Breaking news; ಕರ್ನಾಟಕಕ್ಕೆ ನೂತನ ರಾಜ್ಯಪಾಲರ ನೇಮಕ
ಬೆಂಗಳೂರು, ಜುಲೈ 06; ಕರ್ನಾಟಕಕ್ಕೆ ನೂತನ ರಾಜ್ಯಪಾಲರ ನೇಮಕವಾಗಿದೆ. ಥಾವರ್ ಚಂದ್ ಗೆಹ್ಲೋಟ್ ನೂತನ ರಾಜ್ಯಪಾಲರಾಗಿ ನೇಮಕವಾಗಿದ್ದು, ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.
ರಾಜ್ಯಸಭಾ ಸದಸ್ಯರಾಗಿರುವ 73 ವರ್ಷದ ಥಾವರ್ ಚಂದ್ ಗೆಹ್ಲೋಟ್ ಕೇಂದ್ರ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿದ್ದಾರೆ.

ಹಲವು ರಾಜ್ಯಗಳಿಗೆ ಮಂಗಳವಾರ ರಾಜ್ಯಪಾಲರನ್ನು ನೇಮಕ ಮಾಡಲಾಗಿದ್ದು, ಕರ್ನಾಟಕಕ್ಕೆ ಥಾವರ್ ಚಂದ್ ಗೆಹ್ಲೋಟ್ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ಮಧ್ಯಪ್ರದೇಶ ರಾಜ್ಯದ ನಾಗ್ಡಾ ಜಿಲ್ಲೆಯಲ್ಲಿ ಜನಿಸಿದ ಥಾವರ್ ಚಂದ್ ಗೆಹ್ಲೋಟ್ ದಲಿತ ಸಮುದಾಯಕ್ಕೆ ಸೇರಿದವರು. ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿಯೂ ಅವರು ಕಾರ್ಯ ನಿರ್ವಹಣೆ ಮಾಡಿದ್ದರು.
1/9/2014ರಿಂದ ಗುಜರಾತ್ ಮೂಲದ ವಜುಭಾಯಿ ರುಢಾಬಾಯಿ ವಾಲಾ ಕರ್ನಾಟಕದ ರಾಜ್ಯಪಾಲರಾಗಿದ್ದರು. ಅವರ ಅವಧಿ ಪೂರ್ಣಗೊಂಡರೂ ಸಹ ಹೊಸ ರಾಜ್ಯಪಾಲರನ್ನು ನೇಮಕ ಮಾಡಿರಲಿಲ್ಲ.
ರಾಜ್ಯಪಾಲರ ಅಧಿಕಾರಾವಧಿ 5 ವರ್ಷಗಳು. 2019ರ ಸೆಪ್ಟೆಂಬರ್‌ನಲ್ಲಿಯೇ ವಜುಭಾಯಿ ವಾಲಾ ಅವಧಿ ಪೂರ್ಣಗೊಂಡಿತ್ತು. 2020ರಲ್ಲಿ ಹೊಸ ರಾಜ್ಯಪಾಲರ ನೇಮಕವಾಗಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ನೇಮಕಗೊಂಡಿರಲಿಲ್ಲ.
ಕೇಂದ್ರ ಗೃಹ ಸಚಿವಾಲಯ ರಾಜ್ಯಪಾಲರನ್ನು ನೇಮಕ ಮಾಡುವಾಗ ಮುಂದಿನ ಆದೇಶದ ತನಕ ಎಂಬ ಒಕ್ಕಣೆಯೊಂದಿಗೆ ಅಧಿಸೂಚನೆ ಪ್ರಕಟಿಸುತ್ತದೆ. ಆದ್ದರಿಂದ ಅವಧಿ ಪೂರ್ಣಗೊಂಡ ಬಳಿಕವೂ ಅವರು ಮುಂದುವರೆಯುವ ಅವಕಾಶವಿದೆ.
ಕರ್ನಾಟಕದ ರಾಜ್ಯಪಾಲರಾಗಿ ಖುರ್ಷಿದ್ ಅಲಂ ಖಾನ್ 7 ವರ್ಷ, ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ 6 ವರ್ಷ ಕಾರ್ಯ ನಿರ್ವಹಣೆ ಮಾಡಿದ್ದರು.
ಎಚ್. ಆರ್. ಭಾರದ್ವಾಜ್ 5 ವರ್ಷ ಪೂರೈಸಿದ್ದರು. ವಜುಭಾಯಿ ವಾಲಾ 7 ವರ್ಷ ಪೂರ್ಣಗೊಳಿಸುವ ಹಂತದಲ್ಲಿದ್ದರು. ಅಷ್ಟರಲ್ಲಿ ನೂತನ ರಾಜ್ಯಪಾಲರ ನೇಮಕವಾಗಿದೆ.
ಕರ್ನಾಟಕದ 19ನೇ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ನೇಮಕವಾಗಿದ್ದಾರೆ. ಕಳೆದ ವರ್ಷ ಉಮಾ ಭಾರತಿ, ಸುಮಿತ್ರಾ ಮಹಾಜನ್ ರಾಜ್ಯಪಾಲರಾಗಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು.
ಗುಜರಾತಿಗಳಿಗೆ ಹೆಚ್ಚಿನ ಆದ್ಯತೆ; ರಾಜ್ಯಪಾಲ ವಜುಭಾಯಿ ವಾಲಾ ರಾಜಭವನದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಎಲ್ಲರೂ ಗುಜರಾತ್‌ನವರನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.
ರಾಜಭವನಕ್ಕೆ ತೆರಳಿದರೆ ಗುಜರಾತಿ, ಹಿಂದಿಯಲ್ಲಿ ಮಾತನಾಡುವವರೇ ಸಿಗುತ್ತಾರೆ ಎಂಬ ದೂರು ಸಾಮಾನ್ಯವಾಗಿತ್ತು. ಹಲವು ಕನ್ನಡ ಪರ ಸಂಘಟನೆಗಳು ವಾಲಾರ ಗುಜರಾತಿ ಪ್ರೇಮದ ಬಗ್ಗೆ ಟೀಕೆಗಳನ್ನು ಮಾಡಿದ್ದರು.












Click it and Unblock the Notifications