ನವೆಂಬರ್ 15 ರೊಳಗೆ ಸಿಎಂ ಬದಲಾವಣೆ: ಭವಿಷ್ಯ ನುಡಿದ ಬಿಜೆಪಿ ನಾಯಕ
ಹಾಸನ, ಫೆಬ್ರವರಿ 15: ರಾಜ್ಯ ಕಾಂಗ್ರೆಸ್ ಅಸಮಾಧಾನ ಹೆಚ್ಚಾಗಿದೆ. ಬರುವ ನವೆಂಬರ್ 15-16ರೊಳಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವುದು ನಿಶ್ಚಿತವಾಗಿದ್ದು, ನವೆಂಬರ್ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸಿಡಿಯಲಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನವೆಂಬರ್ 15-16 ರೊಳಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವುದು ಖಚಿತ. ಸಿದ್ದರಾಮಯ್ಯ ಬದಲಾವಣೆಯ ನಂತರ ಕಾಂಗ್ರೆಸ್‌ನಲ್ಲಿ ಭಿನ್ನಮತ ಉಲ್ಬಣಿಸಲಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ನನಗೆ ಖಚಿತ ಮಾಹಿತಿ ಇದೆ. ಆ ಬಳಿಕ ಕಾಂಗ್ರೆಸ್‌ನಲ್ಲಿ ಉಂಟಾಗುವ ಜ್ವಾಲಾಮುಖಿ ನಂದಿಸಲು ಈಗಲೇ ಅಗ್ನಿಶಾಮಕ ವಾಹನಗಳನ್ನು ಬುಕ್ ಮಾಡಿಕೊಳ್ಳಿ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಈಗಲೇ ಸಚಿವರು ಸಿದ್ದರಾಮಯ್ಯ ಬಣ, ಡಿ.ಕೆ.ಶಿವಕುಮಾರ್ ಬಣವಾಗಿ ಇಬ್ಭಾಗವಾಗಿದ್ದಾರೆ. ಡಿ.ಕೆ.ಶಿವಕುಮಾರ್ ಒಂದು ದಾರಿ ಹಿಡಿದರೆ ಸಿದ್ದರಾಮಯ್ಯ ಅವರ ಬಣ ಇನ್ನೊಂದು ದಾರಿ ಹಿಡಿಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದರಿದ್ರ ಸರ್ಕಾರ. ಭ್ರಷ್ಟಾಚಾರ, ಆಡಳಿತ ವೈಫಲ್ಯ ಮತ್ತು ಅಭಿವೃದ್ಧಿ ಅಭಾವ ಎದ್ದು ಕಾಣುತ್ತಿದೆ. ಮೈಕ್ರೋ ಫೈನಾನ್ಸ್ ಸಮಸ್ಯೆ, ರೈತರ ಆತ್ಮಹತ್ಯೆ, ಪೊಲೀಸರ ಮೇಲೆ ಹಲ್ಲೆ ಇವೆಲ್ಲವೂ ಆಡಳಿತದ ಮೇಲೆ ಸರ್ಕಾರದ ಹಿಡಿತ ತಪ್ಪಿರುವುದನ್ನು ಸ್ಪಷ್ಟಪಡಿಸುತ್ತವೆ ಎಂದು ಹೇಳಿದರು.
ಇನ್ನೂ ನೌಕರರಿಗೆ ಸಂಬಳದ ಕುರಿತು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಮಾತನಾಡಿ, ರಾಜ್ಯ ಸರ್ಕಾರ ಸಂಪೂರ್ಣ ಪಾಪರ್ ಆಗಿದೆ. ನೌಕರರಿಗೆ ಸಂಬಳ ಕೊಡಲೂ ಸಹ ಹಣವಿಲ್ಲ. ಹೂಡಿಕೆದಾರರು ರಾಜ್ಯದಿಂದ ಹೊರಟು ಹೋಗುತ್ತಿದ್ದಾರೆ. ಬೆಂಗಳೂರಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ
ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದೊಂದಿಗೆ ಸಕಲೇಶಪುರ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಶಾಖಾ ಮಠಗಳ ಸ್ವಾಮೀಜಿಗಳು, ವಿವಿಧ ಮಠಗಳ ಸ್ವಾಮೀಜಿಗಳು, ಶಾಸಕರುಗಳು, ಮಾಜಿ ಶಾಸಕರು, ಒಕ್ಕಲಿಗರ ಸಂಘದ ಅಧ್ಯಕ್ಷರು, ನಿರ್ದೇಶಕರುಗಳು, ಸ್ಥಳೀಯ ಮುಖಂಡರು ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.












Click it and Unblock the Notifications