Siddaramaiah: ಗ್ಯಾರಂಟಿ ಯೋಜನೆಯಿಂದ ಹಣದ ಕೊರತೆ: ಸದನದಲ್ಲಿ ಸಿದ್ದರಾಮಯ್ಯ ಉತ್ತರ
ಬೆಳಗಾವಿ, ಡಿಸೆಂಬರ್ 12: ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿಲ್ಲ. ಹಣದ ಕೊರತೆಯಾಗಿಲ್ಲ, ರಾಜ್ಯದಲ್ಲಿ 2023-24 ರಲ್ಲಿ ಅಭಿವೃದ್ಧಿ ವೆಚ್ಚಗಳಿಗಾಗಿ 2,14,292 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು(ಗುರುವಾರ) ವಿಧಾನ ಪರಿಷತ್ತಿನಲ್ಲಿ ಸದಸ್ಯ ಕೆ. ಎ. ತಿಪ್ಪೇಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಸದ್ರಿ ಯೋಜನೆಗಳಿಗೆ ಆಯವ್ಯಯ ದಲ್ಲಿ 52,009 ಕೋಟಿ ರೂ ಗಳನ್ನು ಒದಗಿಸಿದೆ. ರಾಜ್ಯ ಸರ್ಕಾರವು 2023-24 ರಲ್ಲಿ 90,280 ಕೋಟಿ ರೂ ಗಳನ್ನು ಸಾಲ ಪಡೆದಿದ್ದು, ರಾಜ್ಯದ ವಿತ್ತೀಯ ಕೊರತೆ 2.6% ಇದ್ದು, ರಾಜ್ಯ ಸರ್ಕಾರವು ಪಡೆದ ಒಟ್ಟು ಸಾಲ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಮಾನದಂಡ ಮತ್ತು ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಸಾಲಮಿತಿಗೆ ಒಳಪಟ್ಟಿದೆ ಎಂದರು.

ರಾಜ್ಯ ಸರ್ಕಾರವು ರಾಜಸ್ವ ಹಾಗು ಬಂಡವಾಳ ಸ್ವೀಕೃತಿಗಳಿಂದ ಮತ್ತು ಕೇಂದ್ರ ಸರ್ಕಾರ ನಿಗದಿಪಡಿಸುವ ಮಿತಿಯೊಳಗೆ ಸಾಲವನ್ನು ಪಡೆಯುವ ಮೂಲಕ ಆಯವ್ಯಯದಲ್ಲಿ ಅಂದಾಜಿಸಿರುವ ವೆಚ್ಚವನ್ನು ಭರಿಸುತ್ತದೆ. ಈ ಸ್ವೀಕೃತಿಗಳನ್ನು ಮೀರಿ ಈವರೆಗೂ ಯಾವುದೇ ವೆಚ್ಚದ ಹೊರೆ ರಾಜ್ಯ ಸರ್ಕಾರಕ್ಕೆ ಉಂಟಾಗಿರುವುದಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅಭಿವೃದ್ಧಿ ಕುಂಠಿತವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪ ಸುಳ್ಳು ಹಾಗೂ ಸತ್ಯಕ್ಕೆ ದೂರವಾಗಿದ್ದು ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇನ್ನೂ ಕಲ್ಯಾಣ ಕರ್ನಾಟಕ ಭಾಗದ 97 ಪಿಡಿಓ ಹುದ್ದೆಗಳ ನೇಮಕಾತಿಗಾಗಿ ಸಿಂಧನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪರೀಕ್ಷೆಯ ವೇಳೆ ಪ್ರಶ್ನೆಪತ್ರಿಕೆ ವಿತರಿಸಲು ಅರ್ಧಗಂಟೆ ತಡವಾಗಿರುವ ಕುರಿತು ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆ ಕುರಿತಂತೆ ಸಮಗ್ರ ತನಿಖೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗವು 3 ಸದಸ್ಯರ ಉಪ ಸಮಿತಿಯನ್ನು ರಚಿಸಿದ್ದು, ಸಮಿತಿ ಸಲ್ಲಿಸುವ ಅಂತಿಮ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಸದಸ್ಯ ಶಶಿಲ್ ನಮೋಶಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದರು. ಕಲ್ಯಾಣ ಕರ್ನಾಟಕ ಭಾಗದ 97 ಪಿಡಿಒ ಹುದ್ದೆಗಳ ಪರೀಕ್ಷೆಯನ್ನು ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದು, ಈ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿಲ್ಲ ಮತ್ತು ಪ್ರಶ್ನೆಪತ್ರಿಕೆ ವಿತರಿಸಲು ವಿಳಂಬವಾಗಿಲ್ಲ. ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಈಗಾಗಲೇ ಆಯೋಗದಲ್ಲಿ ಉಪ ಸಮಿತಿಯನ್ನು ರಚಿಸಲಾಗಿದ್ದು, ವರದಿ ಸ್ವೀಕೃತವಾದ ನಂತರ ಪರಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಯಾವುದೇ ಸರ್ಕಾರ ತನ್ನ ಖರ್ಚುಗಳನ್ನು ಮಾಡಬೇಕಾದರೆ ಸಾಲವನ್ನು ಮಾಡಬೇಕಾಗುತ್ತದೆ. ನಮ್ಮ ಇತಿಮಿತಿಗಳನ್ನು ಪರಿಶೀಲಿಸಿ ಸಾಲ ಮಾಡಲಾಗುತ್ತದೆ. ಒಟ್ಟು ಸಾಲ ಶೇ.25 ವರೆಗೂ ಮೀರಬಾರದು ಎಂಬ ಮಾನದಂಡಗಳಿದ್ದು, ನಮ್ಮ ಸರ್ಕಾರದ ಸಾಲ ಮಿತಿಯ ಒಳಗಡೆ ಇದೆ. ರಾಜ್ಯ ಸರ್ಕಾರ 1ಲಕ್ಷದ 4 ಸಾವಿರ ಕೋಟಿ ರೂಗಳ ಸಾಲವನ್ನು ಮಾಡಲಾಗಿದ್ದು,ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮ ರಾಜ್ಯದ ಸಾಲ ಕಡಿಮೆ ಇದೆ. ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 52000 ಕೋಟಿ ರೂ.ಗಳನ್ನು ನೀಡಲಾಗಿದೆ. ಉಳಿದ ಹಣವನ್ನು ಅಭಿವೃದ್ಧಿಗೆ ನೀಡಲಾಗುತ್ತಿದೆ. ವಿರೋಧ ಪಕ್ಷದವರು ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾದದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದರು.
ಎಸ್ ಸಿ ಪಿ/ಟಿಎಸ್ ಪಿ ಅನುದಾನ
ಎಸ್ ಸಿ ಪಿ/ಟಿಎಸ್ ಪಿಗಳಿಗೆ ಬಳಸಲಾಗಿರುವ ಹಣ 2017-18ನೇ ಸಾಲಿನಲ್ಲಿ 36 ಸಾವಿರ ಕೋಟಿ ರೂ.ಖರ್ಚು ಮಾಡಲಾಗಿದೆ. ಈ ವರ್ಷ 39, 272 ಕೋಟಿ ರೂ.ಗಳ ಅನುದಾನ ಇಡಲಾಗಿದೆ. ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಮಾತ್ರ ಎಸ್ ಸಿ ಪಿ/ಟಿ ಎಸ್ ಪಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯಗಳಲ್ಲೂ ಈ ಕಾಯ್ದೆ ಏಕೆ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿದ ಸಿಎಂ, ಕೇಂದ್ರ ಸರ್ಕಾರ ಏಕೆ ಈ ಕಾಯ್ದೆ ಮಾಡಿಲ್ಲ ಎಂದು ಮರು ಪ್ರಶ್ನಿಸಿದರು.












Click it and Unblock the Notifications