ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದ ಟಿ.ಎ.ನಾರಾಯಣ ಗೌಡ
ಬೆಂಗಳೂರು, ಜನವರಿ 24 : ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಜ.25ರ ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದ್ದಾರೆ. ಕನ್ನಡ ಒಕ್ಕೂಟ ಗುರುವಾರ ಕರ್ನಾಟಕ ಬಂದ್ ಕರೆ ನೀಡಿದೆ.
ಟಿ.ಎ.ನಾರಾಯಣ ಗೌಡ ಅವರು ಬುಧವಾರ ಈ ಕುರಿತು ಮಾಹಿತಿ ನೀಡಿದ್ದಾರೆ. 'ಎಲ್ಲಾ ಜಿಲ್ಲೆಗಳಲ್ಲಿ ಬಂದ್‌ಗೆ ಬೆಂಬಲ ನೀಡಲಾಗುತ್ತದೆ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

'ರಕ್ಷಣಾ ವೇದಿಕೆಯ ಕಾರ್ಯಕರ್ತರು ಎಲ್ಲಾ ಜಿಲ್ಲೆಗಳಲ್ಲಿ ರೈಲುಗಳನ್ನು ತಡೆದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಲಿದ್ದಾರೆ' ಎಂದರು.
ಮಹದಾಯಿ ಯೋಜನೆ ಜಾರಿಗೊಳಿಸಬೇಕು, ವಿವಾದ ಬಗೆಹರಿಸಲು ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಕನ್ನಡ ಒಕ್ಕೂಟ ಜ.25ರ ಗುರುವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದೆ.
ಗುರುವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದೆ. ಅಗತ್ಯ ಸೇವೆಗಳಿಗೆ ಬಂದ್ ನಿಂದ ವಿನಾಯಿತಿ ನೀಡಲಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗುರುವಾರ ಮೈಸೂರಿಗೆ ಆಗಮಿಸಲಿದ್ದಾರೆ, ಪರಿವರ್ತನಾ ಯಾತ್ರೆಯ ಸಮಾವೇಶ ನಡೆಯಲಿದೆಯೇ?, ಇಲ್ಲವೇ ಎಂಬುದು ಇನ್ನೂ ಅಂತಿಮವಾಗಿಲ್ಲ.












Click it and Unblock the Notifications