ಮತದಾರರ ಮೇಲೆ ಪ್ರಭಾವದ ಕೇಸ್: ಸಚಿವ ಮಾಧುಸ್ವಾಮಿಗೆ ಟೆಂಪರರಿ ರಿಲೀಫ್
ಬೆಂಗಳೂರು ಅ.25. ಮೂರು ವರ್ಷಗಳ ಹಿಂದಿನ ಮತದಾರರ ಮೇಲೆ ಪ್ರಭಾವ ಬೀರಿದ ಪ್ರಕರಣವೊಂದರಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಹೈಕೋರ್ಟ್ ಅವರ ವಿರುದ್ಧದ ಪ್ರಕರಣದಲ್ಲಿ ವಿಚಾರಣಾ ಕೋರ್ಟ್ ಮಾಡಿರುವ ತಾಂತ್ರಿಕ ಲೋಪವನ್ನು ಮುಂದಿಟ್ಟುಕೊಂಡು ಸದ್ಯ ಪ್ರಕರಣದ ವಿಚಾರಣಾ ಪ್ರಕ್ರಿಯೆ ರದ್ದುಗೊಳಿಸಿ ಹೊಸದಾಗಿ ವಿಚಾರಣೆ ನಡೆಸಲು ಆದೇಶ ನೀಡಿದೆ.
ಪೊಲೀಸರ ಕೋರಿಕೆ ಮೇರೆಗೆ ತಮ್ಮ ವಿಚಾರಣೆ ನಡೆಸಲು ಅನುಮತಿಸಿದ್ದ ಮ್ಯಾಜಿಸ್ಟ್ರೇಟ್ ಆದೇಶ ಪ್ರಶ್ನಿಸಿ ಮಾಧುಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ವಾದ- ಪ್ರತಿವಾದ ಆಲಿಸಿದ ನಂತರ ಮತದಾರರ ಮೇಲೆ ಪ್ರಭಾವ ಬೀರಿದ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧದ ವಿಚಾರಣಾ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಜತೆಗೆ, ದೂರುದಾರರು ಮ್ಯಾಜಿಸ್ಟ್ರೇಟ್ ಮುಂದೆ ವಿಚಾರಣೆಗೆ ಅನುಮತಿ ಕೋರಬಹುದು. ಅನುಮತಿ ನೀಡುವ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ವಿವೇಚನೆ ಬಳಸಿ, ಸೂಕ್ತ ಆದೇಶ ಹೊರಡಿಸಬಹುದು ಎಂದು ತಿಳಿಸಿ, ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಮರಳಿಸಿರುವ ಹೈಕೋರ್ಟ್, ಅರ್ಜಿ ಇತ್ಯರ್ಥಪಡಿಸಿದೆ.

ಹೈಕೋರ್ಟ್ ಏನು ಹೇಳಿದೆ?
ಅಸಂಜ್ಞೇಯ ಅಪರಾಧಗಳ ತನಿಖೆಗೆ ಅನುಮತಿ ಕೋರುವಾಗ ಮಾಹಿತಿದಾರರೇ ಮ್ಯಾಜಿಸ್ಟ್ರೇಟ್ ಮುಂದೆ ಹೋಗಬೇಕು. ಅನುಮತಿ ನೀಡಬೇಕೆ ಅಥವಾ ನಿರಾಕರಿಸಬೇಕೆ ಎಂಬುದನ್ನು ನಿರ್ಧರಿಸಲು ಮ್ಯಾಜಿಸ್ಟ್ರೇಟ್ ಮುಕ್ತ ಅವಕಾಶ ಹೊಂದಿದ್ದಾರೆ. ಪ್ರಕರಣವು ತನಿಖೆ ನಡೆಸಲು ಸೂಕ್ತವಾಗಿದೆಯೇ ಎಂಬುದನ್ನು ಮ್ಯಾಜಿಸ್ಟ್ರೇಟ್ ವಿವೇಚನೆಯಿಂದ ನಿರ್ಧರಿಸಬೇಕು. ಕೇವಲ ಪೊಲೀಸರು ಸಲ್ಲಿಸಿದ ಕೋರಿಕೆಗೆ ಅನುಮೋದನೆ ನೀಡಿದರೆ ಸಾಲದು ಎಂದಿರುವ ನ್ಯಾಯಪೀಠ, ಮಾಹಿತಿದಾರರು ಪೊಲೀಸರ ಮುಂದೆ ಹಾಜರಾಗಿರುವ ಹಂತದವರೆಗೆ ಪ್ರಕರಣವನ್ನು ಮರುಸ್ಥಾಪಿಸಿದೆ.
