Land Encroachment: ಸರ್ಕಾರಿ ಜಮೀನಿನ ಒತ್ತುವರಿ ತೆರವಿಗೆ ಹೊಸ ರೂಲ್ಸ್, ಏನೆಲ್ಲ ಬದಲಾವಣೆ?
ರಾಜ್ಯದಲ್ಲಿ ಸರ್ಕಾರಿ ಜಮೀನು ಒತ್ತುವರಿಯಾಗಿದ್ದರೆ ಅದನ್ನು ತೆರವು ಮಾಡುವ ಸಂಬಂಧ ರಾಜ್ಯ ಸರ್ಕಾರವು ಮಹತ್ವದ ಬದಲಾವಣೆಯನ್ನು ತಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಸರ್ಕಾರಿ ಜಮೀನುಗಳು ಒತ್ತುವರಿಯಾಗಿದ್ದರೆ, ಅದನ್ನು ತೆರವುಗೊಳಿಸುವ ಸಂಪೂರ್ಣ ಅಧಿಕಾರ ತಹಶೀಲ್ದಾರರಿಗೆ ಇದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಈ ಸಂಬಂಧ ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವ ಹಾಗೂ ಸಣ್ಣ ಉದ್ದಿಮೆಗಳಿಗೆ ಸರಳ ಆಡಳಿತ ನೀಡುವ ಸಲುವಾಗಿ ಕರ್ನಾಟಕ ಭೂ ಕಂದಾಯ ವಿಧೇಯಕಕ್ಕೆ ಅಗತ್ಯ ತಿದ್ದುಪಡಿಗಳನ್ನು ತರಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಭೂ ಕಂದಾಯ ಮೂರನೇ ತಿದ್ದುಪಡಿ ವಿಧೇಯಕ-2024 ಮಂಡಿಸಿ ಸದನಕ್ಕೆ ಮಾಹಿತಿ ನೀಡಿದ್ದಾರೆ.

ಸರ್ಕಾರಿ ಜಮೀನು ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸುವ ಸಂಪೂರ್ಣ ಅಧಿಕಾರ ತಹಶೀಲ್ದಾರರಿಗೆ ಇದೆ. ಆದರೆ, ಕರ್ನಾಟಕ ಭೂ ಕಂದಾಯ ಸೆಕ್ಷನ್ 104 ಕಾನೂನನ್ನು ಈ ಹಿಂದೆ ತುಂಬಾ ಕ್ಲಿಷ್ಟಕರವಾಗಿ ವ್ಯಾಖ್ಯಾನಿಸಲಾಗಿತ್ತು. ಆದರೆ, ಇದೀಗ ಈ ಕಾನೂನನ್ನು ಸರಳೀಕರಣಗೊಳಿಸಲಾಗಿದೆ ಎಂದಿದ್ದಾರೆ.
ಕಾಲುವೆ, ಬಿ-ಖರಾಬು ಸೇರಿದಂತೆ ಯಾವುದೇ ಸರ್ಕಾರಿ ಜಮೀನು ಒತ್ತುವರಿಯಾಗಿದ್ದರೆ, ಅದನ್ನು ತೆರವುಗೊಳಿಸುವ ಪರಮಾಧಿಕಾರ ತಹಶೀಲ್ದಾರರಿಗೆ ಇದೆ ಎಂದು ತೀರಾ ಸರಳವಾಗಿ ಉಲ್ಲೇಖಿಸಲಾಗಿದೆ. ಈ ತಿದ್ದುಪಡಿ ಒತ್ತುವರಿಗಳನ್ನು ತೆರವುಗೊಳಿಸಿ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಲು ಮತ್ತಷ್ಟು ಬಲ ತುಂಬಲಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಭೂ ಕಂದಾಯ ಕಾನೂನು ಕಂದಾಯ ಇಲಾಖೆಯ ಅಡಿಪಾಯವಾಗಿದೆ. ಆದರೆ, ಈ ಕಾನೂನಿನಲ್ಲಿ ಕೆಲವು ಗೊಂದಲಗಳಿದ್ದವು. ಹೀಗಾಗಿ ಈ ಕಾನೂನುಗಳನ್ನು ಸರಳೀಕರಣಗೊಳಿಸಲಾಗಿದೆ. ಸರ್ಕಾರಿ ಆಸ್ತಿಗಳ ರಕ್ಷಣೆಗೆ ಮತ್ತಷ್ಟು ಬಲ ತುಂಬುವ ಹಾಗೂ ಸಣ್ಣ ಉದ್ದಿಮೆದಾರರಿಗೆ ಸರಳ ಆಡಳಿತ ನೀಡುವ ಸಲುವಾಗಿ ಈ ಕಾನೂನಿಗೆ ಪ್ರಮುಖ ನಾಲ್ಕು ತಿದ್ದುಪಡಿಗಳನ್ನು ತರಲಾಗಿದೆ ವಿವರಿಸಿದ್ದಾರೆ.
