ರಾಜ್ಯಕ್ಕೆ ಎರಡನೇ Rank ಬಂದವ ಕೂಲಿಗಾಗಿ ಮಹಾರಾಷ್ಟ್ರ ಸೇರಿದ್ದ: ಕಲ್ಲು-ಮಣ್ಣು ಹೊರುತ್ತಿದ್ದ ರಾಹುಲ್ ರಾಥೋಡ್ ಸಾಧನೆ
ಬೆಂಗಳೂರು, ಏಪ್ರಿಲ್ 22: 2022-23ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಮೊದಲ ಅಗ್ರ ಸ್ಥಾನ ಪಡೆದಿದ್ದು, ಎರಡನೇ ಮತ್ತು ಮೂರನೇ ಸ್ಥಾನವನ್ನು ಉಡುಪಿ ಮತ್ತು ಕೊಡಗು ಪಡೆದುಕೊಂಡಿವೆ.
ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಅನನ್ಯ ಕೆಎ, ವಿಜ್ಞಾನ ವಿಭಾಗದಲ್ಲಿ ಕೋಲಾರದ ಶ್ರೀನಿವಾಸಪುರದಲ್ಲಿರುವ ಜ್ಞಾನಗಂಗೋತ್ರಿ ಕಾಲೇಜಿನ ಕೌಶಿಕ್ ಎಸ್ ಮತ್ತುಬೆಂಗಳೂರಿನ ಆರ್‌ವಿ ಪಿಯು ಕಾಲೇಜಿನ ಸುರಭಿ ಎಸ್ ಹಾಗೂ ಕಲಾ ವಿಭಾಗದಲ್ಲಿ ಜಯನಗರದ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ತಬಸುಮ್ ಶೇಕ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ, ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿರುವ ವಿದ್ಯಾರ್ಥಿಯೇ ಮುಖ್ಯ ಆಕರ್ಷಣೆ ಆಗಿದ್ದಾನೆ. ಆತನ ಸಾಧನೆಗೆ, ಕಷ್ಟವನ್ನು ಮೀರಿದ ಆತನ ಪರಿಶ್ರಮಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿದ್ಯೆಗೆ ಬಡತನ, ಸಿರಿತನದ ಬೇಧಭಾವ ಇಲ್ಲ ಎನ್ನುವುದನ್ನು ಹುಣಸಗಿ ತಾಲೂಕಿನ ಮನ್ನಾಲಾಲ್ ತಾಂಡದ ರಾಹುಲ್ ರಾಥೋಡ್ ನಿರೂಪಿಸಿದ್ದಾನೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮನ್ನಾಲಾಲ್ ತಾಂಡದ ಮೋತಿಲಾಲ್ - ಸವಿತಾ ರಾಥೋಡ್ ದಂಪತಿಯ ಮಗ, ಪರಿಶಿಷ್ಟ ಜಾತಿಯ ಬಂಜಾರ ಸಮುದಾಯದ ರಾಹುಲ್ ರಾಥೋಡ್ ಸಾಧನೆಯನ್ನು ಇಂದು ರಾಜ್ಯದಲ್ಲಿ ಎಲ್ಲರೂ ಕೊಂಡಾಡುತ್ತಿದ್ದಾರೆ.
ರಾಹುಲ್ ರಾಥೋಡ್, ವಿಜಯಪುರದ ತಾಳಿಕೋಟೆ ಪಿಯುಸಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ನಲ್ಲಿದ್ದು ಓದುತ್ತಿದ್ದ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕನ್ನಡದಲ್ಲಿ 100ಕ್ಕೆ 97 ಅಂಕ ಪಡೆದಿದ್ದು, ಎರಡನೇ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದ ಸಂಸ್ಕೃತದಲ್ಲಿ 100ಕ್ಕೆ 98 ಅಂಕ ಪಡೆದಿದ್ದಾನೆ. ಒಟ್ಟು 600ಕ್ಕೆ 592 ಅಂಕಗಳನ್ನು ಪಡೆದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾನೆ.

ಪಿಯುಸಿ ಫಲಿತಾಂಶ ಬರುತ್ತಿದ್ದಂತೆ ರ್ಯಾಂಕ್ ಪಡೆದ ವಿದ್ಯಾರ್ಥಿಗಳು, ಅವರ ಪೋಷಕರು ಸಿಹಿ ತಿನಿಸಿ ಸಂಭ್ರಮಿಸುತ್ತಿದ್ದರೆ, ರಾಹುಲ್ ರಾಥೋಡ್ ಮಾತ್ರ ಅಂದಿನ ತುತ್ತಿನ ಚೀಲ ತುಂಬಿಸಿಕೊಳ್ಳಲು ತಂದೆ-ತಾಯಿಯೊಡನೆ ರಸ್ತೆ ಕಾಮಾಗಾರಿ ಕೆಲಸದಲ್ಲಿ ತೊಡಗಿದ್ದ. ಫಲಿತಾಂಶ ಬರುವ ಹೊತ್ತಿಗೆ ರಾಹುಲ್ ರಾಥೋಡ್ ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಕೆಲಸ ಮಾಡುತ್ತಿದ್ದ, ರಾಹುಲ್ ರಾಥೋಡ್ ರಾಜ್ಯಕ್ಕೆ ಕಲಾ ವಿಭಾಗಕ್ಕೆ ಎರಡನೇ ಸ್ಥಾನ ಪಡೆದಿರುವ ವಿಚಾರ ತಿಳಿಯುತ್ತಿದ್ದಂತೆ ಆ ಬಡ ಕುಟುಂಬದಲ್ಲಿ ಹೊಸ ಆಶಾಕಿರಣ ಮೂಡಿದಂತಾಗಿದೆ.
ರ್ಯಾಂಕ್ ಬಂದ ಸುದ್ದಿ ಬರುತ್ತಿದ್ದಂತೆಯೇ ಜೊತೆಗಿದ್ದರವರು ಕೆಲಸಬಿಟ್ಟು ತಮ್ಮ ತಾತ್ಕಾಲಿಕ ಟೆಂಟ್ ಮುಂದೆ ಸೇರಿ ರಾಹುಲ್ ರಾಥೋಡ್‌ಗೆ ಸಿಹಿ ತಿನಿಸಿ ಸಂಭ್ರಮಿಸಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕಡು ಬಡತನದಲ್ಲಿ ಇಂತಹ ಸಾಧನೆ ಮಾಡಿರುವ ರಾಹುಲ್ ರಾಥೋಡ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.












Click it and Unblock the Notifications