ಪ್ರಕರಣದ ಸಂಬಂಧ ಪೊಲೀಸರ ಕೋರಿಕೆಗೆ ಮ್ಯಾಜಿಸ್ಟ್ರೇಟ್ ಅನುಮತಿ ನೀಡಿದ್ದಾರೆ. ಇದು ನ್ಯಾಯಾಲಯದ ಆದೇಶ ಎನಿಸುವುದಿಲ್ಲ. ಇಲ್ಲಿ ಸೂಕ್ತ ರೀತಿಯಲ್ಲಿ ಕಾನೂನು ಪ್ರಕ್ರಿಯೆ ಪಾಲನೆಯಾಗಿಲ್ಲ. ಕೋರಿಕೆಗೆ ಪೂರಕವಾಗಿ ಪ್ರತ್ಯೇಕ ಆದೇಶ ಹೊರಡಿಸುವುದು ನ್ಯಾಯಾಲಯದ ಪ್ರಕ್ರಿಯೆಯ ಭಾಗವಾಗಿದ್ದು, ಈ ಪ್ರಕ್ರಿಯೆಯನ್ನು ಪಾಲಿಸಿಲ್ಲ. ಆದ್ದರಿಂದ, ಮ್ಯಾಜಿಸ್ಟ್ರೇಟ್ ಕೋರ್ಟ್‌ನ ವಿಚಾರಣಾ ಪ್ರಕ್ರಿಯೆ ವಜಾಕ್ಕೆ ಅರ್ಹ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ದೂರುದಾರರು ಮ್ಯಾಜಿಸ್ಟ್ರೇಟ್ ಮುಂದೆ ವಿಚಾರಣೆಗೆ ಅನುಮತಿ ಕೋರಬಹುದು. ಅನುಮತಿ ನೀಡುವ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ವಿವೇಚನೆ ಬಳಸಿ, ಸೂಕ್ತ ಆದೇಶ ಹೊರಡಿಸಬಹುದು ಎಂದು ತಿಳಿಸಿ, ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ವಾಪಸ್ ಕಳುಹಿಸಿದೆ.
ಪ್ರಕರಣದ ಹಿನ್ನೆಲೆ:
2019ರ ಡಿ.2ರಂದು ಬಳ್ಳಾರಿಯ ಹೊಸಪೇಟೆಯಲ್ಲಿ ಹೋಟೆಲ್ ಬಳಿ ನಡೆದಿದ್ದ ಸಭೆಯಲ್ಲಿ ಹೇಳಿಕೆ ನೀಡಿದ್ದ ಸಚಿವ ಮಾಧುಸ್ವಾಮಿ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಮತದಾರರನ್ನು ಪ್ರಭಾವಿಸಿದ್ದಾರೆ. ಇದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಎಂ.ಡಿ. ಕಿರಣ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸಲು ಅನುಮತಿ ನೀಡುವಂತೆ ಮ್ಯಾಜಿಸ್ಟ್ರೇಟ್‌ಗೆ ಮನವಿ ಸಲ್ಲಿಸಿದ್ದರು. ಪೊಲೀಸರ ಕೋರಿಕೆಯನ್ನು ಮ್ಯಾಜಿಸ್ಟ್ರೇಟ್ ಅನುಮೋದಿಸಿದ್ದರು. ಇದನ್ನು ಪ್ರಶ್ನಿಸಿ ಮಾಧುಸ್ವಾಮಿ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications