ರಾಜ್ಯದಲ್ಲಿ ಹೆಚ್ಚಾದ ತೆರಿಗೆ ಸಂಗ್ರಹ, ಕಳೆದ ವರ್ಷಕ್ಕಿಂತ 18.7% ಹೆಚ್ಚಳ
ಬೆಂಗಳೂರು, ಸೆಪ್ಟೆಂಬರ್ 14: ರಾಜ್ಯದ ವಿವಿಧ ಇಲಾಖೆಗಳಲ್ಲಿ ರಾಜಸ್ವ/ತೆರಿಗೆ ಸಂಗ್ರಹ ಭಾರಿ ಏರಿಕೆ ಕಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 18.7% ಹೆಚ್ಚಳ ಆಗಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಅವರು ವಾಣಿಜ್ಯ ತೆರಿಗೆ, ಅಬಕಾರಿ, ಸಾರಿಗೆ, ನೊಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ತೆರಿಗೆ ಸಂಗ್ರಹದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವಂತೆ ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ತೆರಿಗೆ ಸಂಗ್ರಹದಲ್ಲಿ ಸಂಬಂಧಿಸಿದ ಎಲ್ಲ ಇಲಾಖೆಗಳು ಗುರಿ ಮೀರಿ ಸಾಧನೆ ಮಾಡಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ನಷ್ಟು ಕಾರ್ಯೋನ್ಮುಖರಾಗಲು ಅಧಿಕಾರಿಗಳಿಗೆ ಸೂಚಿಸಿದರು.
ತೆರಿಗೆ ಸಂಗ್ರಹದಲ್ಲಿ ಜನಸ್ನೇಹಿಯಾಗಿ, ಆದರೆ ಸರ್ಕಾರಕ್ಕೆ ನಾಗರಿಕರು ಪಾವತಿಸಬೇಕಾದ ತೆರಿಗೆಯನ್ನು ಕಡ್ಡಾಯವಾಗಿ ಪಾವತಿಸುವಂತೆ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಸಭೆ ನಡೆಸಲು ಸಿಎಂ ಸೂಚನೆ
ಜಿ.ಎಸ್.ಟಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಪರಿಶೀಲನಾ ಕಾರ್ಯ ನಡೆಸುವಂತೆ ಸೂಚಿಸಿದ ಮುಖ್ಯಮಂತ್ರಿಗಳು, ಸರ್ಕಾರ ದೂರದೃಷ್ಠಿಯುಳ್ಳ ಯೋಜನೆಗಳು ಯಶಸ್ವಿಯಾಗಲು ತೆರಿಗೆ ಸಂಗ್ರಹ ಪರಿಣಾಮಕಾರಿಯಾಗಿ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲ ತೆರಿಗೆ ಇಲಾಖೆಗಳು ಕಾರ್ಯೋನ್ಮುಖವಾಗಿರುವುದು ಉತ್ತಮ ಎಂದರು.

28537 ಕೋಟಿ ತೆರಿಗೆ ಸಂಗ್ರಹವಾಗುವ ಸಾಧ್ಯತೆ
ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಏಪ್ರಿಲ್ 2018 ರಿಂದ ಆಗಸ್ಟ್ ರವರೆಗೆ ಒಟ್ಟು 28537 ಕೋಟಿ ರೂ.ಗಳು ಸಂಗ್ರಹವಾಗಿದ್ದು, ಸೆಪ್ಟೆಂಬರ್ 2018 ರಿಂದ ಮಾರ್ಚ್ ವರಗೆ 38383 ಕೋಟಿ ರೂ.ಗಳ ತೆರಿಗೆ ಸಂಗ್ರಹವಾಗುವ ಅಂದಾಜಿದ್ದು, ಕಳೆದ ವರ್ಷಕ್ಕೆ ಹೋಲಿಸಿದಾಗ ಶೇ 18.7 ರಷ್ಟು ಹೆಚ್ಚಳವಾಗಿದೆ.

ಅಬಕಾರಿ ಇಲಾಖೆಯಲ್ಲಿ ರೂ.19750 ಕೋಟಿ ಗುರಿ
ಅಬಕಾರಿ ಇಲಾಖೆಯಲ್ಲಿ 19750 ಕೋಟಿ ರೂ.ಗಳ ವಾರ್ಷಿಕ ಗುರಿ ಇದ್ದು, ಆಗಸ್ಟ್ ಮಾಹೆಯ ಅಂತ್ಯಕ್ಕೆ 8150.45 ಕೋಟಿ ರೂ.ಗಳ ತೆರಿಗೆ ಸಂಗ್ರಹವಾಗಿದೆ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ 996.73 ಕೋಟಿ ರೂ.ಗಳ ಹೆಚ್ಚಳವಾಗಿದೆ.
ಸಾರಿಗೆ ಇಲಾಖೆಯಲ್ಲಿ ಏಪ್ರಿಲ್ ನಿಂದ ಆಗಸ್ಟ್ 2018 ರವರೆಗೆ 2377.67 ಕೋಟಿ ರೂ.ಗಳಷ್ಟು ರಾಜಸ್ವ ಸಂಗ್ರಹವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ 161.15 ಕೋಟಿ ರೂ.ಗಳ ಹೆಚ್ಚಳವಾಗಿದೆ.

ನೋಂದಣಿ ಮುದ್ರಾಂಕ 3ನೇ ಸ್ಥಾನದಲ್ಲಿ
ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ರಾಜ್ಯದಲ್ಲಿ ರಾಜಸ್ವ ಸಂಗ್ರಹದಲ್ಲಿ 3 ನೇ ಸ್ಥಾನದಲ್ಲಿದೆ. ಆಗಸ್ಟ್ ವರೆಗೆ 4300 ಕೋಟಿ ರೂ.ಗಳ ಗುರಿಯಿದ್ದು, 4332 ಕೋಟಿ ರೂ. ಗಳನ್ನು ಸಂಗ್ರಹಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ವಾರ್ಷಿಕ ಗುರಿ 3000 ಕೋಟಿಗಳಿದ್ದು, 2018ರ ಜುಲೈ ವರೆಗೆ ರಾಜಸ್ವ ಸಂಗ್ರಹಣೆ ಒಟ್ಟು 728.15 ಕೋಟಿ ರೂ.ಗಳಾಗಿದೆ.

ಹಲವು ಅಧಿಕಾರಿಗಳು ಭಾಗಿ
ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಸುಬ್ರಮಣ್ಯ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎನ್.ಎಸ್.ಪ್ರಸಾದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ ಹಾಗೂ ಸಂಬಂಧಪಟ್ಟ ಇಲಾಖೆಯ ಆಯುಕ್ತರು ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications