ರೆಸ್ ಕಡೆ' ಜಾಗೃತಿ ಸಮಾವೇಶವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವುದಾಗಿ ಹೇಳಿರುವ ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯದ ಎಲ್ಲಾ ಜಾತಿಗಳು ಹಾಗೂ ಸಮುದಾಯಗಳ ಅಭಿವೃದ್ಧಿಗೆ ಕ್ರಮ ವಹಿಸಿದೆ. ಆದರೆ ತಿಗಳ ಕ್ಷತಿಯ ಸಮುದಾಯಕ್ಕೆ ನಿಗಮ ಮಂಡಳಿಯನ್ನು ಸ್ಥಾಪನೆಗೆ ಮುಂದಾಗಿಲ್ಲ ಎಂದರು.
ಪೂರ್ಣಿಮಾ ಪ್ಯಾಲೇಸ್ ನಲ್ಲಿ ಸಮಾವೇಶ, ಬಿಜೆಪಿಗೆ ಪಾಠ
ಸರ್ಕಾರ ತಾನು ಸ್ಥಾಪಿಸಿರುವ ವಿವಿಧ ಸಮುದಾಯಗಳ ನಿಗಮ ಮಂಡಳಿಗಳಿಗೆ ಅಗತ್ಯ ಹಣ ನೀಡುತ್ತಿಲ್ಲ.ಸಮರ್ಪಕವಾಗಿ ಹಣವನ್ನು ಸಂದಾಯ ಮಾಡುತ್ತಿಲ್ಲ. ಹಾಲಿ ನಿಗಮ ಮಂಡಳಿಯಲ್ಲಿ ಕೆಲಸಗಾರರಿಗೂ ಸರಿಯಾಗಿ ವೇತನ ನೀಡುತ್ತಿಲ್ಲ. ಬಜೆಟ್ ಮಂಡನೆ ವೇಳೆ ಸಿಎಂ ಬೊಮ್ಮಾಯಿಯವರು ತಿಗಳ ಸಮುದಾಯದ ಅಭಿವೃದ್ಧಿಗಾಗಿ ಒಟ್ಟು 400 ಕೋಟಿ ರೂಪಾಯಿ ಇಟ್ಟಿದೇವೆ ಎಂದಿದ್ದರು. ಆದರೆ ಒಂದೂ ರೂಪಾಯಿ ಸಹ ನಮಗಾಗಿ ಖರ್ಚು ಮಾಡಿಲ್ಲ ಎಂದು ಅವರು ದೂರಿದರು.

ಇದೇ ಮಾರ್ಚ್ 14ರಂದು ಮಂಗಳವಾರ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್ ನಲ್ಲಿ 'ತಿಗಳ ಕ್ಷತ್ರಿಯರ ನಡೆ ಕಾಂಗ್ರೆಸ್ ಕಡೆ' ಜಾಗೃತಿ ಸಭೆ ಜರುಗಲಿದೆ. ಈ ಜಾಗೃತಿ ಸಮಾವೇಶಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸಹ ಆಗಮಿಸಲಿದ್ದಾರೆ. ರಾಜ್ಯದಲ್ಲಿರುವ ತಿಗಳ ಕ್ಷತಿಯ ಸಮುದಾಯ ಕಡೆಗಣಿಸಿದ್ದ ಬಿಜೆಪಿಗೆ ಮುಂಬರಲಿರುವ ಚುನಾವಣೆಯಲ್ಲಿ ಸೂಕ್ತ ಪಾಠ ಕಲಿಸಲು ಈ ಮೂಲಕ ಸಮುದಾಯ ನಿರ್ಧರಿಸಿದೆ ಎಂದು ಅವರು ವಿವರಿಸಿದರು.












Click it and Unblock the Notifications