Suraj Revanna: ಹಾಸನದಲ್ಲಿ ವೈದ್ಯಕೀಯ ಪರೀಕ್ಷೆ ಬೇಡ ಎಂದು ಹಠ ಮಾಡಿದ್ದೇಕೆ ಸೂರಜ್ ರೇವಣ್ಣ ಪ್ರಕರಣದ ಸಂತ್ರಸ್ತ?
ಬೆಂಗಳೂರು, ಜೂನ್. 24: ಎಚ್ ಡಿ ರೇವಣ್ಣ ಕುಟುಂಬಕ್ಕೆ ಒಂದರ ಮೇಲೆ ಒಂದು ಸಂಕಷ್ಟ ಬರುತ್ತಲೆ ಇದೆ. ಇಬ್ಬರು ಮಕ್ಕಳು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಜೆಡಿಎಸ್ ಎಂಎಲ್ ಸಿ ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮತ್ತಷ್ಟು ಟ್ವಿಸ್ಟ್ ಸಿಗುತ್ತಿದೆ.
ಸೂರಜ್ ರೇವಣ್ಣ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸರಿಗೆ 27 ವರ್ಷದ ಯುವಕ ದೂರು ನೀಡಿದ್ದಾರೆ. ಪ್ರಕರಣದ ದೂರು ನೀಡಿರುವ ಸಂತ್ರಸ್ತ ಹಾಸನದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಸಂತ್ರಸ್ತರ ವೈದ್ಯಕೀಯ ಪರೀಕ್ಷೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಹಾಸನದಲ್ಲಿ ನಡೆಯಬೇಕಿದ್ದ ಪರೀಕ್ಷೆಗೆ ಸಂತ್ರಸ್ತ ಒಪ್ಪಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು.

ಹಾಸನ ಬೇಡ.. ಬೆಂಗಳೂರು ಬೇಕು ಎಂದ ಸಂತ್ರಸ್ತ
ಅರಕಲಗೂಡು ಮೂಲದ 27 ವರ್ಷದ ಚೇತನ್ ಕೆಎಸ್ ಎಂಬುವವರು ಸೂರಜ್ ರೇವಣ್ಣ ಅವರು ಜೂನ್ 16 ರಂದು ಹೊಳೆನರಸೀಪುರ ತಾಲೂಕಿನ ತಮ್ಮ ಫಾರ್ಮ್‌ಹೌಸ್‌ನಲ್ಲಿ ತನ್ನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕರೆದಾಗಲೆಲ್ಲ ತಮ್ಮ ಫಾರ್ಮ್‌ಹೌಸ್‌ಗೆ ಬರುವಂತೆ ಬೆದರಿಕೆ ಹಾಕಿದ್ದಾರೆ ಎಂದು ಚೇತನ್ ಆರೋಪಿಸಿದ್ದಾರೆ.
ಇದಾದ ಬಳಿಕ ಹಾಸನದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದಿಲ್ಲ ಎಂದು ಹಠ ಮಾಡಿದ್ದಾರೆ. ಸಂತ್ರಸ್ತ ಪೊಲೀಸರಿಗೆ ಸಲ್ಲಿಸಿದ ಮನವಿಯಲ್ಲಿ, ಆರೋಪಿಯ ಕುಟುಂಬವು ಪ್ರಭಾವ ಬೀರಬಹುದಾದ ಹಾಸನದ ಸಿಬ್ಬಂದಿಯ ಮೇಲೆ ತನಗೆ ನಂಬಿಕೆಯಿಲ್ಲ ಎಂದು ಹೇಳಿದ್ದು, ಇಲ್ಲಿ ವೈದ್ಯಕೀಯ ಪರೀಕ್ಷೆ ಬೇಡ ಎಂದಿದ್ದಾರೆ.

ಹೀಗಾಗಿ ಬೆಂಗಳೂರಿನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು. ಪೊಲೀಸರು ಶನಿವಾರ ರಾತ್ರಿ ಅವರನ್ನು ಹಾಸನದಿಂದ ರಾಜಧಾನಿಗೆ ಕರೆದುಕೊಂಡು ಬಂದಿದ್ದರು. ಸೋಮವಾರ ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್ ರೇವಣ್ಣ ಅವರನ್ನು 42ನೇ ಎಸಿಎಂಎಂ ಕೋರ್ಟ್ ಭಾನುವಾರದಂದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಮುಂದಿನ ವಿಚಾರಣೆ ಜುಲೈ 6 ರಂದು ನಡೆಯಲಿದೆ. ಇಂದು ಅಪರಾಧ ತನಿಖಾ ಇಲಾಖೆ (ಸಿಐಡಿ) ಕಸ್ಟಡಿಗಾಗಿ ನ್ಯಾಯಾಲಯವನ್ನು ಸಂಪರ್ಕಿಸುವ ಸಾಧ್ಯತೆಯಿದೆ. ಇನ್ನು, ಹಾಸನದಲ್ಲಿ ಪೊಲೀಸರು ಆರೋಪಿ ಸೂರಜ್ ರೇವಣ್ಣನನ್ನು ಬಂಧಿಸಿ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು.












Click it and Unblock the Notifications