ಡಿಕೆಶಿ ಅಕ್ರಮ ಆಸ್ತಿ ಕೇಸ್: ಸುಪ್ರೀಂಕೋರ್ಟ್‌ನಲ್ಲಿ ಇಂದು ವಿಚಾರಣೆ ಏನಾಯ್ತು?
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಡಿ.ಕೆ.ಶಿವಕುಮಾರ್‌ಗೆ ನೋಟಿಸ್ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಯತ್ನಾಳ್ ಅವರು ಡಿಕೆಶಿ ವಿರುದ್ಧ ಆದಾಯಕ್ಕೂ ಮೀರಿ ಆಸ್ತಿ ಗಳಿಸಿರುವ ಆರೋಪ ಮಾಡಿದ್ದರು. ಇದನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ಕೇಸ್ ಸಂಬಂಧ ಕರ್ನಾಟಕ ಸರ್ಕಾರ, ಲೋಕಾಯುಕ್ತ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡುವ ಮೂಲಕ ವಿಚಾರಣೆಯನ್ನು ನಾಲ್ಕು ವಾರಗಳವರೆಗೆ ಮುಂದೂಡಿತು.

ಅಕ್ರಮ ಆಸ್ತಿ ಗಳಿಕೆ ಸಂಬಂಧ ತಮ್ಮ ಮೇಲಿದ್ದ ಸಿಬಿಐ ಕೇಸ್ ವಾಪಸ್ ಪಡೆಯುವ ಕುರಿತಾಗಿ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿದ್ದ ಶಾಸಕ ಯತ್ನಾಳ್ ಅವರು ಈ ಹಿಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಈ ಅರ್ಜಿಯನ್ನು ಕಳೆದ ಆಗಸ್ಟ್‌ನಲ್ಲಿ ಪುರಸ್ಕರಿಸಲಿಲ್ಲ.
ಯತ್ನಾಳ್ ಅವರ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ್ದಲ್ಲದೆ, ರಾಜ್ಯ ಸರ್ಕಾರ ಮತ್ತು ಸಿಬಿಐ ನಡುವಿನ ಕೇಸ್ ಅನ್ನು ಸುಪ್ರೀಂಕೋರ್ಟ್ ತೀರ್ಮಾನಿಸಲಿ. ಇದರ ವಿಚಾರಣೆ ಅಲ್ಲಿ ನಡೆಯುವುದೇ ಸೂಕ್ತ ಅಭಿಪ್ರಾಯ ತಿಳಿಸಿತ್ತು. ಹಾಗಾಗಿ, ಬಸನಗೌಡ ಪಾಟೀಲ್ ಯತ್ನಾಳ್ ಅವರು ಇದೇ ಕೇಸ್ ಸಂಬಂದ ಸುಪ್ರೀಂಕೋರ್ಟ್‌ನಲ್ಲೂ ಅರ್ಜಿ ಸಲ್ಲಿಸಿದ್ದರು.

ಕೇಸ್‌ನ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್ ಇದಕ್ಕೆ ಪ್ರತಿವಾದ ಮಂಡಿಸಬೇಕು ಎಂದು ಸೂಚಿಸಿ ಡಿ.ಕೆ.ಶಿವಕುಮಾರ್, ಕರ್ನಾಟಕ ಸರ್ಕಾರಕ್ಕೂ ನೋಟಿಸ್ ಜಾರಿ ಮಾಡಿ, ವಿಚಾರಣೆಯ ದಿನಾಂಕವನ್ನು ಮುಂದೂಡಿದೆ ಎನ್ನಲಾಗಿದೆ.
ಈ ಹಿಂದೆ ಏನಾಗಿತ್ತು?: ಡಿ.ಕೆ.ಶಿವಕುಮಾರ್ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಈ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ನೀಡಿತ್ತು. ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ಸಿಬಿಐಗೆ ನೀಡಿದ್ದ ತನಿಖೆಯ ಅನುಮತಿ ಹಿಂಪಡೆದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿಬಿಐ ಅಧಿಕಾರಿಗಳು ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು.
ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸಿಬಿಐ ಹಾಗೂ ಬಿಜೆಪಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿತ್ತು. ಪ್ರಕರಣ ವಿಚಾರಣೆಗೆ ಅರ್ಹವಾಗಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಕುರಿತು ಸುಪ್ರೀಂ ಕೋರ್ಟ್ ತಿರ್ಮಾನಿಸಬೇಕು ಎಂದು ಹೇಳಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.

ಹೈಕೋರ್ಟ್ ವಿಭಾಗೀಯ ಪೀಠವು ತಮ್ಮ ಮೇಲಿನ ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಈ ತೀರ್ಪಿನಿಂದ ಡಿಕೆ ಶಿವಕುಮಾರ್ ಅವರು ತುಸು ನಿರಾಳರಾಗಿದ್ದರು. ಈ ಬಗ್ಗೆ ಮಾತನಾಡಿದ್ದ ಡಿ.ಕೆ.ಶಿವಕುಮಾರ್ ಅವರು ಹೈಕೋರ್ಟ್ ಯಾವ ತೀರ್ಪು ಕೊಟ್ಟರೂ ಅದನ್ನು ಸ್ವೀಕರಿಸುತ್ತೇನೆ. ನನಗೆ ದೇವರು ಹಾಗೂ ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂದಿದ್ದರು. ಸದ್ಯ ಈ ಪ್ರಕರಣದ ವಿಚಾರಣೆಯು ಸುಪ್ರೀಂಕೋರ್ಟ್‌ನಲ್ಲಿದೆ. ಮುಂದಿನ ವಿಚಾರಣೆಗೆ ಖುದ್ದು ಡಿ.ಕೆ.ಶಿವಕುಮಾರ್ ಕೂಡ ಹಾಜರಾಗುವ ಸಾಧ್ಯತೆ ಇದೆ.












Click it and Unblock the Notifications