Ibrahim Sutar Death: ಸೂಫಿ ಸಂತ, ತತ್ವಪದ ಗಾಯಕ ಇಬ್ರಾಹಿಂ ಸುತಾರ ವಿಧಿವಶ
ಬಾಗಲಕೋಟೆ, ಫೆಬ್ರವರಿ 5: ಪದ್ಮಶ್ರೀ ಪುರಸ್ಕೃತ, ಸೂಫಿ ಸಂತ, ತತ್ವಪದ ಗಾಯಕ ಇಬ್ರಾಹಿಂ ಸುತಾರ ವಿಧಿವಶರಾಗಿದ್ದಾರೆ. ತಮ್ಮ ಪ್ರವಚನ ಮತ್ತು ಸಂವಾದಗಳ ಮೂಲಕ ಹಿಂದೂ-ಮುಸ್ಲೀಮರ ಮಧ್ಯೆ ಭಾವೈಕ್ಯತೆಯನ್ನು ಹರಡಿದ ಮಹಾಲಿಂಗಪುರದ ಇಬ್ರಾಹಿಂ ಸುತಾರ ಶನಿವಾರ ಇಹಲೋಕ ತ್ಯಜಿಸಿದ್ದಾರೆ. ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Koo Appಸರ್ವಧರ್ಮ ಭಾವೈಕ್ಯತೆಯ ಸಂದೇಶ ಸಾರಿದ ಸೂಫಿ ಸಂತ, ತತ್ವಪದಕಾರರು, ಪ್ರವಚನಕಾರರು, ಪದ್ಮಶ್ರೀ ವಿಜೇತ ಶ್ರೀ ಇಬ್ರಾಹಿಂ ಸುತಾರ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅನುಯಾಯಿಗಳು, ಕುಟುಂಬ ವರ್ಗ ಹಾಗೂ ಹಿತೈಷಿಗಳಿಗೆ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ. - Dr. Ashwathnarayan C. N. | ಡಾ. ಅಶ್ವಥ್ ನಾರಾಯಣ್ ಸಿ.ಎನ್. (@drashwathnarayan) 5 Feb 2022
ಶನಿವಾರ ನಿಧನ ಹೊಂದಿದ ಕಬೀರ ಸಂತ, ಪದ್ಮಶ್ರೀ ಇಬ್ರಾಹಿಂ ಸುತಾರ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸೂಚಿಸಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಬಡ ಕುಟುಂಬದಲ್ಲಿ ಇಬ್ರಾಹಿಂ ಸುತಾರ 1940ರ ಮೇ 10ರಂದು ಜನಿಸಿದರು. ಇವರ ತಂದೆ ನಬಿಸಾಹೇಬ್ ಮತ್ತು ತಾಯಿ ಅಮೀನಾಬಿ. ಇವರ ತಂದೆ ಬಡಗಿ ವೃತ್ತಿಯನ್ನು ಮಾಡಿಕೊಂಡಿದ್ದು, ಬಡ ಕುಟುಂಬದಲ್ಲಿ ಜನಿಸಿದ ಇಬ್ರಾಹಿಂ ಸುತಾರ ಅವರಿಗೆ ಓದಲು ಸಾಧ್ಯವಾಗಲಿಲ್ಲ.
ಮೂರನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ ಇಬ್ರಾಹಿಂ ಸುತಾರರು, ಮಹಾಲಿಂಗಪುರದ ಬಹುಸಂಖ್ಯಾತರು ಮಾಡುತ್ತಿದ್ದ ನೇಕಾರಿಕೆಯನ್ನೇ ಕಲಿತುಕೊಂಡರು. ತದನಂತರದಲ್ಲಿ ನೇಕಾರಿಕೆಯನ್ನೇ ತಮ್ಮ ಉದ್ಯೋಗವಾಗಿ ಆರಿಸಿಕೊಂಡಿದ್ದರು.

ಬಾಲ್ಯದಲ್ಲಿ ಕುರಾನ್ ಅಧ್ಯಯನ:
ಚಿಕ್ಕಂದಿನಲ್ಲೇ ಮಸೀದಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಇಬ್ರಾಹಿಂ ಸುತಾರ, ಧರ್ಮಗುರುಗಳ ಮಾರ್ಗದರ್ಶನದಲ್ಲಿ ಕುರಾನ್ ಅಧ್ಯಯನ ಮಾಡಿಕೊಂಡರು. ಈ ವೇಳೆ ಬೇರೆ ಧರ್ಮಗ್ರಂಥಗಳಲ್ಲಿ ಸಾರವನ್ನು ತಿಳಿದುಕೊಳ್ಳುವ ಆಸೆ ಚಿಗುರಿತು. ಊರಿನಲ್ಲಿದ್ದ ಸಾಧುವಿನ ಭಜನಾ ಸಂಘ ಬೆಂಬಲ ನೀಡಿತು. ಧಾರ್ಮಿಕರ ಜೊತೆಯಲ್ಲಿ ತತ್ವಪದ ಮತ್ತು ವಚನಗಳನ್ನು ಕಲಿತುಕೊಂಡರು. ಉಪನಿಷತ್ತಿನ ಸಾರವನ್ನು ಅರಿತುಕೊಂಡರು.
