ಹಾಗೂಕೆಟ್ಟು, ಹೀಗೂಕೆಟ್ಟವರಿಗೆ ಚಿಗುರಿದ ಕನಸು
ಬೆಂಗಳೂರು, ಜ. 30 : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸಾದರೂ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಲಕ್ಷಣಗಳು ಕಾಣಸಿಗುತ್ತಿವೆ. ಬಿಜೆಪಿಯಲ್ಲಿ ಈಗ ಮೂಲ ಬಿಜೆಪಿಯವರು ಹಾಗೂ ಬಿಎಸ್‍ವೈ ಬಣ ಎಂಬ ಗಲಾಟೆ ಶುರುವಾಗಿದ್ಯಂತೆ. ಕಾಂಗ್ರೆಸ್ ಪಾಳೆಯದಲ್ಲಿ ಇರೋ ಥರ.
ಈ ಭಿನ್ನಮತದ ಹಿನ್ನೆಲೆಯಲ್ಲಿ ನಾವ್ಯಾಕೆ ತೃತೀಯ ರಂಗದ ಜೊತೆ ಗುರುತಿಸಿಕೊಳ್ಳಬಾರದು ಎಂದು ಬಿಎಸ್‍ವೈ ಬೆಂಬಲಿಗರು ಚಿಂತನೆ ಆರಂಭಿಸಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಯಡಿಯೂರಪ್ಪ ಅವರ ಐವರು ಆಪ್ತರು ಮಂಗಳವಾರ ಸಂಜೆ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿದ್ದಾರೆ. ಆದರೆ ಆ ಮಾತುಕತೆಯಲ್ಲಿ ಏನಾಯ್ತು ಅನ್ನೋ ವಿವರ ಇನ್ನೂ ಹೊರಬಿದ್ದಿಲ್ಲ. ಬೀಳತ್ತೆ, ಕಾಯ್ತಿರಿ! [ಕವಲು ದಾರಿಯತ್ತ ರಾಜ್ಯ ಕಾಂಗ್ರೆಸ್]

ಭಿನ್ನರಾಗಕ್ಕೆ ಕಾರಣ...?
* ನಮ್ಮ ನಾಯಕರನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸುತ್ತಿಲ್ಲ
* ಬಿ.ಎಸ್.ವೈಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗುತ್ತಿಲ್ಲ
* ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನವನ್ನೂ ನೀಡಿಲ್ಲ
* ನಮ್ಮ ಸೇರ್ಪಡೆಗೆ ಷರತ್ತು ಹಾಕುತ್ತಿದ್ದಾರೆ
* ಪ್ರಮುಖ ಸಭೆಗಳಿಗೆ ಆಹ್ವಾನ ನೀಡುತ್ತಿಲ್ಲ
* ಕಾರ್ಯಕಾರಿ ನಿರ್ಧಾರಗಳಲ್ಲಿ ನಮಗೆ ಮನ್ನಣೆ ಸಿಗುತ್ತಿಲ್ಲ
* ಶಾಸಕಾಂಗ ಸಭೆಯಲ್ಲೂ ಸರಿಯಾದ ಗೌರವ ತೋರಿರಲಿಲ್ಲ
* ಬಿಜೆಪಿಯಲ್ಲಿ ಎಲ್ಲವೂ ನಮ್ಮದೇ ಎಂಬಂತೆ ವರ್ತಿಸುತ್ತಿದ್ದಾರೆ
* ಲೋಕಸಭೆ ಚುನಾವಣೆ ಬಳಿಕ ತೃತೀಯ ರಂಗಕ್ಕೆ ಭವಿಷ್ಯವಿದೆ [ಸಪ್ತಗ್ರಹ ನಿವಾರಣೆಗೆ ಬಿಎಸ್ವೈ ಪೂಜೆ]
ಪಕ್ಷದಲ್ಲಿ ಯಾವುದಾದರೊಂದು ಸ್ಥಾನ ಇಲ್ಲವೇ ಲೋಕಸಭೆಗೆ ಸ್ಫರ್ಧಿಸಲು ಅಪೇಕ್ಷಿಸಿದ ಕ್ಷೇತ್ರದಿಂದ ಒಂದು ಟಿಕೆಟ್. ಎಂಥದೂ ಇಲ್ಲ ಅಂದಮೇಲೆ ಇಲ್ಲಿಂದ ಅಲ್ಲಿಗೆ ಹೋಗಿ, ಅಲ್ಲಿಂದ ಇಲ್ಲಿಗೆ ಬಂದು ಏನು ಪ್ರಯೋಜನ ಎನ್ನುವುದು ಆ ಐದು ಮಂದಿಯ ಮನದಲ್ಲಿ ಮೂಡಿರುವ ತಳಮಳ! ಕೊನೆಗೇನಾಗುತ್ತೋ ಆ ಯಡಿಯೂರು ಸಿದ್ದಲಿಂಗೇಶ್ವರನೇ ಹೇಳಬೇಕು.












Click it and Unblock the Notifications