ಯಾವುದೇ ಜಮೀನು ಖಾಸಗಿ ವ್ಯಕ್ತಿಗೆ ಸೇರದೇ ಇದ್ದಲ್ಲಿ, ಅದು ಸರ್ಕಾರಕ್ಕೆ ಸೇರಿದೆ ಎಂಬ ಸಾರಾಂಶವನ್ನು ಕರ್ನಾಟಕ ಭೂ ಕಂದಾಯ ಕಾನೂನಿನ ಕಲಂ 67 ಹೇಳುತ್ತದೆ. ಕೆಲವರು ತಮ್ಮ ಹೆಸರಿಗೆ ಇಂತಹ ಜಮೀನುಗಳ ಖಾತೆ ಮಾಡಿಕೊಡಿ ಎಂದು ತಹಶೀಲ್ದಾರರಿಗೆ ಮನವಿ ಮಾಡುತ್ತಾರೆ. ಆದರೆ, ಅವರ ಬಳಿ ಜಮೀನಿನ ಮಾಲೀಕತ್ವ ನಿರೂಪಿಸುವ ಮೂಲ ದಾಖಲೆ ಅಥವಾ ಸಮರ್ಪಕ ದಾಖಲೆ ಇಲ್ಲದಿದ್ದರೆ ಅವರಿಗೆ ಜಮೀನಿನ ಖಾತೆ ಮಾಡಿಕೊಡುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉಪ ವಿಭಾಗಾಧಿಕಾರಿಗೂ ಅಧಿಕಾರ: ಹಳೆಯ ಕಾನೂನಿನ ಪ್ರಕಾರ ಜಿಲ್ಲಾಧಿಕಾರಿಗಳು ಖಾಸಗಿಯವರಿಗೆ ಮ್ಯುಟೇಷನ್ ಮಾಡಿಕೊಡಲು ಆದೇಶಿಸಿದರೆ ಪ್ರಕರಣದ ಮುಂದಿನ ಅಪೀಲು ನೇರವಾಗಿ ಸಿವಿಲ್ ನ್ಯಾಯಾಲಯಕ್ಕೆ ಹೋಗುತ್ತವೆ. ಇದರಿಂದ ಹೈಕೋರ್ಟ್‌ನಲ್ಲಿ ಸರ್ಕಾರ ಫಜೀತಿಗೆ ಸಿಲುಕಬೇಕಾದ ಪ್ರಸಂಗ ಎದುರಾಗಿದೆ. ಆಗ ಕಾನೂನು ಹೋರಾಟಕ್ಕೆ ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶವೂ ಸಿಗೋದಿಲ್ಲ. ಇದರಿಂದ ಸಾರ್ವಜನಿಕ ಆಸ್ತಿಗಳನ್ನು ಸಂರಕ್ಷಿಸುವುದು ಕಷ್ಟವಾಗಬಹುದು. ಅದಕ್ಕಾಗಿಯೇ ಈಗ ನಾವು ಕಾನೂನಿಗೆ ತಿದ್ದುಪಡಿಗೊಳಿಸಿ ಮೊದಲ ಅಪೀಲನ್ನು ಆಲಿಸುವ ಅಧಿಕಾರವನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಿದ್ದೇವೆ ಎಂದು ವಿವರಣೆ ನೀಡಿದ್ದಾರೆ.
ಹೊಸ ತಿದ್ದುಪಡಿಯ ಪ್ರಕಾರ ಸರ್ಕಾರಕ್ಕೆ ಕಾನೂನು ಹೋರಾಟ ನಡೆಸಲು ಹೆಚ್ಚಿನ ಕಾಲಾವಕಾಶ ಸಿಗಲಿದ್ದು, ಮೊದಲ ಅಪೀಲಿನಲ್ಲಿ ಉಪ-ವಿಭಾಗಾಧಿಕಾರಿಗಳು ತಪ್ಪು ಆದೇಶ ಮಾಡಿದರೂ, ಜಿಲ್ಲಾಧಿಕಾರಿಗಳ ಬಳಿ ಎರಡನೇ ಅಪೀಲು ಹೋಗಬಹುದು. ಮೂರನೇ ಅಪೀಲಿಗೆ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ ಮೊರೆ ಕೂಡ ಹೋಗಬಹುದು ಎಂದು ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.












Click it and Unblock the Notifications