Koo Appಕನ್ನಡದ ಕಬೀರ ಎಂದೇ ಖ್ಯಾತರಾಗಿದ್ದ ಸರ್ವ ಧರ್ಮ ಸಮನ್ವಯ ಪ್ರವಚನಕಾರ ಪದ್ಮಶ್ರೀ ಇಬ್ರಾಹಿಂ ಸುತಾರ ಅವರ ನಿಧನದ ವಾರ್ತೆ ತೀವ್ರ ದುಃಖ ತಂದಿದೆ. ಸಮಾಜದಲ್ಲಿ ಸಮಾನತೆಯನ್ನು ಸಾರಲು ಅವರು ಶ್ರಮಿಸಿದ್ದರು. ದೇವರು ಅವರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. #IbrahimSutara - Araga Jnanendra (@aragajnanendra) 5 Feb 2022
ಮಹಾಲಿಂಗಪುರದಲ್ಲಿ ಬಸವಾನಂದ ಸ್ವಾಮೀಜಿ ಪುಣ್ಯಾರಾಧನೆ ಸಂದರ್ಭದಲ್ಲಿ ಪ್ರತಿವರ್ಷದಲ್ಲಿ ಒಂದು ತಿಂಗಳು ನಡೆಯುವ ಪ್ರವಚನವನ್ನು ಕೇಳುತ್ತಿದ್ದು, ಅಲ್ಲಿನ ಧಾರ್ಮಿಕ ಚಿಂತನೆಗಳು ತಮ್ಮಲ್ಲಿನ ತಿಳುವಳಿಕೆ ಹೆಚ್ಚಿಸಿದವು ಎಂದು ತಮ್ಮ ಪ್ರವಚನಗಳಲ್ಲಿ ಸ್ವತಃ ಇಬ್ರಾಹಿಂ ಸುತಾರ ಸ್ಮರಿಸಿಕೊಳ್ಳುತ್ತಿದ್ದರು.
Koo App”ಸರ್ವಧರ್ಮ ಸಮನ್ವಯದ ಪ್ರವಚನಕಾರರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಮ್ ಸುತಾರ ಅವರು ಇಂದು ಮುಂಜಾನೆ ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಲು ಶ್ರಮಿಸಿದ ಅವರ ದಿವ್ಯಾತ್ಮಕ್ಕೆ ದೇವರು ಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” : ಮುಖ್ಯಮಂತ್ರಿ @BSBommai - CM of Karnataka (@CMOKarnataka) 5 Feb 2022
ಇಬ್ರಾಹಿಂ ಸುತಾರ ನಿಧನಕ್ಕೆ ಗಣ್ಯರ ಸಂತಾಪ:
"ಸಾಮರಸ್ಯದ ಕೊಂಡಿ, ಸೌಹಾರ್ದ ಸಮಾಜದ ಪ್ರತಿಪಾದಕರು ಪದ್ಮಶ್ರೀ ಪುರಸ್ಕೃತರಾಗಿದ್ದ ಕನ್ನಡದ ಕಬೀರ ಇಬ್ರಾಹಿಂ ಸುತಾರ ಅವರ ನಿಧನ ತೀವ್ರ ದುಃಖ ಉಂಟು ಮಾಡಿದೆ. ಸುತಾರ ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟ. ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ," ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
Koo Appಖ್ಯಾತ ಪ್ರವಚನಕಾರರು, ಆಧ್ಯಾತ್ಮಿಕ ಚಿಂತಕರು, ಸರ್ವಧರ್ಮ ಪ್ರಚಾರಕರು ಪದ್ಮಶ್ರೀ ಇಬ್ರಾಹಿಮ್ ಸುತಾರ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ, ಕುಟುಂಬ ವರ್ಗಕ್ಕೆ ಹಾಗೂ ಅವರ ಅನುಯಾಯಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. #ಓಂಶಾಂತಿ - B Sriramulu (@sriramulubjp) 5 Feb 2022
"ಪದ್ಮಶ್ರೀ ಪುರಸ್ಕೃತರು ಖ್ಯಾತ ಪ್ರವಚನಕಾರ ಮಹಾಲಿಂಗಪೂರದ ಇಬ್ರಾಹಿಂ ಸುತಾರ ಅವರು ಇಂದು ಮುಂಜಾನೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.ಭಗವಂತ ಅವರ ದಿವ್ಯಾತ್ಮಕ್ಕೆ ಚಿರಶಾಂತಿ ನೀಡಲಿ," ಎಂದು ಸಚಿವ ಗೋವಿಂದ್ ಕಾರಜೋಳ ಟ್ವೀಟ್ ಸಂತಾಪ ತಿಳಿಸಿದ್ದಾರೆ.












Click it and Unblock the Notifications